ಬೆಂಗಳೂರು: ದೇಶ ಸೇವೆ ಮಾಡಲು ಯೋಧನಾಗಬೇಕೆಂದು ಗುರಿ ಹೊಂದಿರುವ ಯುವಕರನ್ನೇ ಟಾರ್ಗೆಟ್ ಮಾಡಿ ವಂಚಿಸಿರುವ (Fraud Case) ಘಟನೆ ಬೆಂಗಳೂರಲ್ಲಿ ನಡೆದಿದೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ. ಸೇನಾ ಸೆಲೆಕ್ಷನ್ ರ‍್ಯಾಲಿ ವೇಳೆ ಮಿಲಿಟರಿ ಆಫೀಸರ್ ಡ್ರೆಸ್ ಹಾಕಿ ಬಂದಿದ್ದ ಪ್ರಸನ್ ಜಿನ್ ಘೋಷ್ ಎಂಬಾತ ಅಭ್ಯರ್ಥಿಗಳಿಗೆ ವಂಚಿಸಿ ಸುಲಿಗೆ ಮಾಡಿದ್ದಾನೆ. ಈ ಸಂಬಂಧ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ತಿವಾರಿ ಅವರು ದೂರು ನೀಡಿದ್ದಾರೆ.
ಅಶೋಕ್ ನಗರ ಬಳಿ ಇರುವ ಸಿಎಂಪಿ ಸೆಂಟರ್ ಹಾಗೂ ಬಿಹಾರ ಸೇನೆ ಭರ್ತಿ ಮಾಡಿಕೊಳ್ಳುವ ಸಲುವಾಗಿ ರ‍್ಯಾಲಿ ನಡೆದಿತ್ತು. ಈ ವೇಳೆ ಆರ್ಮಿ ಶಾಲೆಗೆ ಮಿಲಿಟರಿ ಆಫೀಸರ್ ಡ್ರೆಸ್‌ನಲ್ಲಿ ಪ್ರಸನ್ ಜಿನ್ ಘೋಷ್ ಎಂಬಾತ ಬಂದಿದ್ದಾನೆ. ಅಲ್ಲಿದ್ದ ಕೆಲ ಅಭ್ಯರ್ಥಿಗಳಿಗೆ ಹಿಂದಿಯಲ್ಲಿ ಮಾತನಾಡಿ ಕೆಲ ಸಲಹೆಗಳನ್ನು ನೀಡಿದ್ದಾನೆ.
ಇದನ್ನೂ ಓದಿ: KPSC exam : ಕೆಪಿಎಸ್ಸಿ ಪರೀಕ್ಷಾ ಕೇಂದ್ರಕ್ಕೆ ಮಕ್ಕಳೇ ಸೆಕ್ಯುರಿಟಿ ಆಫೀಸರ್ಸ್!
ಇತ್ತ ಅಸ್ಸಾಂ ಹಾಗು ಬಿಹಾರ್ ಮೂಲದ ಅಭ್ಯರ್ಥಿಗಳು ಈ ವಂಚಕನನ್ನು ಆಫೀಸರ್ ಎಂದೇ ನಂಬಿದ್ದರು. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದು ಬೇಡ. ನಾನೇ ನಿಮ್ಮನ್ನು ಸೇನೆಗೆ ಸೇರಿಸುತ್ತಿನಿ ಎಂದು ಅಭ್ಯರ್ಥಿಗಳಿಗೆ ನಂಬಿಸಿದ್ದ. ಜತೆಗೆ 20 ಅಭ್ಯರ್ಥಿಗಳಿಂದ ತಲಾ 30 ಸಾವಿರ ರೂ. ಹಣ ಪಡೆದಿದ್ದ. ನಂತರ ಸಿಎಂಪಿ ಸ್ಟ್ಯಾಂಪ್ ಹಾಗೂ ನಕಲಿ ಸಹಿ ಮಾಡಿ ಅಪಾಯಿಂಟ್ಮೆಂಟ್ ಲೆಟರ್ ನೀಡಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಿ ಎಂದಿದ್ದ.
ಅಪಾಯಿಂಟ್ಮೆಂಟ್ ಲೆಟರ್ ಸಿಕ್ಕ ಸಂತಸದಲ್ಲಿದ್ದ ಯುವಕರು ಆತ ಹೇಳಿದ ದಿನಾಂಕದಂದು ನೀಲಸಂದ್ರದ ಸಿಎಂಪಿ ಸೆಂಟರ್ ಆ್ಯಂಡ್ ಸ್ಕೂಲ್‌ಗೆ ಬಂದಿದ್ದಾರೆ. ಆಗಲೇ ಅಸಲಿ ಸಂಗತಿ ಹೊರ ಬಿದ್ದಿತ್ತು. ಈ ವೇಳೆ ಆರ್ಮಿ ಕಡೆಯಿಂದ ಯಾವುದೇ ಅಪಾಯಿಂಟ್ಮೆಂಟ್ ಮಾಡಿಕೊಂಡಿಲ್ಲ ಇದೆಲ್ಲಾ ನಕಲಿ ಎಂದು ತಿಳಿಸಿದ್ದಾರೆ.
ನಂತರ ಯುವಕರು ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಈ ಸಂಬಂಧ ಖುದ್ದು ಲೆಫ್ಟಿನೆಂಟ್ ಕರ್ನಲ್ ಅವರೇ ದೂರು ನೀಡಿದ್ದಾರೆ. ಮಿಲಿಟರಿ ಸೀಲುಗಳು ಹಾಗೂ ಇನ್ನಿತರ ಸೂಕ್ಷ್ಮ ವಸ್ತುಗಳು ಆತನಿಗೆ ಸಿಕ್ಕಿದಾದರೂ ಹೇಗೆ ಎಂಬುದನ್ನು ಪತ್ತೆ ಮಾಡಬೇಕಿದೆ. ಸದ್ಯ ದೂರು ಪಡೆದಿರುವ ಅಶೋಕ್ ನಗರ ಪೊಲೀಸರು ನಕಲಿ ಮಿಲಿಟರಿ ಅಧಿಕಾರಿಗಾಗಿ ಹುಡುಕಾಟ ನಡೆಸಿದ್ದಾರೆ.
ಕೆಪಿಎಸ್ಸಿ ಪರೀಕ್ಷಾ ಕೇಂದ್ರಕ್ಕೆ ಮಕ್ಕಳೇ ಸೆಕ್ಯುರಿಟಿ ಆಫೀಸರ್ಸ್
ಮಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆಯುವ ಅಕ್ರಮವನ್ನು ತಡೆಗಟ್ಟಲು ಇಲಾಖೆ ಅದೆಷ್ಟೇ ಕಠಿಣ ಕ್ರಮ ತಂದರೂ ಪ್ರಯೋಜನ ಆಗುತ್ತಿಲ್ಲ. ಸದ್ಯ ಕೆಪಿಎಸ್ಸಿ ಪರೀಕ್ಷಾ ಕೇಂದ್ರದಲ್ಲಿ (KPSC exam) ಅಭ್ಯರ್ಥಿಗಳ ತಪಾಸಣೆಗೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಮಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ತಪಾಸಣೆಗೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ರಾಜ್ಯ ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ ಹುದ್ದೆಗೆ ಪರೀಕ್ಷೆ ನಡೆಯುತ್ತಿದೆ. ಆದರೆ ಮಂಗಳೂರಿನ ಬಲ್ಮಠ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನೇ ಸೆಕ್ಯುರಿಟಿಯಾಗಿ ಬಳಸಿಕೊಂಡು ಬೇಜವಾಬ್ದಾರಿ ತೋರಿದ್ದಾರೆ.
ಇದನ್ನೂ ಓದಿ: ಮೊಬೈಲ್ ಟಾರ್ಚ್ ಆನ್ ಮಾಡಿದ್ದೇ ಸಿಲಿಂಡರ್ ಬ್ಲ್ಯಾಸ್‌ಗೆ ಕಾರಣ; ಹಸುಗೂಸು ಸೇರಿ 7 ಮಂದಿ ಗಂಭೀರ
ಮೆಟಲ್ ಡಿಟೆಕ್ಟರ್ ಹಿಡಿದು ನಿಂತ ವಿದ್ಯಾರ್ಥಿಗಳು ಬೇಕಾಬಿಟ್ಟಿಯಾಗಿ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಪರೀಕ್ಷಾ ಕ್ರಮವನ್ನು ತಡೆಯುವ ದೃಷ್ಟಿಯಿಂದ ಮೊಬೈಲ್ ಜಾಮರ್, ಮೆಟಲ್ ಡಿಟೆಕ್ಟರ್, ಬಯೋ ಮೆಟ್ರಿಕ್ ಫೇಸ್ ಡಿಟೆಕ್ಷನ್ ಹಾಗೂ ಬಾಡಿ ಕ್ಯಾಮೆರಾ ಬಳಕೆಗೆ ಕೆಪಿಎಸ್‌ಸಿ ಸೂಚಿಸಿದೆ.
ಆದರೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾಟಾಚಾರದ ತಪಾಸಣೆಯನ್ನು ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಏಳೆಂಟು ವಿದ್ಯಾರ್ಥಿಗಳಿಂದ ಅಭ್ಯರ್ಥಿಗಳ ತಪಾಸಣೆ ಮಾಡಲಾಗುತ್ತದೆ. ಭದ್ರತೆ ಬಗ್ಗೆ ಅರಿವೇ ಇಲ್ಲದ ಮಕ್ಕಳನ್ನು ಪರೀಕ್ಷಾ ಕೇಂದ್ರದ ಭದ್ರತೆಗೆ ನೇಮಕ ಮಾಡಲಾಗಿದೆ. ಕೆಪಿಎಸ್ಸಿ ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ