ಚಿತ್ರದುರ್ಗ: ಕೆಲವೊಂದು ಸನ್ನಿವೇಶದಲ್ಲಿ ಮುರುಘಾ ಮಠದ ಮುಂದೆ ಪೋಷಕರು ತಮ್ಮ ಮಕ್ಕಳನ್ನು ಬಿಟ್ಟು, “ಮಗುವನ್ನು ಶ್ರೀಮಠವೇ ನೋಡಿಕೊಳ್ಳಬೇಕು” ಎಂದು ಪತ್ರ ಬರೆದಿಟ್ಟು ಹೋಗುತ್ತಿದ್ದ ಹಿನ್ನೆಲೆಯಲ್ಲಿ ಮಠದ ಮುಂದೆ ಬಹಳ ಹಿಂದೆಯೇ ತೊಟ್ಟಿಲನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಈಗ ಈ ತೊಟ್ಟಿಲಿನ ಸಮೀಪ ಇರುವ ದೊಡ್ಡ ಪೈಪ್‌ವೊಂದರ ಬಳಿ “ಚಿಗುರು” ಹೆಣ್ಣುಮಗುವನ್ನು ತಂದು ಬಿಡಲಾಗಿತ್ತು ಎಂದು ಅಲ್ಲಿನ ಬೀಡಾ ಅಂಗಡಿ ಮಾಲಕಿ ಫೈರೋಜಾ ಹೇಳಿದ್ದಾರೆ.
ಅನಧಿಕೃತ ಪೋಷಣೆ ಆರೋಪ
ಆಗಸ್ಟ್ ೨೬ರಂದು ಮುರುಘಾ ಮಠದ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಸ್ಥಳಾಂತರ ಮಾಡಲಾಯಿತು. ಆಗ ಚಿಗುರು ಹೆಣ್ಣು ಮಗುವು ಸಹ ದಾಖಲಾತಿ ಇಲ್ಲದೆ ಅನಧಿಕೃತವಾಗಿ ಇರುವ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಡಾ. ಜೆ.ಎಸ್. ಮಧುಕುಮಾರ್ ಎಂಬುವವರು ದೂರು ನೀಡಿ ಗಮನ ಸೆಳೆದಿದ್ದರು.
ಅನಧಿಕೃತವಾಗಿ ಮಗು ಪೋಷಣೆ
ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಸ್ಥಳಾಂತರ ಮಾಡುವಾಗ ದಾಖಲಾತಿ ಪುಸ್ತಕವನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಈ ಮಗುವನ್ನು ಅನಧಿಕೃತವಾಗಿ ಬಿಟ್ಟುಕೊಂಡಿರುವುದು ತಿಳಿದುಬಂದಿದೆ. ಮಡಿಲು ಸಂಸ್ಥೆಯಲ್ಲಿದ್ದರೂ ಯಾಕೆ ದಾಖಲು ಮಾಡಿಕೊಂಡಿಲ್ಲ ಎಂಬ ಪ್ರಶ್ನೆ ಇದೇ ವೇಳೆ ಉದ್ಭವಿಸಿದೆ. ಆದರೆ, ಈ ಬಗ್ಗೆ ಯಾವುದೇ ವಿಚಾರಣೆ ಮಾಡಲಾಗಿದೆಯೇ? ಅನಧಿಕೃತವಾಗಿ ಬಿಟ್ಟುಕೊಂಡಿದ್ದಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಯಾವ ಮಾಹಿತಿಯನ್ನೂ ನೀಡಲಾಗಿಲ್ಲ. ಈ ವಿಷಯದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಧುಕುಮಾರ್ ಮಕ್ಕಳ ಕಲ್ಯಾಣ ಸಮಿತಿ, ಜಿಲಾಡಳಿತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎರಡನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಟ್ವಿಸ್ಟ್; ಇನ್ನಿಬ್ಬರು ಪೋಷಕರ ಉಲ್ಟಾ ಹೇಳಿಕೆ?
ಬಾಲಕಿ ಹೆಸರು, ಫೋಟೊ ಸಹಿತ ಜಾಹೀರಾತು ಪ್ರಕಟ
ಈ ಹೆಣ್ಣುಮಗುವಿಗೆ “ಚಿಗುರು” ಎಂದು ಹೆಸರಿಡಲಾಗಿದ್ದು, ನಾಲ್ಕೂವರೆ ವರ್ಷವಾಗಿದೆ. ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಈ ಮಗುವು ಮುರುಘಾಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಸಿಕ್ಕಿದೆ. ಗೋಧಿ ಮೈಬಣ್ಣವನ್ನು ಹೊಂದಿದ್ದು, ೧೬ ಕೆಜಿ ತೂಕವಿದೆ. ಈ ಹೆಣ್ಣು ಮಗುವಿನ ಪೋಷಕರ ಬಗ್ಗೆ ವಿವರ ಲಭ್ಯವಾಗಿಲ್ಲ. ಹೀಗಾಗಿ ವಿವರ ಗೊತ್ತಿದ್ದವರು, ಇಲ್ಲವೇ ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅಥವಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಮಾಹಿತಿ ಇದ್ದವರು ಮೊ. ೮೯೭೦೦೭೨೬೦೯ಗೆ ಸಂಪರ್ಕಿಸುವಂತೆ ಕೋರಲಾಗಿದೆ. ಹಾಲಿ ಮಗುವು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ ಎಂದು ಹೇಳಲಾಗಿದೆ.
ಬರುವ ಡಿಸೆಂಬರ್‌ಗೆ ಪಾಪು ಸಿಕ್ಕು ಐದು ವರ್ಷ!
ನಾಲ್ಕೂವರೆ ವರ್ಷದ ಚಿಗುರು ಬಾಲಕಿಯನ್ನು ಶ್ರೀಮಠದ ಮುಂದೆ ಯಾರೋ ಬಿಟ್ಟುಹೋಗಿದ್ದು, ಈಗ ಬರುವ ಡಿಸೆಂಬರ್‌ಗೆ ಪಾಪು ಸಿಕ್ಕು ೫ ವರ್ಷ ಕಳೆಯುತ್ತದೆ ಎಂದು ಮಠದ ಎದುರಿನ ಬೀಡಾ ಅಂಗಡಿ ಮಾಲಕಿ ಫೈರೋಜಾ ಹೇಳಿಕೆ ನೀಡಿದ್ದಾರೆ.
“ಅಂದು ಬೆಳಗಿನ ಜಾವ ೪ ಗಂಟೆಗೆ ಪಾಪು ಮಠದ ಎದುರಿನ ಪೈಪ್ ಬಳಿ ಸಿಕ್ಕಿತ್ತು. ನಾನು ಅಂಗಡಿ ತೆರೆದಾಗ ವಾಕಿಂಗ್ ಹೋಗುವವರು ನನಗೆ ಈ ವಿಷಯ ತಿಳಿಸಿದರು. ಪಾಪು ಅಳುತ್ತಿರುವುದನ್ನು ನೋಡಿ ನಾನು ಹೋಗಿ ನೋಡಿದೆ. ಆಗ ಪಾಪು ಬಳಿ ಪೇಪರ್‌ವೊಂದನ್ನು ಇಡಲಾಗಿತ್ತು. ದಯವಿಟ್ಟು ಮಠಕ್ಕೆ ಸೇರಿಸಬೇಕೆಂದು ಅದರಲ್ಲಿ ಕೋರಲಾಗಿತ್ತು. ಆಗ ಮಠದ ಸೆಕ್ಯುರಿಟಿ ಆ ಪೇಪರ್ ಅನ್ನು ಸ್ವಾಮಿಗಳಿಗೆ ತೋರಿಸಲು ಒಯ್ದರು. ನಾನು ಆ ಮಗುವನ್ನು ಜೋಪಾನ ಮಾಡಿದೆ. ಹಾಲು ಕುಡಿಸಿದೆ. ಅಷ್ಟರಲ್ಲಿ ಮಠದ ಸಿಬ್ಬಂದಿ ಬಂದು ಮಗುವನ್ನು ಸ್ವಾಮಿಗಳ ಬಳಿ ಒಯ್ದರು. ಅವರು ಅದರ ಪಾಲನೆಯನ್ನು ಶ್ರೀಮಠ ನೋಡಿಕೊಳ್ಳಲಿ ಎಂದು ಹೇಳಿದರು. ಅದಾದ ಕೆಲವೇ ಹೊತ್ತಿನಲ್ಲಿ ಮಕ್ಕಳಿಲ್ಲದವರು ಮಗು ಕೇಳಲು ಬಂದರು. ಸ್ವಾಮಿಗಳ ಬಳಿ ಕೇಳಿ ಎಂದು ಹೇಳಿದೆ. ಆಗ ಮುರುಘಾಶ್ರೀಗಳು “ನಿಮ್ಮ ಬಳಿ ಆಸ್ತಿ ಇದ್ದರೆ ಮಗು ಹೆಸರಿಗೆ ಮಾಡಿ, ಹಾಗೆ ಮಾಡಿದರೆ ಕೊಡುತ್ತೇವೆ ಎಂದು ಹೇಳಿದರು. ಬಂದವರು ವಾಪಸ್ ಹೋದರು” ಎಂದು ಫೈರೋಜಾ ಹೇಳಿದರು.
ಚಿಗುರು ಎಂದು ಹೆಸರಿಟ್ಟಿದ್ದ ಮುರುಘಾಶ್ರೀ
ಈ ಅನಾಥ ಮಗುವಿಗೆ ‘ಚಿಗುರು’ ಅಂತ ಮುರುಘಾ ಶ್ರೀಗಳೇ ಹೆಸರಿಟ್ಟರು. ಮಗುವನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು. ನಾನು ಮಗು ನೋಡಲು ಆಗಾಗ ಅಲ್ಲಿ ಹೋಗಿ ಬರುತ್ತಿದೆ. ಇದಕ್ಕಿಂತ ಮೊದಲೂ ಸಹ ಹಲವಾರು ಅನಾಥ ಮಕ್ಕಳನ್ನು ಮಠದ ಮುಂದೆ ಬಿಡಲಾಗಿದ್ದು, ಎಲ್ಲರನ್ನೂ ಸಾಕಿದ್ದಾರೆ ಎಂದು ಫೈರೋಜಾ ಹೇಳಿದ್ದಾರೆ.
ಪ್ರಸ್ತುತ ಈ ಬಾಲಕಿಯ ಪೋಷಕರಿಗಾಗಿ ಹುಡುಕಾಟ ನಡೆದಿದ್ದು, ಜಾಹೀರಾತನ್ನೂ ನೀಡಲಾಗಿದೆ. ಆದರೆ, ಇದುವರೆಗೂ ಯಾರೂ ಸಂಪರ್ಕ ಮಾಡಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮಠದ ಮುಖ್ಯದ್ವಾರ, ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಕೆ, ಭದ್ರತೆಗೆ ಹೆಚ್ಚಿನ ಕ್ರಮ