ಬೆಂಗಳೂರು: ಐಪಿಎಸ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬರೋಬ್ಬರಿ 2.5 ಕೋಟಿ ರೂಪಾಯಿ ವಂಚನೆ (Fraud case) ಮಾಡಿದ್ದು, ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀನಿವಾಸ್ ಎಂಬಾತನೇ ವೆಂಕಟನಾರಾಯಣ ಎಂಬುವವರಿಂದ ಕೋಟಿ ಕೋಟಿ ಹಣವನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ.
ಸಾಮಾನ್ಯವಾಗಿ ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಸರ್ಕಾರಿ ವಾಹನವಾಗಿ ಇನ್ನೋವಾ ಕಾರುಗಳನ್ನು ನೀಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಶ್ರೀನಿವಾಸ ಎಲ್ಲೇ ಹೋದರೂ ಇನ್ನೋವಾ ಕಾರನ್ನೇ ಬಳಸುತ್ತಿದ್ದ. ತಾನು ಬೆಂಗಳೂರು ದಕ್ಷಿಣ ವಿಭಾಗದ ಎಎಸ್‌ಪಿ ಎಂದು ವೆಂಕಟನಾರಾಯಣ ಬಳಿ ಪರಿಚಯ ಮಾಡಿಕೊಂಡಿದ್ದ. ಐಪಿಎಸ್ ಅಧಿಕಾರಿ ಎಂದು ನಂಬಿದ ವೆಂಕಟನಾರಾಯಣ ಕೂಡ ಸ್ವಲ್ಪ ಮಟ್ಟಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದರು.
ನಕಲಿ ಎಸ್‌ಪಿ ಶ್ರೀನಿವಾಸ್ ತಾನು ಪ್ರೊಬೆಷನರಿ ಎಸ್‌ಪಿ ಆಗಿದ್ದು, ಆದಷ್ಟು ಬೇಗ ನಿಮ್ಮ ಡಿವಿಷನ್‌ಗೆ ಬರುತ್ತೇನೆ ಎನ್ನುತ್ತಾ ಪೊಲೀಸ್ ಸಿಬ್ಬಂದಿಯನ್ನು ಕೂಡ ನಂಬಿಸಿದ್ದ ಎಂದು ತಿಳಿದು ಬಂದಿದೆ. ಈ ನಕಲಿ ಐಪಿಎಸ್ ಅಧಿಕಾರಿ ಠಾಣೆಗೆ ಬಂದರೆ ಸಿಬ್ಬಂದಿ ಎಲ್ಲ ಎದ್ದು ಸೆಲ್ಯೂಟ್ ಮಾಡುತ್ತಿದ್ದರು. ಆದರೆ, ಯಾರಿಗೂ ಈತ ಯಾವ ಡಿಪಾರ್ಟ್ಮೆಂಟ್ ಅಧಿಕಾರಿ ಎಂದು ತಿಳಿದಿರಲಿಲ್ಲ. ಖಾಕಿ ಬಟ್ಟೆಗೆ ಗೌರವ ನೀಡುತ್ತಿದ್ದ ಪೊಲೀಸ್ ಸಿಬ್ಬಂದಿಗೆ ನಕಲಿ ಐಪಿಎಸ್ ಅಧಿಕಾರಿಯ ಅಸಲಿಯತ್ತು ತಿಳಿದು ಈಗ ಪೆಚ್ಚಾಗಿದ್ದಾರೆ.
450 ಕೋಟಿ ರೂ. ಡೀಲ್ 250 ಕೋಟಿ ರೂ ಸಿಗುತ್ತೆ!
ವೆಂಕಟನಾರಾಯಣ, ಶ್ರೀನಿವಾಸ್ ಇನ್ನು ಹಲವರು ಸೇರಿ ಕಾರಿನಲ್ಲಿ ತಿರುಪತಿಗೆ ಟ್ರಿಪ್‌ಗೆ ಹೋಗಿದ್ದಾಗ, ಮೈಸೂರಿನಲ್ಲಿ ಲಿಟಿಗೇಷನ್ ಪ್ರಾಪರ್ಟಿ ಕೇಸನ್ನು ಹ್ಯಾಂಡಲ್ ಮಾಡುತ್ತಿದ್ದೇನೆ. ಕೇಸ್ ಎಲ್ಲ ಮುಗಿದು ರೆವಿನ್ಯೂ ಇಲಾಖೆಯ ಕೆಲಸ ಮಾತ್ರೆ ಪೆಂಡಿಂಗ್ ಇದೆ. ಈ ಕೇಸು ಒಟ್ಟು 450 ಕೋಟಿ ರೂಪಾಯಿ ಡಿಲೀಂಗ್ ಇದ್ದು, ಇದರಲ್ಲಿ 250 ಕೋಟಿ ರೂಪಾಯಿ ಕಮಿಷನ್ ಬರುತ್ತದೆ. ಈ ಸಂಬಂಧ ತನಗೆ ಹಣಕಾಸಿನ ಅವಶ್ಯಕತೆ ಇದೆ ಎಂದು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಇಷ್ಟರೊಳಗೆ ವೆಂಕಟನಾರಾಯಣ ಅವರ ಬಳಿ 49 ಲಕ್ಷ ರೂಪಾಯಿ ಪಡೆದು, ಸ್ವಲ್ಪವೇ ದಿನಗಳ ಬಳಿಕ ವಾಪಸ್ ನೀಡಿದ್ದ. ಇದರಿಂದ ಶ್ರೀನಿವಾಸ್ ಮೇಲೆ ಅವರಿಗೆ ನಂಬಿಕೆ ಬಂದಿತ್ತು.
ಇದನ್ನೂ ಓದಿ: Special Snake : ನರಗುಂದ ಅಂಚೆ ಕಚೇರಿಗೆ ಪಾರ್ಸೆಲ್ ಆಗಿ ಬಂತಾ ವಿಶೇಷ ಹಾವು! ಗಾಬರಿಯಾದರು ಸಿಬ್ಬಂದಿ!
ಈಗ ಶ್ರೀನಿವಾಸ್ ಹೇಳಿದ ಈ ಕಥೆಯನ್ನು ನಂಬಿದ ವೆಂಕಟನಾರಾಯಣ ತನ್ನ ಬಳಿ ಇದ್ದ ಹಣ ಹಾಗೂ ಸ್ನೇಹಿತರ ಬಳಿಯಿಂದಲೂ ಹಣ ಹೊಂದಿಸಿ, ಹಂತ ಹಂತವಾಗಿ ಹಣ ಕೊಟ್ಟಿದ್ದಾನೆ. 1 ಕೋಟಿ 75 ಲಕ್ಷ ರೂ. ಸಿಗುತ್ತಿದ್ದಂತೆ ಈ ನಕಲಿ ಅಧಿಕಾರಿಯ ಅಸಲಿಯತ್ತು ಹೊರಬಿದ್ದಿದೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಶ್ರೀನಿವಾಸ್ ಎಸ್ಕೇಪ್ ಆಗಿದ್ದಾನೆ. ಇತ್ತ ಸ್ನೇಹಿತರಿಂದಲ್ಲೇ ಕೋಟಿ ಕೋಟಿ ಹಣ ಪಡೆದ ಹಿನ್ನೆಲೆಯಲ್ಲಿ ವೆಂಕಟನಾರಾಯಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಈ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ