Site icon Vistara News

Free Bus Service: ಸೀಟಿಲ್ಲ ಎಂದು ಬಸ್‌ ನಿಲ್ಲಿಸದೇ ಹೋಗಿದ್ದ ಕಂಡಕ್ಟರ್‌ ಮೇಲೆ ಸಿಟ್ಟಲ್ಲಿ ಹಲ್ಲೆ; ನಾಲ್ವರ ಸೆರೆ

Four held for assaulting conductor in chellakere

ಚಿತ್ರದುರ್ಗ: ರಾಜ್ಯ ಸರ್ಕಾರದ ಶಕ್ತಿ ಯೋಜನೆ (Free Bus Service) ಬಂದ ಮೇಲೆ ಬಸ್‌ನಲ್ಲಿ ಮಹಿಳೆಯರ ಸಂಚಾರ ಹೆಚ್ಚಳವಾಗಿದೆ. ಈ ನಡುವೆ ಸಾಕಷ್ಟು ಅವಾಂತರಗಳೂ ಇದರಿಂದ ನಡೆಯುತ್ತಿದೆ. ಇದೇ ವೇಳೆ ದಾಬಸ್‌ಪೇಟೆಯಲ್ಲಿ ಸೀಟಿಲ್ಲ ಎಂಬ ಕಾರಣ ನೀಡಿ ಮಹಿಳೆಯೊಬ್ಬರಿಗೆ ನಿರ್ವಾಹಕ (Bus Conductor) ಬಸ್‌ ನಿಲ್ಲಿಸದೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಇದ್ದಕ್ಕೆ ಆಕ್ರೋಶಗೊಂಡಿದ್ದ ಮಹಿಳೆಯೊಬ್ಬಳು ಮರುದಿನ ಸಂಬಂಧಿಕರ ಜತೆಗೆ ಬಂದು ಚಳ್ಳಕೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ತಡೆದಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಚಳ್ಳಕೆರೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಚಂದ್ರಿಕಾ, ಮಲ್ಲಿಕಾರ್ಜುನ್, ಶಿವರಾಜ್, ನವೀನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ದಾಬಸ್‌ಪೇಟೆ ಬಳಿ ಬಸ್ ನಿಲ್ಲಿಸಲಿಲ್ಲ ಎಂದು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಬಸ್‌ ಕಂಡಕ್ಟರ್‌ ಚಂದ್ರೇಗೌಡ ದೂರು ನೀಡಿದ್ದರು.

ದೂರು ದಾಖಲು ಮಾಡಿಕೊಂಡಿದ್ದ ಚಳ್ಳಕೆರೆ ಪೊಲೀಸರು ತನಿಖೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಳ್ಳಕೆರೆ ನಗರದ ನೆಹರೂ ಸರ್ಕಲ್‌ನಲ್ಲಿ ಹಲ್ಲೆ ನಡೆದಿತ್ತು.

ಏನಿದು ಘಟನೆ?

ಸಾರಿಗೆ ಬಸ್ ಬುಧವಾರ ರಾಯದುರ್ಗದಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ದಾಬಸ್ ಪೇಟೆಯಿಂದ ಬರುವಾಗ ಮಹಿಳೆಯೊಬ್ಬರು ಬಸ್‌ಗೆ ಕೈ ಅಡ್ಡ ಮಾಡಿದ್ದಾರೆ. ಆಗ ಕಂಡಕ್ಟರ್‌ ಬಸ್‌ನಲ್ಲಿ ಸೀಟ್‌ ಇಲ್ಲ ಎಂದು ಹೇಳಿ ಬಸ್‌ ನಿಲ್ಲಿಸದೇ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಸೀಟ್‌ ಇಲ್ಲ ಎಂದು ಹೇಳಿ ಸ್ಟಾಪ್‌ ಕೊಡದೇ ಕಂಡಕ್ಟರ್‌ ಬಸ್‌ ಅನ್ನು ಮುಂದಕ್ಕೆ ಹೋಗಲು ಹೇಳಿದ್ದಕ್ಕೆ ತೀವ್ರ ಆಕ್ರೋಶಗೊಂಡ ಮಹಿಳೆಯು ಈ ವಿಷಯವನ್ನು ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಕೆಯನ್ನು ಕರೆದುಕೊಂಡು ಗುರುವಾರ ಬಸ್‌ ಅನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಚಳ್ಳಕೆರೆಯಲ್ಲಿ ಆ ಬಸ್‌ ಅನ್ನು ತಡೆದಿದ್ದಾರೆ. ಈ ವೇಳೆಯೇ ಗಲಾಟೆ ನಡೆದಿತ್ತು.

ಬಸ್‌ನಿಂದ ನಿರ್ವಾಹಕರನ್ನು ಕೆಳಕ್ಕೆ ಇಳಿಸಿ ಮೊದಲಿಗೆ ವಿಚಾರಿಸಿದ್ದಾರೆ. ಬುಧವಾರ ಏಕೆ ಬಸ್‌ ನಿಲ್ಲಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಿರ್ವಾಹಕರಿಗೆ ಮತ್ತು ಬಂದಿದ್ದ ಯುವಕರ ಮಧ್ಯೆ ವಾಗ್ವಾದ ಆಗಿದೆ. ಕೊನೆಗೆ ಸಿಟ್ಟಿಗೆದ್ದ ಯುವಕರು ಏಕಾಏಕಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದರು.

ಪದೇ ಪದೆ ಹೊಡೆದರು

ಒಮ್ಮೆಲೆಗೆ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರಿಂದ ಸಿಟ್ಟಿಗೆದ್ದ ನಿರ್ವಾಹಕರು ಅದನ್ನು ಪ್ರಶ್ನೆ ಮಾಡಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ಯುವಕರು, ಮತ್ತೆ ಮತ್ತೆ ಹಲ್ಲೆ ಮಾಡಿದ್ದಾರೆ. ಬಸ್‌ನ ಉದ್ದಕ್ಕೂ ಕರೆದುಕೊಂಡು ಹೋಗಿ ಹೊಡೆದಿದ್ದರು. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಸಹಾಯಕ್ಕೆ ಬಾರದ ಪ್ರಯಾಣಿಕರು, ಸಾರ್ವಜನಿಕರು

ಯುವಕರ ಗುಂಪೊಂದು ಹೀಗೆ ಹಲ್ಲೆ ಮಾಡುತ್ತಿದ್ದರೂ ಯಾರೂ ಸಹ ಇವರ ಸಹಾಯಕ್ಕೆ ಬಾರಲೇ ಇಲ್ಲ. ಎಲ್ಲರೂ ಬಸ್‌ನ ಕಿಟಕಿಯಿಂದ ವೀಕ್ಷಿಸಿದರೆ, ಮತ್ತೆ ಹೊರಗಡೆ ಇದ್ದವರು ನೋಡುತ್ತಾ ನಿಂತಿದ್ದರು. ಇನ್ನು ಕೆಲವರು ಇದನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಈ ವಿಡಿಯೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್‌ ವೈರಲ್‌ ಆಗಿದೆ.

ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು- ಇಲ್ಲಿದೆ ವಿಡಿಯೊ

ಪ್ರಯಾಣ ಸ್ಥಗಿತ

ಕಂಡಕ್ಟರ್‌ಗೆ ಯುವಕರ ಗುಂಪು ಥಳಿಸಿದ ಹಿನ್ನೆಲೆಯಲ್ಲಿ ಪ್ರಯಾಣವನ್ನು ಸ್ಥಗಿತ ಮಾಡಿದ ಆ ಬಸ್‌ನ ಸಾರಿಗೆ ಸಿಬ್ಬಂದಿ ಸೀದಾ ಬಸ್‌ ಅನ್ನು ಸ್ಥಳೀಯ ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಹೋಗಿದ್ದರು. ಅಲ್ಲಿ ಕೆಲ ಕಾಲ ಪೊಲೀಸರ ಜತೆ ಮಾತನಾಡಿ, ದೂರು ನೀಡಿದ್ದರು. ಬಳಿಕ ಅಲ್ಲಿಂದ ತೆರಳಿದ್ದರು. ಈಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version