ಹಾಸನ: ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿವೆ. ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿವೆ. ಬಿಜೆಪಿ ನಾಯಕರ ಜತೆ ಸಖ್ಯ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ನಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್‌ನ ಅಪ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ 104 ಸ್ಥಾನ ಗೆದ್ದುಕೊಂಡಿತು. ಇದನ್ನು ಅಲ್ಪಸಂಖ್ಯಾತರು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಏನಾಯಿತು ಎಂಬುದು ಗೊತ್ತಾಗಬೇಕು. ನನಗೆ ಇಂಧನ ಖಾತೆ ಕೊಡಬೇಕು ಎಂದು ತೀರ್ಮಾನವಾಗಿತ್ತು. ಆದರೆ, ಆ ಖಾತೆಯನ್ನು ನನಗೆ ನೀಡಲಾಗಿಲ್ಲ. ಅದನ್ನು ತಡೆದವರು ಯಾರು ಎಂದು ಕಾಂಗ್ರೆಸ್ ನಾಯಕರು ಹೇಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | ಕೆ.ಎನ್. ರಾಜಣ್ಣ ಮಾತಿಗೆ ತಿರುಗಿಬಿದ್ದ ಜೆಡಿಎಸ್ ನಾಯಕರು
14 ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಯಾರು? ನಾವು ಕಳುಹಿಸಿದ್ದೇವಾ ಎಂದು ಪ್ರಶ್ನಿಸಿದ ಎಚ್.ಡಿ.ರೇವಣ್ಣ, ತೆಲಂಗಾಣದಲ್ಲಿ ಡಬಲ್ ಇಂಜಿನ್ ಸರ್ಕಾರ ಬರುತ್ತದೆ ಎಂದು ಪ್ರಧಾನಿ ಅವರೇ ಹೇಳಿದ್ದಾರೆ. ಪ್ರಾದೇಶಿಕ ಪಕ್ಷ ಮುಗಿಸಬೇಕು ಎನ್ನುವುದು ಇವರ ಉದ್ದೇಶವೇ?. ಹಾಸನ ಜಿಲ್ಲೆಗೆ ಕಾಂಗ್ರೆಸ್, ಬಿಜೆಪಿ ಕೊಡುಗೆ ಏನು? ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಜಿಲ್ಲೆಯಲ್ಲಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.
ನಾವು ಕೊಟ್ಟ ಯೋಜನೆಗಳನ್ನು ಬಿಜೆಪಿ ರದ್ದು ಮಾಡಿದೆ. ಜನ ಇಲ್ಲದಿರುವ ಕಾರಣ ತಮ್ಮ ಬಸ್‌ಗೆ ಯಾವ ಪಾರ್ಟಿಯವರಾದರೂ ಬಂದು ಹತ್ತಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ರೇವಣ್ಣ, ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಜೆಡಿಎಸ್ ಸೇರುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲನ್ನು ಬೇಕಾದರೂ ಬಡಿಯುತ್ತಾರೆ. ಈಗ ಇರುವುದು ಹಿಂದಿನ ಕಾಂಗ್ರೆಸ್ ಅಲ್ಲ, ಇದು ನಕಲಿ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | Earthquake in Karnataka |ವಿಜಯಪುರ, ಕೊಡಗು, ಮಂಗಳೂರಿನಲ್ಲಿ ಮತ್ತೆ ಅದುರಿದ ಭೂಮಿ