ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಆಸೆ ತೋರಿಸಿ ಜನರಿಗೆ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು (Fraud Case) ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು 8 ಮಂದಿ ನಯ ವಂಚಕರ ದೊಡ್ಡ ಜಾಲವೊಂದನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಅಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್, ರಾಜ್‌ಕುಮಾರ್, ಗಂಗರಾಜು, ಕುಮಾರೇಶ್ ಹಾಗೂ ಮೂರ್ತಿ ನಾಯಕ್, ಸಿದ್ದರಾಜು ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ.
ಅಮಾಯಕರ ಆಸೆಯನ್ನು ಬಂಡವಾಳ ಮಾಡಿಕೊಂಡು ಈ ವಂಚಕರು ಹೇಗೆ ಯಾಮಾರಿಸಬೇಕೆಂದು ಚೆನ್ನಾಗಿ ತಿಳಿದುಕೊಂಡಿದ್ದರು. ಈ ಖತರ್ನಾಕ್‌ಗಳು ಆರ್‌ಬಿಐನ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ವಿದೇಶದಿಂದ 75 ಸಾವಿರ ಕೋಟಿ ರೂಪಾಯಿ ಬಂದಿದೆ. ಅದನ್ನು ಡ್ರಾ ಮಾಡಿಕೊಳ್ಳಲು ನೂರಾರು ಕೋಟಿ ರೂಪಾಯಿ ಖರ್ಚಾಗುತ್ತದೆ.
ಆದರೆ 20-40 ಲಕ್ಷ ರೂ. ನೀಡಿದರೆ ಏಳೂವರೆ ಕೋಟಿ ರೂಪಾಯಿ ವಾಪಸ್ ನೀಡುವುದಾಗಿ ಕೆಲವರಿಗೆ ಗಾಳ ಹಾಕಿದ್ದರು. ಈ ನಯವಂಚಕರ ಬಣ್ಣದ ಮಾತುಗಳನ್ನು ನಿಜ ಎಂದು ನಂಬಿದ್ದ ಕೆಲವರು ವಂಚಕರ ಕೈಗೆ ಲಕ್ಷ ಲಕ್ಷ ಕೊಟ್ಟು ಕೈ ಸುಟ್ಟುಕೊಂಡಿದ್ದರು.
ಇನ್ನು ಇವರು ಯಾವ ರೀತಿ ಕಥೆ ಕಟ್ಟುತ್ತಿದ್ದರೆಂದರೆ ಆ ಕಥೆಗೆ ತಕ್ಕಂತೆ ಮುಂಬೈ ಮತ್ತು ದೆಹಲಿಯ ಆರ್‌ಬಿಐ ಕಚೇರಿಗೆ ಕರೆದುಕೊಂಡು ಹೋದಂತೆ, ಆರ್‌ಬಿಐ ಫೋಟೊ ತೆಗೆಸಿ ಹಣ ಅಕೌಂಟ್‌ನಲ್ಲಿ ಇರುವ ರೀತಿ ಬಿಂಬಿಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ಸಿನಿಮಾ ಸ್ಟೈಲ್‌ನಲ್ಲಿ ಆರ್‌ಬಿಐನ ನಕಲಿ ನೌಕರರನ್ನು ಸೃಷ್ಟಿಸುತ್ತಿದ್ದರು.
ಸದ್ಯ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 11 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಜತೆಗೆ ಆರೋಪಿಗಳ ಅಕೌಂಟ್‌ನಲ್ಲಿದ್ದ 16 ಲಕ್ಷ ರೂಪಾಯಿಯನ್ನು ಸೀಜ್ ಮಾಡಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ಕಾರು ಹಾಗೂ ನಕಲಿ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ