Site icon Vistara News

ಅಪಘಾತದಲ್ಲಿ ಮೊಣಕಾಲು ಕಳೆದುಕೊಂಡಿದ್ದ ಜಿಮ್‌ ಟ್ರೇನರ್‌ ಬಾಳಿಗೆ ಬೆಳಕಾದ ವೈದ್ಯರು; ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

#image_title

ಬೆಂಗಳೂರು: ಅಪಘಾತದಿಂದ ಮೊಣಕಾಲಿಗೆ ಗಂಭೀರವಾಗಿ ಗಾಯವಾಗಿ ಕಾಲು ಸ್ವಾದೀನ ಕಳೆದುಕೊಂಡು ಸತತ 3 ವರ್ಷಗಳಿಂದ ವ್ಹೀಲ್‌ಚೇರ್‌ನಲ್ಲಿಯೇ ಜೀವನ ಸಾಗಿಸುತ್ತಿದ್ದ 30 ವರ್ಷದ ಜಿಮ್‌ ಟ್ರೇನರ್‌ಗೆ ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿ ಸಂಕೀರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು (Knee replacement surgery) ನಡೆಸಿದೆ.

ಫೋರ್ಟಿಸ್‌ ಆಸ್ಪತ್ರೆಯ ಮೂಳೆರೋಗದ ನಿರ್ದೇಶಕ ಮತ್ತು ಜಂಟಿ ಬದಲಿ ಶಸ್ತ್ರಚಿಕಿತ್ಸಕ ಡಾ. ರಘು ನಾಗರಾಜ್ ಅವರ ತಂಡ ಈ ಚಿಕಿತ್ಸೆಯನ್ನು ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಡಾ. ರಘು, ಜಿಮ್‌ ಟ್ರೇನರ್‌ ಮೂರು ವರ್ಷದ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ತನ್ನ ಮೊಣಕಾಲನ್ನೇ ಕಳೆದುಕೊಂಡರು. ತಮ್ಮ ಮೊಣಕಾಲನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಆಸ್ಪತ್ರೆ ಸುತ್ತಿದರೂ ಸಾಧ್ಯವಾಗಲಿಲ್ಲ. ರೋಗಿಯ ಮೊಣಕಾಲಿನ ಮೂಳೆ ಸಂಪೂರ್ಣ ಬೇರ್ಪಟ್ಟಿತ್ತು. ಇದರ ಮರುಜೋಡಣೆ ಅಸಾಧ್ಯದ ಕೆಲಸವೇ ಆಗಿತ್ತು. ಆದರೆ, ನಮ್ಮ ತಂಡ ಇದನ್ನು ಸವಾಲಾಗಿ ಸ್ವೀಕರಿಸಿ, ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದೆ ಎಂದರು.

ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು

ಸತತ ಎರಡೂವರೆ ಅವಧಿಯ ಶಸ್ತ್ರಚಿಕಿತ್ಸೆಯಲ್ಲಿ ಮೊಣಕಾಲಿನ ಕೀಲು ತೆಗೆದು ಕೃತಕ ಮೊಣಕಾಲಿನ ಕೀಲು ಜೋಡಿಸಲಾಗಿದೆ. ಅಪಘಾತ ನಡೆದು ಮೂರು ವರ್ಷದ ಬಳಿಕ ಈ ರೀತಿಯ ಶಸ್ತ್ರಚಿಕಿತ್ಸೆ ಸವಾಲಿನ ಕೆಲಸ. ಏಕೆಂದರೆ, ಈ ಅವಧಿಯೊಳಗಾಗಲೇ ಕಾಲಿನ ಮೀನುಖಂಡ ಸೇರಿದಂತೆ ಇತರೆ ನರ ಹಾಗೂ ಮೂಳೆಗಳು ತನ್ನ ಅಸ್ವಿತ್ವವನ್ನೇ ಕಳೆದುಕೊಂಡು ಸೊರಗಿರುತ್ತವೆ.

ಇದೀಗ ಈ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯಿಂದ ಇಡೀ ಮೊಣಕಾಲಿನ ಕೆಳಗಿನ ಭಾಗಕ್ಕೂ ಜೀವ ನೀಡಲಾಗಿದೆ. ಶಸ್ತ್ರಚಿಕಿತ್ಸೆಯ ಕೆಲ ದಿನಗಳ ಬಳಿಕ ರೋಗಿಯೂ ವ್ಹೀಲ್‌ಚೇರ್‌ ಅನ್ನು ಬಿಟ್ಟು, ಕೋಲಿನ ಸಹಾಯದ ಮೂಲಕ ನಡೆಯುವುದನ್ನು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಸಹಾಯವಿಲ್ಲದೆ ತನ್ನ ಕಾಲ ಮೇಲೆ ನಡೆಯಲಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: Police Raid: ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ, ಮಾರಕಾಸ್ತ್ರಗಳ ವಶ; ಇದು ಎಲೆಕ್ಷನ್‌ ಎಫೆಕ್ಟ್‌

ಫೋರ್ಟಿಸ್‌ ಆಸ್ಪತ್ರೆ ಬ್ಯುಸಿನೆಸ್ ಹೆಡ್ ಅಕ್ಷಯ್ ಒಲೆಟಿ ಮಾತನಾಡಿ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಸಾಕಷ್ಟು ಸವಾಲಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಇದೀಗ ಈ ಸಾಲಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯೂ ಸೇರಿದೆ ಎಂದು ಹೇಳಿದರು.

Exit mobile version