ಬೆಂಗಳೂರು: ಕೆಲಸ ಹುಡುಕುವ ಧಾವಂತದಲ್ಲಿ ಅಪರಿಚಿತರ ನಂಬಿ ಮನೆಯಿಂದ ಕಾಲಿಡುವ ಮುನ್ನ ಹೆಣ್ಣು ಮಕ್ಕಳೇ ಸ್ವಲ್ಪ ಎಚ್ಚರವಹಿಸಿ. ಯಾಕೆಂದರೆ ಕೆಲಸ ಕೊಡಿಸುವುದಾಗಿ ನಿಮ್ಮನ್ನು ನಂಬಿಸಿ, ಬಳಿಕ ಅತ್ಯಾಚಾರವೆಸಗಿ ಅದನ್ನೂ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್ (fraud case) ಮಾಡುವ ಜಾಲ ಬೆಂಗಳೂರಿನಲ್ಲಿ ಆ್ಯಕ್ಟಿವ್ ಆಗಿದೆ.
ಆಗ್ನೇಯ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಮುಕ ದಿಲ್ಲಿ ಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಆರೋಪಿ ದಿಲ್ಲಿ ಪ್ರಸಾದ್ ಮೂಲತಃ ಆಂಧ್ರ ಪ್ರದೇಶ ಮೂಲದವನು. ಸಾಮಾಜಿಕ ಜಾಲತಾಣದಲ್ಲಿ ಗಾಳ ಹಾಕುತಿದ್ದ ಈತ ಮೋನಿಯ ಮತ್ತು ಮ್ಯಾನೇಜರ್ ಎಂಬ ಎರಡು ನಕಲಿ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದುಕೊಂಡಿದ್ದ.
ಆ ಖಾತೆ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು ಕೆಲಸ ಕೊಡಿಸುವುದಾಗಿ ಪುಸಲಾಯಿಸುತ್ತಿದ್ದ. ನಂತರ ಅವರನ್ನು ಬೇರೆ ಸ್ಥಳಕ್ಕೆ ಕರೆಸಿಕೊಂಡು ಅತ್ಯಾಚಾರವೆಸಗಿ ವಿಡಿಯೊ ಮಾಡಿಕೊಳ್ಳತ್ತಿದ್ದ. ನಂತರ ಇದೇ ವಿಡಿಯೊ ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಅಷ್ಟೇ ಅಲ್ಲದೆ ವಿವಿಧ ಕಾರಣ ಹೇಳಿ ಯುವತಿಯರ ನಗ್ನ ಫೋಟೊಗಳನ್ನು ಪಡೆದುಕೊಳ್ಳುತ್ತಿದ್ದ. ಅದನ್ನೇ ಇಟ್ಟಿಕೊಂಡು ಬೇರೊಬ್ಬರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬೆದರಿಸುತ್ತಿದ್ದ. ಹೀಗೆ ಬಂದವರನ್ನು ಮಡಿವಾಳದ ಓಯೋ ರೂಂನಲ್ಲಿ ಬಿಟ್ಟು, ಖಾಸಗಿ ವಿಡಿಯೊ ಸೆರೆ ಹಿಡಿದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕ್ರಮಕ್ಕೆ ಹಾಕಿದ್ದ ಬಂಟಿಂಗ್ಸ್; ಆಟವಾಡುತ್ತಾ ಆಡುತ್ತಾ ಕುತ್ತಿಗೆ ಬಿಗಿದು ಪ್ರಾಣ ಕಳೆದುಕೊಂಡ ಕೋತಿ
ತನಿಖೆ ವೇಳೆ ಮೂರು ಯುವತಿಯ ಜತೆ ಈ ರೀತಿ ಕೃತ್ಯ ಮಾಡಿರುವುದು ತಿಳಿದು ಬಂದಿದೆ. ಹಲವು ನಕಲಿ ಖಾತೆಗಳು ಜತೆಗೆ 10ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ಫೋಟೊ ಹೊಂದಿರುವುದು ಪತ್ತೆ ಆಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ