ಬೆಂಗಳೂರು: ನಿಮಗೆ ನಿಮ್ಮ ಮಕ್ಕಳಿಗೆ ಜಾಹೀರಾತಿನಲ್ಲಿ ಅಭಿನಯಿಸಲು ಅವಕಾಶ ಕೊಡುತ್ತೇವೆ. ಫ್ಯಾಷನ್ ಶೋನಲ್ಲಿ (Fashion Show) ಗೆದ್ದರೆ ಸಾಕು ನೀವೆ ಹೀರೋ- ಹೀರೋಯಿನ್ ಎಂದು ಕಾಗೆ ಹಾರಿಸಿ ನೂರಾರು ಜನರಿಗೆ ಪಂಗನಾಮ (Fraud Case) ಹಾಕಿದ್ದಾರೆ.
ಜಾಹೀರಾತಿನಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಮಾಡೆಲಿಂಗ್ ಮಾಡಿ ಜೀವನ ರೂಪಿಸಿಕೊಳ್ಳಬಹುದು ಎಂದು ಬಂದವರಿಗೆಲ್ಲ ಸೂಪರ್ ಮಾಡೆಲ್ ಆಫ್ ಇಂಡಿಯಾ ಎಂಬ ಹೆಸರಲ್ಲಿ ಮೋಸ ಮಾಡಿದ್ದಾರೆ. ಒಬ್ಬೊಬ್ಬರಿಂದ 10 ರಿಂದ 20 ಸಾವಿರ ರೂ. ಪಡೆದು ಗ್ಲಾಮರ್ ಆಫ್ ಪ್ರಾಡಕ್ಟ್ ಎಂಬ ಹೆಸರಿನ ಕಂಪನಿ ಮೋಸ ಮಾಡಿದೆ.
ಗ್ಲಾಮರ್ ಆಫ್ ಪ್ರಾಡಕ್ಟ್ ಎಂಬ ಕಂಪನಿ ಜೂ.25ರಂದು ಫ್ಯಾಷನ್ ಶೋ ಆಯೋಜನೆ ಮಾಡಿತ್ತು. ಮಕ್ಕಳಿಂದ ಹಿಡಿದು ಯುವಕ ಯುವತಿಯರಿಗಾಗಿ ಈ ಫ್ಯಾಶನ್ ಶೋ ಆಯೋಜನೆ ಮಾಡಲಾಗಿತ್ತು. ಇದ್ದರಲ್ಲಿ ಗೆದ್ದವರಿಗೆ ದೊಡ್ಡ ದೊಡ್ಡ ಜಾಹೀರಾತುಗಳಲ್ಲಿ ನಟಿಸುವ ಹಾಗೂ ಕೆಲಸ ಮಾಡುವ ಅವಕಾಶ ಕೊಡಿಸ್ತೇವೆ ಎಂದು ಶೋ ಆಯೋಜನೆ ಮಾಡಿದ್ದರು. ಒಬ್ಬೊಬ್ಬರಿಂದ ಸಾವಿರಾರು ರೂಪಾಯಿ ವಸೂಲಿ ಮಾಡಲಾಗಿತ್ತು.
ಎರಡು ತಿಂಗಳ ಹಿಂದೆಯೇ ಮಾಡಬೇಕಿದ್ದ ಫ್ಯಾಷನ್ ಶೋವನ್ನು ಇಂದು ಭಾನುವಾರ ಹೇರೋಹಳ್ಳಿ ಬಳಿಯ ಚೌಟ್ರಿಯೊಂದರಲ್ಲಿ ಆಯೋಜನೆ ಮಾಡಲಾಗಿತ್ತು. ಮಂಗಳೂರು, ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಮಕ್ಕಳು, ಪೋಷಕರು ಭಾಗಿಯಾಗಿದ್ದರು. ಆದರೆ ಇಲ್ಲಿನ ವ್ಯವಸ್ಥೆ ಕಂಡು ಜನ ತಿರುಗಿ ಬಿದಿದ್ದಾರೆ. ಸ್ಥಳದಲ್ಲಿ ಆಯೋಜಕರು ಇರಲಿಲ್ಲ, ಯಾರೋ ಒಬ್ಬ ಆ್ಯಂಕರ್‌ನ ಕಳುಹಿಸಿ ಸಹಿ ಇಲ್ಲದ ಸರ್ಟಿಫಿಕೇಟ್ ಕೊಟ್ಟು ಕಳುಹಿಸುತ್ತಿದ್ದಾರೆ ಎಂದು ಶೋಗೆ ಬಂದವರು ಗಲಾಟೆ ಮಾಡಿದ್ದಾರೆ.
ಇದನ್ನೂ ಓದಿ: Street Dogs Survey: ಡ್ರೋನ್‌ನಲ್ಲೇ ಬೀದಿ ನಾಯಿಗಳ ಗಣತಿ; ಮೈಕ್ರೋ ಚಿಪ್ ಅಳವಡಿಕೆಗೆ ಪಾಲಿಕೆ ಸಜ್ಜು
ಆಯೋಜಕನ ಫೋನ್ ಸ್ವಿಚ್ಡ್ ಆಫ್!
ಜಾಹೀರಾತಿನಲ್ಲಿ ನಟಿಸುವ ಅವಕಾಶಕ್ಕಾಗಿ ಬಂದವರಿಗೆ ನಾಮ ಹಾಕಿದ್ದಾರೆ. ಬ್ರ್ಯಾಂಡ್ ಅಂಬಾಸಿಡರ್ ಕನಸು ಕಂಡವರಿಗೆ ಚೌಟ್ರಿಯಲ್ಲೇ ನಿರಾಸೆ ಉಂಟು ಮಾಡಿದ್ದಾರೆ. ಫ್ಯಾಷನ್ ಶೋ ಆಯೋಜನೆ ಮಾಡಿದವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಜನರೆಲ್ಲರೂ ಆ್ಯಂಕರಿಂಗ್ ಮಾಡಲು ಬಂದವಳನ್ನು ಹಿಡಿದುಕೊಂಡರು. ಯಾರೊ ಮಾಡಿದಾಗ ತಪ್ಪಿಗೆ ನಿರೂಪಕಿ ಕಣ್ಣೀರು ಹಾಕಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಎಲ್ಲರನ್ನು ಠಾಣೆಗೆ ಕರೆದುಹೋಗಿದ್ದಾರೆ. ದುಡ್ಡು ಕೊಟ್ಟು ಫ್ಯಾಷನ್ ಶೋ ಮಾಡಲು ಬಂದವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಫೋಸ್ಟ್ ನಂಬಿ ಸಾವಿರಾರು ರೂಪಾಯಿ ಕೊಟ್ಟು ಈಗ ಕಣ್ಣೀರು ಹಾಕಿಕೊಂಡು ಹೋಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ