ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (B C Nagesh) ಅವರು ಶಿಕ್ಷಣ ಇಲಾಖೆ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಕಾಳಜಿ ತೋರಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ. ಸೋತ ನಂತರ ಮಾಜಿ ಸಚಿವರಿಗೆ ಜವಾಬ್ದಾರಿ ಗೋಚರಿಸಿದೆ. ಹಾಗೆಯೇ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಆಲಿಸಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಮನವಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಮ್ಸ್, ನಗರ, ಪಟ್ಟಣಗಳಲ್ಲಿ ಶೇ. 83ಕ್ಕಿಂತ ಹೆಚ್ಚು ಹಾಗೂ ರಾಜ್ಯಾದ್ಯಂತ ಶೇ.55ಕ್ಕಿಂತ ಹೆಚ್ಚು ಸಹಭಾಗಿತ್ವ ಹೊಂದಿರುವಂತಹ ಶೇ.95ಕ್ಕಿಂತ ಹೆಚ್ಚು ಶಾಲೆಗಳಿವೆ. ಇವುಗಳು ಸರ್ಕಾರದ ತಲಾವಾರು ಖರ್ಚು ಮಾಡುತ್ತಿರುವುದರಕಿಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಹಾಗೂ ಮೂಲಭೂತ ಸೌಲಭ್ಯದೊಂದಿಗೆ ಶಿಕ್ಷಣವನ್ನು ನೀಡುತ್ತಿರುವಂತಹ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ರಾಜ್ಯ ಸರ್ಕಾರವು ತಾಳ್ಮೆಯಿಂದ ಆಲಿಸಿ ನ್ಯಾಯ ಒದಗಿಸಬೇಕಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಕೋರಿದೆ.
ಇದನ್ನೂ ಓದಿ | Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್, ಡಯಾಲಿಸಿಸ್ ಟೆಂಡರ್ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ
ರಾಜಕೀಯ ಪ್ರಚಾರಕ್ಕಾಗಿ ಕಾಳಜಿ
ಮಾಜಿ ಸಚಿವ ಬಿ.ಸಿ.ನಾಗೇಶ್ ಅವರು ಕೋವಿಡ್ ಸಂದರ್ಭದ ಮಕ್ಕಳ ಕಲಿಕೆಗೆ ಹಾನಿ ಉಂಟಾಗಿರುವುದರ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರಚಾರಕ್ಕೋಸ್ಕರ ಅವರು ಕಲಿಕೆಯ ಬಗ್ಗೆ ಕಾಳಜಿ ತೋರಿಸಿದ್ದಾರೆ. ಈ ಹಿಂದೆ ತಾವೇ ಶಿಕ್ಷಣ ಮಂತ್ರಿಗಳಾಗಿದ್ದಾಗಅಂದಿನ ವಿಶೇಷ ರಾಜ್ಯ ಮಟ್ಟದ ತಜ್ಞರ ತಂಡ ನೀಡಿದಂತಹ ಕಲಿಕಾ ಚೇತರಿಕೆಯ ವರದಿ ಬಗ್ಗೆ ಅವರು ಗಮನ ಹರಿಸಲೇ ಇಲ್ಲ ಎಂದು ಕ್ಯಾಮ್ಸ್ ಅಸಮಾಧಾನ ಹೊರಹಾಕಿದೆ.
ನಿರ್ಲಕ್ಷ್ಯ ಧೋರಣೆ
ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಹತ್ತಾರು ಬಾರಿ ಸಮಸ್ಯೆಗಳನ್ನು ತೆಗೆದುಕೊಂಡು ಹೋದಾಗ ಗಮನ ಕೊಡಲಿಲ್ಲ ಎಂದು ಮಾಜಿ ಸಚಿವ ಬಿ.ಸಿ. ನಾಗೇಶ್ ಅವರ ಮೇಲೆ ಕ್ಯಾಮ್ಸ್ ಹರಿಹಾಯ್ದಿದೆ. ಈ ಹಿಂದೆ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (KAMS) ಹಾಗೂ ಕರ್ನಾಟಕ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (KUSMA) ಪದಾಧಿಕಾರಿಗಳು, ಶಿಕ್ಷಣ ಸಚಿವರನ್ನು ಭೇಟಿಯಾಗಿ ಸಮಸ್ಯೆಗಳನ್ನು ಹೇಳಲು ಪ್ರಾರಂಭಿಸಿದಾಗ ಸಮಸ್ಯೆಗಳನ್ನು ಕೇಳುವುದು ಬಿಟ್ಟು ಖಾಸಗಿ ಶಾಲೆಗಳ ಬಗ್ಗೆ ಮಾತನಾಡಿದ್ದರು. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿರಲಿಲ್ಲ ಎಂದು ಬಿ.ಸಿ.ನಾಗೇಶ್ ವಿರುದ್ಧ ಕ್ಯಾಮ್ಸ್ ಆರೋಪಿಸಿದೆ.
ಇದನ್ನೂ ಓದಿ | Guest Lecturer: 13,000 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಎದುರಾಗಿದೆ ಕಾನೂನು ಸಮಸ್ಯೆ!
ಅಧಿಕಾರದಲ್ಲಿದ್ದಾಗ ಬರೀ ಪಠ್ಯ ಪುಸ್ತಕ ಪರಿಷ್ಕರಣೆ, ಸಮವಸ್ತ್ರ, ಹಿಜಾಬ್ ಸಮಸ್ಯೆ, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮಧ್ಯೆದ ಗೊಂದಲಗಳಿದ್ದರೂ ಮಾಜಿ ಶಿಕ್ಷಣ ಸಚಿವರು, ಈಗ ಯಾವ ನೈತಿಕತೆಯಲ್ಲಿ ಪತ್ರವನ್ನು ಬರೆದಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿಗೆ ಬರಲಿಲ್ಲ ಎಂದೂ ಒಕ್ಕೂಟ ಬೇಸರವನ್ನು ವ್ಯಕ್ತಪಡಿಸಿದೆ.