ಹಾವೇರಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಾನಗಲ್ ಪಟ್ಟಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಅವರು ಜಾತ್ಯತೀತ ಜನತಾ ದಳ (Karnataka Election) ಸೇರ್ಪಡೆಯಾಗಿದ್ದಾರೆ. ಈ ವೇಳೆ 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದೆ, ಆದರೆ ಈ ಬಾರಿ ಟಿಕೆಟ್ ಕೊಡದೆ ತಮಗೆ ಕಾಂಗ್ರೆಸ್ ವರಿಷ್ಠರು ಅನ್ಯಾಯ, ಮೋಸ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದರು. ಬಳಿಕ ಅವರನ್ನು ಎಚ್‌ಡಿಕೆ ಸಮಾಧಾನಪಡಿಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಮನೋಹರ್ ತಹಶೀಲ್ದಾರ್ ಅವರು, ಇವತ್ತು ನನ್ನ ಜೀವನದ ಬದಲಾವಣೆಯ ದಿನ. 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದೆ. ಶ್ರದ್ಧಾಭಕ್ತಿಯಿಂದ ಪಕ್ಷದ ವರ್ಚಸ್ಸಿಗೆ ಕಳಂಕ ಬಾರದಂತೆ ನಡೆದುಕೊಂಡು ಬಂದೆ. 2018ರಲ್ಲಿ ನಮಗೆ ಅವಕಾಶ ತಪ್ಪಿಸಿ ಧಾರವಾಡ ಜಿಲ್ಲೆಯವರಿಗೆ ಮಣೆ ಹಾಕಿದರು. ನನಗೆ ಅವಕಾಶ ಕೊಡಿ ಅಂತ ಕೇಳಿದರೂ ಕಾಂಗ್ರೆಸ್ ವರಿಷ್ಠರ ಮನಸು ಕರಗಲಿಲ್ಲ. ಉಪ ಚುನಾವಣೆಯಲ್ಲಿಯು ನನ್ನ ಮೂಗಿಗೆ ತುಪ್ಪ ಸವರಿದರು. ನಾನು ತಿರುಗಿ ಬಿದ್ದಿದ್ದರೆ ಅವರ ಮಾನ ಹರಾಜು ಆಗುತ್ತಿತ್ತು. ನನಗೆ ಮೋಸ ಮಾಡಿದರು, ಅನ್ಯಾಯ ಮಾಡಿದರು ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
ಇದನ್ನೂ ಓದಿ | Karnataka Election 2023 : ಕಾಂಗ್ರೆಸ್ ಎರಡನೇ ಪಟ್ಟಿ ಪ್ರಕಟ; 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ
ಸ್ವಾಭಿಮಾನದ ಕಿಚ್ಚು ಹಚ್ಚಿ ಗೆಲ್ಲುತ್ತೇವೆ
ದುಃಖದಿಂದ ಭಾರವಾದ ಮನಸ್ಸಿನಿಂದ ಕಾಂಗ್ರೆಸ್‌ಗೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಕಣ್ಣೀರು ಹಾಕುತ್ತಲೇ ಮಾತನಾಡಿದ ಅವರು, ಕುಮಾರಸ್ವಾಮಿ ನಿಜವಾದ ಮಣ್ಣಿನ ಮಗ, ಬೂಟಾಟಿಕೆಯ ಮಗ ಅಲ್ಲ. ಅವರು ನನಗೆ ರಾಜಕೀಯ ಮರುಜನ್ಮ ಕೊಟ್ಟಿದ್ದಾರೆ. ಈ ತಾಲೂಕಿನಲ್ಲಿ ಅಭಿವೃದ್ಧಿ ಆಗಿದ್ದರೆ ಅದು ನನ್ನಿಂದ ಆಗಿದೆ, ದಿವಂಗತ ಸಿ.ಎಂ. ಉದಾಸಿಯವರಿಂದ ಆಗಿದೆ, ಬೇರೆ ಯಾರಿಂದಲು ಆಗಿಲ್ಲ. ಸ್ವಾಭಿಮಾನದ ಕಿಚ್ಚು ಹಚ್ಚಿ 2023ರ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಹೇಳಿದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಈ ವಯಸ್ಸಿನಲ್ಲಿ ಮನೋಹರ್ ತಹಶೀಲ್ದಾರ್ ಅವರ ಮನಸ್ಸಿಗೆ ಆಘಾತವಾಗಿದೆ. ಅವರ ಪರವಾಗಿ ಪ್ರಚಾರಕ್ಕೆ ಮತ್ತೆ ಬರುತ್ತೇನೆ. ಮತ ಕೊಟ್ಟಿಲ್ಲ ಎಂದು ನಾನು ರೈತರನ್ನು ಕೈ ಬಿಟ್ಟಿಲ್ಲ. ಸ್ವತಂತ್ರ ಸರ್ಕಾರ ಬರದ ಹಿನ್ನೆಲೆಯಲ್ಲಿ ಮತ್ತೊಂದು ಪಕ್ಷದ ಜತೆ ಕೈ ಜೋಡಿಸಿದೆ. ಬಿಜೆಪಿಯವರು ನನ್ನ ಸರ್ಕಾರ ತೆಗೆದು ಅಧಿಕಾರಕ್ಕೆ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಡತನ ಏನು ಎಂಬುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಮೋದಿಯವರು ಇಷ್ಟು ಸಲ ರಾಜ್ಯಕ್ಕೆ ಬಂದರೂ ಅವರ ಬಳಿ ಉತ್ತರ ಇಲ್ಲ. ಹೀಗಾಗಿ ನೀವು ನನಗೆ ಐದು ವರ್ಷ ಆಡಳಿತ ನೀಡಬೇಕು ಎಂದು ಕೋರಿದರು.
ಮುಸ್ಲಿಮರಿಗೆ ದೇವೇಗೌಡರು ಕೊಟ್ಟ ಶೇ.4 ಮೀಸಲಾತಿಯನ್ನು ತೆಗೆದು ಹಾಕಿದ್ದಾರೆ. ಕಾಂಗ್ರೆಸ್, ಬಿಜೆಪಿ ನಿಮ್ಮ ಬದುಕನ್ನು ಹಾಳು ಮಾಡುತ್ತಿದ್ದಾರೆ, ನಿಮ್ಮ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಮೋದಿಗೆ ಚಿಂತೆ ಇದೆಯೇನು, ಅವರಿಗಂತೂ ಮದುವೇನೆ ಆಗಿಲ್ಲ. ಅವರದು ಗುಜರಾತ್ ಮಾಡೆಲ್, ನಮ್ಮ ಊರಲ್ಲಿ ಪಾನಿಪುರಿ ಮಾರುತ್ತಿದ್ದವನು ಗುಜರಾತ್‌ನವನು. ಕರ್ನಾಟಕದವರಾರು ಗುಜರಾತ್‌ಗೆ ಹೋಗಿಲ್ಲ. ಸಿದ್ದರಾಮಯ್ಯಗೆ ಸೋನಿಯಾಗಾಂಧಿ ಚಿಂತೆ, ಬೊಮ್ಮಾಯಿಗೆ ಮೋದಿ ಚಿಂತೆ. ಇವರಿಗೆ ಇರುವುದು ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ಎಂದರೆ ಸೆರಗು, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ ಸೆರಗು ಹಾಕಿದ್ದರು. ಹೆಣ್ಣಿಗೆ ಸೆರೆಗೇ ಚಂದ ಎಂದು ಹಿಜಾಬ್ ನಿಷೇಧ ಮಾಡಬೇಕು ಎಂದು ಹೇಳುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಶಿವಕುಮಾರ್ ಅದೊಂದು ಹುಚ್ಚಮುಂಡೆದು, ಹಾನಗಲ್ ಮಾನ ಹೋಯ್ತು ಅಂತ ಶ್ರೀನಿವಾಸ ಮಾನೆಗೆ ಟಿಕೆಟ್ ಕೊಟ್ಟಾಗಲೇ ಹೇಳಿದೆ. ಜಗನ್ನಾಥ ಜೋಶಿಯವರು ನಿಜವಾದ ಆರ್‌ಎಸ್‌ಎಸ್. ಅವರಿಗೆ ತಿರುಗಾಡಲು ಚಪ್ಪಲಿ ಇರಲಿಲ್ಲ, ಅಂತಹವರ ಕಾಲ ಚಪ್ಪಲಿಗೆ ಪ್ರಲ್ಹಾದ್ ಜೋಶಿ ಸಮ ಅಲ್ಲ. ಮೇ 18ಕ್ಕೆ ಕುಮಾರಸ್ವಾಮಿ ವಿಧಾನಸೌದದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ | Karnataka Election: 23 ಹೊಸ ಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್: ಭಾವನಾ ವಿಫಲ ಪ್ರಯತ್ನ; ಅಖಂಡ ಇನ್ನೂ ಅತಂತ್ರ
ಶ್ರೀನಿವಾಸ ಮಾನೆ ನಿನಗೆ ಉಪ್ಪು ತಿಂದಿದ್ದ ನೆನಪು ಇದ್ದಿದ್ದರೆ, ಉಪಕಾರ ತೀರಿಸಬೇಕಿತ್ತು. ಹುಚ್ಚಮುಂಡೆವಾ, ಮನೋಹರ್ ತಹಶೀಲ್ದಾರ್ ಮನೆಗೆ ಏನಾದರೂ ಇಟ್ಟು ಹೋಗಬೇಕು, ತಗೊಂಡು ಹೋಗಲು ಏನು ಇಲ್ಲ. ನಮ್ಮ ಹತ್ರ ಪಾಪದ ದುಡ್ಡು ಇಲ್ಲ. ಕಾಂಗ್ರೆಸ್, ಬಿಜೆಪಿ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು ಎಂದು ಮನೋಹರ್ ತಹಶೀಲ್ದಾರ್ ಮನೆ ಮೇಲೆ ಎಫ್‌ಎಸ್‌ಟಿ ಅಧಿಕಾರಿಗಳ ದಾಳಿ ಬಗ್ಗೆ ಕಿಡಿ ಕಾರಿದರು.