ಬಾಗಲಕೋಟೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ತಾಯಿ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಶಿಲಾಬಾಯಿ (78) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸುಶಿಲಾಬಾಯಿ ಅವರು ಕಳೆದ 10 ದಿನಗಳಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪತಿ ರುದ್ರಪ್ಪ ನಿರಾಣಿ, ಐವರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಐವರು ಸೊಸೆಯಂದಿರು ಹಾಗೂ 14 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಸವಹಂಚಿನಾಳ ಗ್ರಾಮದಲ್ಲಿ ನೆಲೆಸಿದ್ದರು. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಬಸವಹಂಚಿನಾಳದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಬಿ.ವೈ.ವಿಜಯೇಂದ್ರ ಸಂತಾಪ
ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ತಾಯಿ ಸುಶೀಲಾ ಬಾಯಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕೃಷಿ ಪ್ರಧಾನ ನಿರಾಣಿ ಪರಿವಾರದ ಮನೆಯೊಡತಿಯಾಗಿದ್ದ ಅವರಿಗೆ, ಪತಿ, 5 ಜನ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುವರ್ಗವಿದೆ. ಧಾರ್ಮಿಕ ಹಿನ್ನೆಲೆಯ ಅವರ ಅಗಲುವಿಕೆಯಿಂದ ಒಬ್ಬ ಹಿರಿಯರನ್ನು ಕಳಕೊಂಡಂತಾಗಿದೆ ಎಂದು ತಿಳಿಸಿದ್ದಾರೆ. ಮೃತರ ಕುಟುಂಬ, ಬಂಧು ಮಿತ್ರರಿಗೆ ದೇವರು ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ; ಅಲ್ಲದೆ ಅವರಿಗೆ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ | Road Accidents: ಸಂಕ್ರಮಣದ 24 ಗಂಟೆಯಲ್ಲಿ 9 ಭೀಕರ ಅಪಘಾತ; 15 ಮಂದಿ ಸಾವು