ಬೆಂಗಳೂರು: ಬಿಸ್ಕೆಟ್ ಬಿಜಿನೆಸ್ ಮಾಡುವ ಆಮಿಷ ತೋರಿಸಿ ಅಕ್ಕಪಕ್ಕದವರಿಗೇ “ವಂಚನೆಯ ಬಿಸ್ಕೆಟ್ʼ ಹಾಕುತ್ತಿದ್ದ ಇಂಜಿನಿಯರ್ ಪೊಲೀಸರ ಅತಿಥಿಯಾಗಿದ್ದಾನೆ.
ನಗರದ ನಂಜಾಬ ಅಗ್ರಹಾರ ಬಡಾವಣೆ ನಿವಾಸಿ ಮನೋಜ್ ಬಂಧಿತ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ “”ಬಿಸ್ಕೆಟ್ ಬಿಜಿನೆಸ್ ಮಾಡುತ್ತಿದ್ದೀನಿ, ದುಡ್ಡು ಕೊಟ್ಟರೆ ನೀವೂ ಪಾರ್ಟ್ನರ್ ಆಗಬಹುದು, ನೀವು ಕೇಳುವ ಎಲ್ಲ ದಾಖಲೆಗಳನ್ನು ನೀಡುತ್ತೇನೆʼʼ ಎಂದು ಹೇಳಿ ಅಕ್ಕಪಕ್ಕದವರನ್ನು ನಂಬಿಸಿ 60 ಲಕ್ಷ ರೂಪಾಯಿ ಸಂಗ್ರಹಿಸಿ ಕಳೆದ ಆಗಸ್ಟ್‌ನಲ್ಲಿ ಪರಾರಿಯಾಗಿದ್ದ.
ಮಾತೇ ಬಂಡವಾಳ ಮಾಡಿಕೊಂಡು ಎಲ್ಲರಿಂದ ಹಣ ತೆಗೆದುಕೊಂಡಿದ್ದ ಖತರ್ನಾಕ್ ಕಳ್ಳನಿಗೆ ನಿತಿನ್ ಎಂಬಾತ 35 ಲಕ್ಷ, ನರೇಶ್ ರಾವ್ 11.5 ಲಕ್ಷ, ಕುಮುದಾ ಎಂಬುವವರು 21 ಲಕ್ಷ ರೂಪಾಯಿ ನೀಡಿ ಮೋಸ ಹೋಗಿದ್ದರು. ಹೀಗಾಗಿ ಈ ಮೂವರು ಆರೋಪಿ ಮನೋಜ್ ಸೇರಿ ಆತನ ತಾಯಿ ಶೋಭಾಬಾಯಿ, ಪತ್ನಿ ಉಷಾ, ಭಾವ ಮಹೇಶ್ ಮತ್ತು ಸಂಬಂಧಿ ಚಂದ್ರಶೇಖರ್ ವಿರುದ್ಧ ನೀಡಿದ ದೂರಿನ ಮೇರೆಗೆ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಣಕೊಟ್ಟವರು ಮನೆ ಬಳಿ ಹೋದಾಗ ಅವರಿಗೆ ಬೆದರಿಕೆ ಹಾಕುತ್ತಿದ್ದ ಮನೋಜ್, ನಗರದಿಂದ ಪರಾರಿಯಾಗಿ ಆಂಧ್ರದ ಚಿತ್ತೂರಿಗೆ ಸೇರಿದ್ದ. 9 ತಿಂಗಳಿನಿಂದ ತಿರುಪತಿ ಸುತ್ತಮುತ್ತಲೂ ಸುತ್ತಾಡಿಕೊಂಡಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಕಳೆದ ವಾರ ತಿರುಪತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್ ಯೋಧ