ತುಮಕೂರು: ಮೈತ್ರಿ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿಳಿದ ಹಾಗೆ ನಡೆದಿದ್ದರೆ ಯಾವ ಇಲಾಖೆಯಲ್ಲಿ ನಡೆದಿತ್ತು ಅಥವಾ ಯಾವ ಸಚಿವರು ಕಮಿಷನ್ ತೆಗೆದುಕೊಂಡಿದ್ದರು ಎಂಬುವುದನ್ನು ಅವರೇ ಹೇಳಬೇಕು ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆದಿತ್ತು ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆದಿಲ್ಲ ಎಂದು ನಾವು ತಿಳಿದಿದ್ದೇವೆ. ಅಂದಿನ ಸಿಎಂ ಎಚ್‌ಡಿಕೆ ಆ ಮಾತು ಹೇಳಬೇಕು ಎಂದರೆ ಜವಾಬ್ದಾರಿಯಿಂದ ಹೇಳಿದ್ದಾರೆ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಕಮಿಷನ್ ಬಗ್ಗೆ ಅವರು ಬಹಿರಂಗಪಡಿಸಬಹುದು. ಆ ಸಂದರ್ಭ ಬಂದಾಗ ಅದಕ್ಕೆ ಉತ್ತರ ಕೊಡೋಣ, ಕಾಂಗ್ರೆಸ್‌ನ ಯಾವುದೇ ಸಚಿವರು ಪರ್ಸೆಂಟೇಜ್ ದಂಧೆ ಮಾಡಿಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ಮಾಡಬೇಕು. ನಾವು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೂ ತನಿಖೆಗಾಗಿ ಆಗ್ರಹ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಿ, ಯಾರು ಬೇಡ ಎನ್ನುತ್ತಾರೆ ಎಂದರು.
ಇದನ್ನೂ ಓದಿ | ಗುಲಾಂ ನಬಿ ಆಜಾದ್ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠಕ್ಕೆ ಕಿಡಿ
ತುಮಕೂರು ವಿಶ್ವವಿದ್ಯಾಲಯಲ್ಲಿ ಸಾವರ್ಕರ್ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪನೆ ವಿಚಾರ ಬಗ್ಗೆ ಬಿಜೆಪಿ ಸರ್ಕಾರ ಏನು ಮಾಡುತ್ತದೋ ನೋಡಬೇಕು. ಅವರ ಆಡಳಿತಕ್ಕೆ ತಕ್ಕ ಪ್ರತ್ಯುತ್ತರವನ್ನು 2023ರ ಚುನಾವಣೆಯಲ್ಲಿ ರಾಜ್ಯದ ಜನ ಕೊಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ, ಸಿಂಡಿಕೇಟ್ ಸದಸ್ಯರು ಈ ಕುರಿತು ತಿರ್ಮಾನ ತೆಗೆದುಕೊಳ್ಳಬೇಕು. ಅವರಿಗೆ ಸರ್ಕಾರ ಅಥವಾ ಬಿಜೆಪಿ ಮುಖ್ಯಸ್ಥರು ಸೂಚನೆ ಕೊಟ್ಟಿದ್ದರೆ ಅದನ್ನು ಪಾಲಿಸಲೇಬೇಕಾಗುತ್ತದೆ. ರಾಜಕೀಯ ಒತ್ತಡದಿಂದ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಕಿಡಿಕಾಡಿದರು.
ತುಮಕೂರು ವಿಶ್ವವಿದ್ಯಾಲಯವನ್ನು ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಶ್ರಮಿಸಿ, ಹೆಚ್ಚು ಅನುದಾನ ಕೊಡಬೇಕು ಎಂದು ಹೋರಾಟ ಮಾಡಿದ್ದೆ. ಈಗಲೂ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲೇ ಹೊಸ ಕ್ಯಾಂಪಸ್‌ಗೆ ಹೋಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪಗೆ ಪಕ್ಷದಲ್ಲಿ ಗೌರವ ಸಿಗುತ್ತಿಲ್ಲವೇ ಎಂಬ ಪ್ರಶ್ನೆಗೆ ಸ್ಪಂದಿಸಿ, ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಯಾವತ್ತೂ ಮುನಿಯಪ್ಪ ಅವರು ನಮ್ಮ ಹಿರಿಯ ನಾಯಕರು. 7 ಬಾರಿ ಲೋಕಸಭಾ ಸದಸ್ಯರಾಗಿದ್ದವರನ್ನು ಗೌರವದಿಂದ ಕಾಣುತ್ತೇವೆ ಎಂದರು.
ಇದನ್ನೂ ಓದಿ | ಗುಲಾಂ ನಬಿ ಆಜಾದ್ ಬಳಿಕ ಕೆ.ಎಚ್. ಮುನಿಯಪ್ಪ ಕಾಂಗ್ರೆಸ್ ಬಿಡ್ತಾರಾ?: ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ