Site icon Vistara News

ಪರ್ಸೆಂಟೇಜ್ ಆರೋಪ: ಗುತ್ತಿಗೆದಾರರು ಹೆಸರು ಬಹಿರಂಗಪಡಿಸಲಿ ಎಂದ ಮಾಜಿ ಸಚಿವ ಈಶ್ವರಪ್ಪ

ಈಶ್ವರಪ್ಪ

ಶಿವಮೊಗ್ಗ: ಯಾವ ಇಲಾಖೆ, ಯಾವ ಮಂತ್ರಿ, ಯಾವ ಶಾಸಕ ಗುತ್ತಿಗೆದಾರರಿಂದ ಪರ್ಸೆಂಟೇಜ್ ಕೇಳಿದ್ದರು, ಯಾರಾದರೂ ಕೊಟ್ಟಿದ್ದರಾ ಎನ್ನುವ ಪ್ರಶ್ನೆ ಈಗ ಸೃಷ್ಟಿಯಾಗಿದೆ. ಯಾರದರೂ ಪರ್ಸೆಂಟೇಜ್ ಕೊಟ್ಟಿದ್ದರೇ ಅದನ್ನು ಮೊದಲು ಬಹಿರಂಗಪಡಿಸಲಿ, ಇಲ್ಲವಾದರೆ ಇದು ಕೇವಲ ರಾಜಕೀಯ ವ್ಯಕ್ತಿಗಳ ಹೇಳಿಕೆ ರೀತಿ ಆಗುತ್ತದೆ ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದ್ದಾರೆ.

40 ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ಕೇಳಿರುವ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪರ್ಸೆಂಟೇಜ್‌ ನೀಡಿರುವ ಗುತ್ತಿಗೆದಾರರು ಈಗ ದಾಖಲೆ ನೀಡಬೇಕು, ಇಲ್ಲದಿದ್ದರೆ ಅನ್ಯವ್ಯಕ್ತಿಗಳ ರಾಜಕೀಯ ಕುಮ್ಮಕ್ಕಿನಿಂದ ಪತ್ರ ಬರೆದರಾ ಎಂಬ ಪ್ರಶ್ನೆ ಜನರಿಗೆ ಎದುರಾಗುತ್ತದೆ. ರಾಜಕೀಯ ದಾಳಕ್ಕೆ ಗುತ್ತಿಗೆದಾರರ ಸಂಘ ಇದೆಯೋ ಎಂಬ ಅನುಮಾನ ಆರಂಭವಾಗುತ್ತದೆ. ಗುತ್ತಿಗೆದಾರರ ಸಂಘದ ಕೆಂಪಣ್ಣ ಬಳಿ ದಾಖಲೆಯಿದೆ ಎಂದು ಬಹಳ ಹಿಂದಿನಿಂದ ಹೇಳುತ್ತಾ ಇದ್ದಾರೆ. ಸಿಎಂ ಸಭೆಯಲ್ಲಿ ಅವರು ಈ ಬಗ್ಗೆ ಬಾಯಿ ಬಿಟ್ಟಿಲ್ಲ, ಕಮಿಷನ್ ಕೊಟ್ಟು ಕೆಲಸ ಪಡೆದ ಗುತ್ತಿಗೆದಾರರು ಸಾಕ್ಷ್ಯ ಬಹಿರಂಗ ಪಡಿಸಲಿ ಎಂದು ಹೇಳಿದರು.

ಗುತ್ತಿಗೆದಾರರು ಸಿಎಂ ಬಳಿ ಹೇಳಿಲ್ಲ, ಪ್ರದಾನಿ ಕಚೇರಿಯನ್ನಾದರೂ ನಂಬಿ ಹೇಳಲಿ. ದಾಖಲೆ ಇವರ ಬಳಿ ಇಟ್ಟುಕೊಂಡು ಕೂತರೆ ಯಾವುದೇ ಲಾಭ ಇಲ್ಲ, ಇಲ್ಲವಾದರೆ ಇದು ಕೇವಲ ರಾಜಕೀಯ ಷಡ್ಯಂತ್ರವಾಗಿ ಉಳಿಯುತ್ತದೆ. ಸತ್ಯಾಂಶ ಇದ್ದರೇ ವಿಷಯ ಎಲ್ಲವೂ ಹೊರಗೆ ಬರುತ್ತದೆ ಎಂದರು. ಕಮಿಷನ್‌ ಬಗ್ಗೆ ಡಿ.ಕೆ‌.ಸುರೇಶ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಅವರಿಗೆ‌ ಈ ಕುರಿತು ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಅವರ ಕುಟುಂಬವೇ ಇ.ಡಿ. ತನಿಖೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಕೋತಿ ತಾನು ತಿಂದು ಬೇರೆಯವರ ಮುಖಕ್ಕೆ ಒರೆಸಿತು ಎನ್ನುತ್ತಾರಲ್ಲ ಹಾಗಾಗಿದೆ ಇವರ ಸ್ಥಿತಿ ಎಂದರು.

ಕಮಿಷನ್‌ ಪಡೆದಿದ್ದಾರೆ ಎಂದು ಆರೋಪಿಸಿ ನನ್ನ ಬಗ್ಗೆ ಸಂತೋಷ್ ಕುಮಾರ್ ಹೇಳಿಕೆ ಕೊಟ್ಟಿದ್ದರು. ನಾನು ತಕ್ಷಣವೇ ಆತನ ವಿರುದ್ದ ಕೇಸ್ ಹಾಕಿದೆ, ದುರಾದೃಷ್ಟವಶಾತ್ ಆತ ಸತ್ತು ಹೋದ. ನಾನು ಕಮಿಷನ್‌ ಪಡೆಯದಿದ್ದರೂ ನಾನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದೆ, ತನಿಖೆ ನಡೆಯುತ್ತಿದೆ ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ. ಇಲ್ಲದಿದ್ದರೆ ತಪ್ಪಿತಸ್ಥ ಅಲ್ಲ ಎಂದು ಆರೋಪದಿಂದ ಹೊರಗೆ ಬರುತ್ತೇನೆ ಎಂದು ಹೇಳಿದರು.

ಪ್ರಧಾನಿಗೆ ಕೊಲೆ ಬೆದರಿಕೆಯನ್ನು ಮುಸ್ಲಿಂ ರಾಷ್ಟ್ರಗಳು ಖಂಡಿಸಲಿ
ರಾಜಸ್ಥಾನದ ಉದಯಪುರದಲ್ಲಿ ಪ್ರವಾದಿ ಪೈಗಂಬರ್‌ ವಿರುದ್ಧದ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹೇಳಿಕೆ ಬೆಂಬಲಿಸಿದ ಹಿಂದೂ ವ್ಯಕ್ತಿಯ ಕೊಲೆ ಹಾಗೂ ಪ್ರಧಾನಿಗೆ ಕೊಲೆ ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಉದಯಪುರದಲ್ಲಿ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು. ಹಾಗೆಯೇ ಮೋದಿಗೆ ಕೊಲೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ಹೇಳಿಕೆಯನ್ನು ಮುಸ್ಲಿಂ ರಾಷ್ಟ್ರಗಳು ಸೇರಿ ಎಲ್ಲರೂ ಖಂಡಿಸಬೇಕು, ಹಿಂದೂ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ | 40% ಕಮಿಷನ್‌ ಅಂಗಳಕ್ಕೆ ಮೋದಿ ಕಚೇರಿ ಎಂಟ್ರಿ: ಗುತ್ತಿಗೆದಾರರಿಗೆ ಖುಷಿ, ಸರ್ಕಾರಕ್ಕೆ ನಡುಕ

Exit mobile version