ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಮತ್ತೆರಡು ವಿಕೆಟ್ ಪತನವಾಗಿವೆ. ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕರಾದ ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ ಮತ್ತು ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು ಕಾಂಗ್ರೆಸ್ (Operation Hasta) ಸೇರ್ಪಡೆಯಾಗಲು ತೀರ್ಮಾನಿಸಿದ್ದಾರೆ.
ನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾಜಿ ಶಾಸಕರಾದ ಎಂ.ಪಿ. ಕುಮಾರಸ್ವಾಮಿ ಮತ್ತು ರಾಮಪ್ಪ ಲಮಾಣಿ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಈ ಇಬ್ಬರು ನಾಯಕರು. ಇದೀಗ ಅಧಿಕೃತವಾಗಿ ಬಿಜೆಪಿ ತೊರೆಯುವುದಾಗಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಬದಲಿಗೆ ದೀಪಕ್ ದೊಡ್ಡಯ್ಯಗೆ ಟಿಕೆಟ್ ನೀಡಲಾಗಿತ್ತು. ಅದೇ ರೀತಿ ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ಹಾಲಿ ಶಾಸಕ ರಾಮಪ್ಪ ಲಮಾಣಿ ಬದಲಿಗೆ ಚಂದ್ರು ಲಮಾಣಿಗೆ ಟಿಕೆಟ್ ನೀಡಲಾಗಿತ್ತು. ಮೂಡಿಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹಾಗೂ ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ ಗೆಲುವು ಪಡೆದಿದ್ದಾರೆ.
ಇದನ್ನೂ ಓದಿ | Karnataka Politics : ಕಳ್ಳತನ ಆಗಿರೋ ಮನೆಗೆ ಮತ್ತೆ ಹಣ ಹಾಕ್ತಾರಾ? ಅನುದಾನ ವಾಪಸ್ ಸಮರ್ಥಿಸಿಕೊಂಡ ಕುಸುಮಾ!
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಇಬ್ಬರು ನಾಯಕರು, ಇದೀಗ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.