Site icon Vistara News

Rain News: ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ನಾಲ್ಕು ಸಾವು; ಸೇತುವೆಗಳು ಜಲಾವೃತವಾಗಿ ಸಂಚಾರ ಸ್ಥಗಿತ

Bridge submerged

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ವರುಣನ ಅವಕೃಪೆಗೆ ವಿವಿಧೆಡೆ ನಾಲ್ವರು ಮೃತಪಟ್ಟಿದ್ದಾರೆ. ನದಿಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಹಲವೆಡೆ ಸೇತುವೆಗಳು ಮುಳುಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ (Rain News) ಕೆಲವೆಡೆ ವಿದ್ಯುತ್‌ ಕಂಬಗಳು, ಮರಗಳು ನೆಲಕ್ಕುರುಳಿ ಅವಾಂತರ ಸೃಷ್ಟಿಯಾಗಿದೆ. ಅದೇ ರೀತಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದ್ದು, ಮನೆಗಳಿಗೂ ಹಾನಿಯಾಗಿದೆ.

ದಾವಣಗೆರೆಯಲ್ಲಿ ಪುಟ್ಟ ಮಗು ಮೃತ್ಯು

ದಾಣಗೆರೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆ ಗೋಡೆ ಬಿದ್ದು 1 ವರ್ಷ 3 ತಿಂಗಳ ಹೆಣ್ಣು ಮಗು (Girl child death in Davanagere) ಮೃತಪಟ್ಟಿದೆ. ಕುಂಬಳೂರಿನ ಲಕ್ಷ್ಮೀ ಹಾಗೂ ಕೆಂಚಪ್ಪ ದಂಪತಿಗಳ ಪುತ್ರಿ ಸ್ಪೂರ್ತಿ ಸಾವನ್ನಪ್ಪಿದ ದುರ್ದೈವಿ ಮಗು. ಸೋಮವಾರ ರಾತ್ರಿ ಲಕ್ಷ್ಮಿ ಮತ್ತು ಕೆಂಚಪ್ಪ ದಂಪತಿ ತಮ್ಮ ಪುಟ್ಟ ಕಂದಮ್ಮನನ್ನು ಮಧ್ಯೆ ಮಲಗಿಸಿಕೊಂಡು ನಿದ್ದೆ ಹೋಗಿದ್ದರು. ಈ ವೇಳೆ ಅವರ ಮನೆಯ ಚಾವಣಿಯೇ ಕುಸಿದು ಕೆಳಗೆ ಬಿದ್ದಿದೆ. ಪುಟ್ಟ ಮಗುವಿನ ಮೇಲೆ ಮಣ್ಣು ಬಿದ್ದ ಹಿನ್ನೆಲೆಯಲ್ಲಿ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ತಂದೆ ಮತ್ತು ತಾಯಿಗೂ ಗಾಯಗಳಾಗಿದ್ದು, ಅವರಿಗೆ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರದ ಕನ್ನೂರು ಗ್ರಾಮದಲ್ಲಿ ವೃದ್ಧೆ ಮೃತ್ಯು

ವಿಜಯಪುರ ಜಿಲ್ಲೆ ಕನ್ನೂರು ಗ್ರಾಮದಲ್ಲಿ ಮಳೆಯಿಂದ ಚಾವಣಿ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ (Old woman death in Vijaypur). 60 ವರ್ಷದ ಶಿವಮ್ಮ ಸಾವಳಗಿ ಅವರ ಮನೆ ಸೋಮವಾರ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ. ಮೇಲ್ಚಾವಣಿಯೇ ಕುಸಿದು ಅವರ ಮೇಲೆ ಬಿದ್ದ ಕಾರಣ ಸ್ಥಳದಲ್ಲೇ ಮೃತ್ಯು ಸಂಭವಿಸಿದೆ.

ಇದನ್ನೂ ಓದಿ | Rain News : ಜಲಪಾತದಲ್ಲಿ ಕಾಲು ಜಾರಿದ ಯುವಕನ ಶವ ಇನ್ನೂ ಪತ್ತೆ ಇಲ್ಲ; ಹುಡುಕಲು ಹೋದ ಸಾಹಸಿಗೂ ಡೇಂಜರ್

ಕುಸಿದು ಬಿದ್ದ ಮನೆ; ಅವಶೇಷಗಳಡಿ ಸಿಲುಕಿದ್ದ 3 ವರ್ಷದ ಕಂದಮ್ಮ ಮೃತ್ಯು

ಹಾವೇರಿ: ಹಾವೇರಿ ತಾಲೂಕಿನ ಮಾಳಪುರ ಗ್ರಾಮದಲ್ಲಿ ನಿರಂತರ ಮಳೆಗೆ ದುರ್ಬಲವಾದ ಮನೆ ಕುಸಿದು ಪುಟ್ಟ ಮಗು ಮೃತಪಟ್ಟಿದೆ. ಭಾಗ್ಯ ಚಲಮರದ್ ಎಂಬ ಮೂರು ವರ್ಷ ಮಗುವೇ ಮೃತಪಟ್ಟ ದುರ್ದೈವಿ. ಎರಡು ದಿನಗಳ ಹಿಂದೆ ನಿರಂತರ ಬಿರುಗಾಳಿ ಮಳೆಗೆ ಮನೆ ಕುಸಿದು ಬಿದ್ದಿತ್ತು. ಈ ವೇಳೆ ಪುಟ್ಟ ಮಗುವಿಗೆ ಗಂಭೀರ ಗಾಯವಾಗಿತ್ತು. ಅವಶೇಷಗಳ ನಡುವೆ ಸಿಲುಕಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಿದ್ದ ಹೊಡೆತಗಳು ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಕೊನೆಯುಸಿರೆಳೆದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅದಕ್ಕೆ ಚಿಕಿತ್ಸೆ ಮುಂದುವರಿದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೀದರ್‌ನಲ್ಲೂ ಭಾರಿ ಮಳೆ; ಉಕ್ಕಿಹರಿದ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಬೀದರ್: ಭಾರಿ ಮಳೆಗೆ ಯುವಕನೊಬ್ಬ ನೀರುಪಾಲಾಗಿದ್ದಾನೆ. ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ನಡೆದ ಉಕ್ಕಿ ಹರಿಯುತ್ತಿರುವ ನೀರಿನ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನೊಬ್ಬ ಮೃತಪಟ್ಟಿದ್ದಾರೆ. ಮಲ್ಲಪ್ಪ ಶರಣಪ್ಪ ಕರೆಪನೋರ್ (25) ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ.

ಭಾರಿ ಮಳೆಗೆ ಕುಸಿದ ಮನೆ, ಒಳಗಿದ್ದ ಆರು ಮಂದಿ ಪವಾಡಸದೃಶ ಪಾರು

ಮುಲ್ಕಿ (ದಕ್ಷಿಣ ಕನ್ನಡ): ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಭಾರಿ ಮಳೆಗೆ (Heavy rain) ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೊನಿಯ ಶ್ರೀ ಮಲ್ಲಿಕಾರ್ಜುನ ಮಠದ ಬಳಿಯ ನಿವಾಸಿ ಲಕ್ಷ್ಮಿ ಪಕೀರಪ್ಪ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದು (House collapsed) ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ರಾತ್ರಿ ಹೊತ್ತು ಮಳೆ ಸುರಿದಿದ್ದು ಮನೆಯ ಮೇಲ್ಭಾಗದಲ್ಲಿ ಬಾರಿ ಶಬ್ದ ಉಂಟಾಗಿದೆ. ಈ ಸಂದರ್ಭ ಮನೆಯೊಳಗಿದ್ದ
ಲಕ್ಷ್ಮಿ ಪಕೀರಪ್ಪ ಸಹಿತ ಆರು ಮಂದಿ ಹೊರಗೆ ಓಡಿ ಬಂದ ಕ್ಷಣಾರ್ಧದಲ್ಲಿ ಮನೆ ಪೂರಾ ಕುಸಿದು ಬಿದ್ದಿದ್ದು ಮನೆಯವರು ಪವಾಡ ಸದೃಶ ಪಾರಾಗಿದ್ದಾರೆ. ಘಟನೆಯಿಂದ ಮನೆಯೊಳಗಿನ ವಸ್ತುಗಳು ಹಾಗೂ ಮನೆಗೆ ಹಾನಿಯಾಗಿದ್ದು ಬಾರಿ ನಷ್ಟ ಉಂಟಾಗಿದೆ ಎಂದು ಲಕ್ಷ್ಮಿ ಪಕೀರಪ್ಪ ತಿಳಿಸಿದ್ದಾರೆ.

ಮಲೆನಾಡಿನಲ್ಲಿ ಮಳೆ ಅಬ್ಬರ; ಕುಶಾಲನಗರ, ಬೆಳಗಾವಿಯಲ್ಲಿ ಕಾಲನಿಗಳಿಗೆ ನುಗ್ಗಿದ ನೀರು

ಕೊಡಗು: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕಾವೇರಿ ನದಿ ನೀರು ಕೆಲವು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಕುಶಾಲನಗರದ ಸಾಯಿ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರೋ ರಾತ್ರಿ ಕೆಲ ಮನೆಗಳ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಹಾರಂಗಿ ಜಲಾಶಯದಿಂದ 30,000 ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಕುಶಾಲನಗರದ ಸಾಯಿ ಬಡಾವಣೆಗೆ ನೀರು ನುಗ್ಗಿದೆ. ಮನೆಗೆ ನೀರು ನುಗ್ಗುತ್ತಿದಂತೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಇದೆ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮೊದಲೇ ಸೂಚಿಸಿತ್ತು.

ನೇಕಾರ ಕಾಲನಿಗೆ ನುಗ್ಗಿದ ನಾಲೆ ನೀರು

ಬೆಳಗಾವಿ: ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯ ಸಿದ್ಧಾರೂಢ ನಗರದ ನೇಕಾರ ಕಾಲನಿಗೆ ಹತ್ತಿರದ ಬಳ್ಳಾರಿ ನಾಲೆಯ ನೀರು ನುಗ್ಗಿದೆ. ನಾಲಯಿಂದ ಸುಮಾರು ಒಂದು ಕಿಮೀ ಈಚೆಗೂ ವ್ಯಾಪಿಸಿ ನೀರು ಮನೆಗಳಿಗೆ ನುಗ್ಗಿದ್ದು, ನಾಲೆಯ ಅಕ್ಕಪಕ್ಕದ ಜಮೀನು ದೊಡ್ಡ ಕೆರೆಯಂತೆ ಭಾಸವಾಗುತ್ತಿದೆ. ನೇಕಾರ ಕಾಲನಿಯ ಜನ ರಾತ್ರಿ ಇಡೀ ಜಾಗರಣೆ ‌ಮಾಡಿದ್ದಾರೆ. ರೈತರು ಬೆಳೆದ ಕಬ್ಬು, ಭತ್ತ ಎಲ್ಲವೂ ನೀರಿನಲ್ಲಿ ಹೋಮವಾದ ಸ್ಥಿತಿಯಾಗಿದೆ.

ಮಳೆ ಅವಾಂತರ; ರಾಯಚೂರಿನ 105 ಗ್ರಾಮಗಳಿಗೆ ಜಲ ಕಂಟಕ!

ರಾಯಚೂರು/ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ (Rain News) ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪ್ರವಾಹದ ಪೂರ್ವ ಸಮೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 105 ಗ್ರಾಮಗಳಿಗೆ ಪ್ರವಾಹದ ಆತಂಕ ಇದೆ. ಜಿಲ್ಲೆಯಲ್ಲಿರುವ ಒಟ್ಟು 6 ಸೇತುವೆಗಳಿಗೆ ಜಲಾವೃತದ ಭೀತಿ ಇದ್ದು, ಇದಕ್ಕಾಗಿ 35 ಗ್ರಾಮ ಪಂಚಾಯತ್‌ಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆ ಮಾಡಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ 21 ಜನರ ಎನ್‌ಡಿಆರ್‌ಎಫ್‌ (NDRF) ತಂಡ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದೆ. ಪ್ರವಾಹದ ಭೀತಿಯಿರುವ 5 ತಾಲೂಕುಗಳಲ್ಲಿ ರಬ್ಬರ್ ಬೋಟ್, ನದಿ ಪಾತ್ರದಲ್ಲಿ 5 ಟೂಬ್ ಬೋಟ್‌ಗಳಲ್ಲಿ ಗಸ್ತು ಇರಲಿದೆ. ಜಿಲ್ಲೆಯಲ್ಲಿ ಒಟ್ಟು 65 ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Rain News : ಸೇತುವೆ ಮುಳುಗಡೆ, ವೃದ್ಧೆಗೆ ಅನಾರೋಗ್ಯ; ಟ್ರ್ಯಾಕ್ಟರ್‌ನಲ್ಲೇ ಆಸ್ಪತ್ರೆಗೆ ರವಾನೆ

ಮುಂದುವರಿದ ಮಳೆ ಅವಾಂತರ; ಭೀತಿಯಲ್ಲಿ ಮಲೆನಾಡು ಮಂದಿ

ಹಾಸನ/ ಶಿವಮೊಗ್ಗ/ಸುಳ್ಯ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿ (Rain alert) ಹೋಗಿದೆ. ಹಾಸನದಲ್ಲಿ ಒಂದು ಕಡೆ ಮಳೆಯೂ (Rain News) ನಿಲ್ಲುತ್ತಿಲ್ಲ, ಅದರಿಂದ ಆಗುವ ಅವಾಂತರವು ಕಡಿಮೆ ಆಗುತ್ತಿಲ್ಲ. ಹಾಸನದ ಸಕಲೇಶಪುರ ತಾಲೂಕಿನ ಮರಗಿಡಿ ಗ್ರಾಮದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಮಣ್ಣಿನ ರಾಶಿಯು ಎರಡು ಮನೆಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ.

ಗುಡ್ಡ ಕುಸಿತ

ಕೂಲಿ ಕಾರ್ಮಿಕ ಕುಟುಂಬಗಳು ಅಪಾಯಕಾರಿ ಸ್ಥಳದಲ್ಲಿ ಜೋಪಡಿಯಂತಹ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಸ್ವಂತ ಮನೆ ಅಥವಾ ನಿವೇಶನ ಇಲ್ಲದೆ ಅಪಾಯಕಾರಿ ಸರ್ಕಾರಿ ಭೂಮಿಯಲ್ಲಿ ನೆಲೆಸಿದ್ದಾರೆ. ನಿನ್ನೆ ಗುಡ್ಡ ಕುಸಿದು ಗೌರಮ್ಮ ಹಾಗೂ ಕಮಲಾ ಎಂಬ ಮಹಿಳೆಯರ ಮನೆಗಳಿಗೆ ಹಾನಿ ಆಗಿತ್ತು. ಮಳೆ ಹೆಚ್ಚಾದರೆ ಗುಡ್ಡದ ಮೇಲಿನ ಬೃಹದಾಕಾರದ ಬಂಡೆಗಳು ಕೆಳಗೆ ಉರುಳಿ ಬರುವ ಆತಂಕ ಇದ್ದು, ಜೀವ ಭಯದ ನಡುವೆ ಕಾರ್ಮಿಕರ ಕುಟುಂಬ ಜೀವನ ಸಾಗಿಸುತ್ತಿದ್ದಾರೆ. ಪರ್ಯಾಯ ಜಾಗ ಕೊಡಿ ಇಲ್ಲವೇ, ಇಲ್ಲಿಯೇ ಸುರಕ್ಷತೆ ಒದಗಿಸಿ ಎಂದು ಅಳಲು ತೊಡಿಕೊಂಡಿದ್ದಾರೆ.

ರಸ್ತೆ ಕುಸಿಯುವ ಭೀತಿ

ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಕಾಂಕ್ರೀಟ್ ‌ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಸಕಲೇಶಪುರ ‌ತಾಲೂಕಿನ ಬಾಗೆ ಗ್ರಾಮದ ಬಳಿ ನಿರ್ಮಾಣ ಹಂತದ ಚತುಷ್ಪತ ರಸ್ತೆ ಕಾಮಗಾರಿ ಮಧ್ಯದಲ್ಲೇ‌ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಹೊಸದಾಗಿ ಮಣ್ಣು ಹಾಕಿ ಮಾಡಿರುವ ರಸ್ತೆ ಕುಸಿಯುವ ಭೀತಿ ಇರುವುದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಏಕಮುಖ ಸಂಚಾರಕ್ಕೆ‌ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಅವೈಜ್ಞಾನಿಕ ಕಾಮಗಾರಿ ಎಫೆಕ್ಟ್‌ ಗುಡ್ಡ ಕುಸಿತ

ರಸ್ತೆ ನಿರ್ಮಾಣಕ್ಕೆಂದು ಅವೈಜ್ಞಾನಿಕವಾಗಿ ಗುಡ್ಡ ಕೊರೆದು ಅವಾಂತರ ಸೃಷ್ಟಿಸಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ನಿರಂತರವಾಗಿ ರಾಶಿ ರಾಶಿಯಾಗಿ ಮಣ್ಣು ಕುಸಿಯುತ್ತಿದೆ. ಜತೆಗೆ ದೊಡ್ಡ ಮರಗಳು ಉರುಳುತ್ತಿವೆ. ಮಣ್ಣು ಕುಸಿಯುತ್ತಿದ್ದಂತೆ ಹೆದ್ದಾರಿ ನಿರ್ಮಾಣ ಗುತ್ತಿಗೆದಾರ ಕಂಪನಿ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ.

ಕುಕ್ಕೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ

ದಕ್ಷಿಣ ಕನ್ನಡ ಜಿಲ್ಲೆ ಸೇರಿ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಯ ಅಬ್ಬರ ಜೋರಾಗಿದೆ. ಕುಕ್ಕೆ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆ ಆಗಿದ್ದು, ಭಕ್ತರಿಗೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ಭದ್ರತೆ ಕೈಗೊಂಡಿದ್ದು, ಹೋಂ ಗಾರ್ಡ್ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಕುಮಾರಧಾರ ಸೇತುವೆ ಬಳಿಯೇ ಜನರನ್ನು ತಡೆಯುತ್ತಿದ್ದು, ಕುಮಾರಧಾರ ನದಿಯ ಜತೆ ದರ್ಪಣ ತೀರ್ಥವೂ ಮುಳುಗಡೆ ಆಗಿದೆ.

ಇತ್ತ ಗಾಳಿ ಮಳೆಗೆ ಮರಗಳು ಧರಶಾಹಿಯಾಗುತ್ತಿವೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಪುಚ್ವಪ್ಪಾಡಿ ಬಳಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಕುಕ್ಕೆಸುಬ್ರಹ್ಮಣ್ಯ ಮತ್ತು ಗುತ್ತಿಗಾರು ಸಂಪರ್ಕಿಸುವ ರಸ್ತೆ ಇದಾಗಿದೆ. ಮರ ಬಿದ್ದು ರಸ್ತೆ ಬಂದ್ ಆಗಿರುವುದರಿಂದ ಕೆಲ ವಾಹನ ಸವಾರರು ವಾಪಾಸ್ ಆಗುತ್ತಿದ್ದ ಚಿತ್ರಣ ಕಂಡು ಬಂತು. ಕೇರಳ ಮಂಜೇಶ್ವರದಿಂದ ಸುಬ್ರಹ್ಮಣ್ಯ ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು ಇನ್ನಷ್ಟು ಮರಗಳು ಧರೆಗುರುಳುವ ಆತಂಕ ಇದೆ.

ಸಾಗರದಲ್ಲಿ ಬಸ್‌ ಸಂಚಾರ ಸ್ಥಗಿತ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಸೈದೂರು – ಸಾಗರ ಮಾರ್ಗ ಸಂಪೂರ್ಣ ಜಲಾವೃತಗೊಂಡಿದೆ. ಈ ಮಾರ್ಗದಲ್ಲಿ ಬಸ್ ಸಂಚಾರವು ಸ್ಥಗಿತಗೊಂಡಿದೆ. ಇದರಿಂದಾಗಿ 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಎರಡು ದಿನಗಳಿಂದ ಬಸ್ ಸಂಚಾರವೂ ಸ್ಥಗಿತಗೊಂಡಿದೆ.

ರಾಜ್ಯದಲ್ಲಿ 3 ದಿನ ಭಾರೀ ಮಳೆ, ಕರಾವಳಿಗೆ ರೆಡ್‌ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಬಾರಿ ಮಳೆಯಾಗಲಿದೆ (rain news) ಎಂದು ಹವಾಮಾನ ಇಲಾಖೆ ಮುನ್ಸೂಚನೆ (rain alert) ನೀಡಿದೆ. ಕರಾವಳಿಯಲ್ಲಿ ಇಂದು ರೆಡ್ ಅಲರ್ಟ್ (red alert) ಘೋಷಣೆ ಮಾಡಲಾಗಿದೆ.

ನಾಳೆ ಮತ್ತು ನಾಡಿದ್ದು ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (orange alert) ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಇಂದಿನಿಂದ 5 ದಿನಗಳ ಕಾಲ ಬಿರುಗಾಳಿ ವೇಗ ಗಂಟೆಗೆ 55 ಕಿ.ಮೀ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ | Vistara Impact: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ; ಎಂಜಿನಿಯರ್‌ ಅಮಾನತಿಗೆ ಸಿಎಂ ಸೂಚನೆ

ಉತ್ತರ ಒಳನಾಡಿನ ಒಂದೆರಡು ಕಡೆ ಭಾರಿ ಮಳೆ ಸಾಧ್ಯತೆಯಿದ್ದು, ನಾಳೆಯಿಂದ 4 ದಿನಗಳ ಕಾಲ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದೆ. ಇಲ್ಲಿ ಮುಂದಿನ 5 ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version