ಬೆಂಗಳೂರು: ಕಳೆದ ಒಂದು ವಾರದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Deve Gowda) ಅವರು ಸೋಮವಾರ (ಮಾರ್ಚ್ 6) ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.
ವಯೋಸಹಜವಾದ ಕೆಲವು ಸಮಸ್ಯೆಗಳು ಮತ್ತು ಪ್ರಮುಖವಾಗಿ ಮೊಣಕಾಲು ನೋವಿನ ಚಿಕಿತ್ಸೆಗಾಗಿ ಮಾಜಿ ಪ್ರಧಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಫೆಬ್ರವರಿ 28ರಿಂದ ಅವರು ಆಸ್ಪತ್ರೆಯಲ್ಲಿದ್ದರು. ಅಂದು ವೈದ್ಯರ ಸಲಹೆಯ ಮೇರೆಗೆ ದೇವೇಗೌಡರು ಆಸ್ಪತ್ರೆಗೆ ಸೇರಿದ್ದರು.
ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ದೇವೇಗೌಡರು ಪ್ರಚಾರದ ಕಣಕ್ಕೆ ಇಳಿಯುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಆಸ್ಪತ್ರೆ ಸೇರಿದ್ದು ಕೆಲವರಿಗೆ ನಿರಾಸೆ ಉಂಟು ಮಾಡಿತ್ತು. ಇದಕ್ಕೆ ಆಸ್ಪತ್ರೆಯಿಂದಲೇ ಟ್ವೀಟ್ ಮೂಲಕ ಸಮಾಧಾನ ಹೇಳಿದ್ದ ದೇವೇಗೌಡರು, ʻʻಒಂದೆರಡು ದಿನ ಚಿಕಿತ್ಸೆ ಪಡೆದು ಮರಳಿ ಬರುತ್ತೇನೆʼʼ ಎಂದಿದ್ದರು.
ದೇವೇಗೌಡರು ಈಗ ಮನೆಗೆ ಬಂದ ಬಳಿಕ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಇದೆ. ಅದರಲ್ಲೂ ಮುಖ್ಯವಾಗಿ ದೇವೇಗೌಡರ ಅಂಗಳದಲ್ಲಿರುವ ಹಾಸನ ವಿಧಾನಸಭಾ ಟಿಕೆಟ್ ವಿಚಾರದಲ್ಲೂ ಚರ್ಚೆ ಶುರುವಾಗಲಿದೆ. ಇದಕ್ಕಾಗಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದು ಅವರ ನಿಲುವು. ಜತೆಗೆ ವೈದ್ಯರು ಕೂಡಾ ತುಂಬಾ ಓಡಾಟ ಮಾಡದೆ, ಟೆನ್ಶನ್ ತೆಗೆದುಕೊಳ್ಳದೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : Karnataka Election : ಕಾಂಗ್ರೆಸನ್ನು ಸಂಪರ್ಕಿಸಿಲ್ಲ, ಯಾವ ಕಾರಣಕ್ಕೂ ಜೆಡಿಎಸ್ ಬಿಡಲ್ಲ: ಹಾಸನದ ಎಚ್.ಪಿ ಸ್ವರೂಪ್ ಸ್ಪಷ್ಟೋಕ್ತಿ