ಬೆಂಗಳೂರು: ಇಲ್ಲಿನ ಚಿಕ್ಕಬಾಣವರದ ಕೆರೆಗುಡ್ಡದಹಳ್ಳಿ ಸಮೀಪ ಚೀಟಿ ಹಣ ಗುಳುಂ ಮಾಡಿ ಇಡೀ ಕುಟುಂಬವೇ (Fraud Case) ಪರಾರಿ ಆಗಿದೆ. ವೈದ್ಯರು, ಬ್ಯುಸಿನೆಸ್‌ಮ್ಯಾನ್ ಸೇರಿ ನೂರಕ್ಕೂ ಹೆಚ್ಚು ಜನರಿಂದ ಚೀಟಿ ಹೆಸರಲ್ಲಿ ಹಣ ಪಡೆದಿದೆ. ವಿಶ್ವನಾಥ್ ಹಾಗೂ ಈತನ ಸಹೋದರ ಮಂಜುನಾಥ್ ಸೇರಿ ಪತ್ನಿ ವನಿತಾ, ಮುನಿಸ್ವಾಮಿ, ಲಕ್ಷ್ಮಿ ನಾರಾಯಣ್ ಸೇರಿ ಒಂದೇ ಕುಟುಂಬದ 8 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಬಂದ ಚೀಟಿ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದ ಈ ವಂಚಕರು, ಅದೇ ಹಣದಲ್ಲೆ ಕೋಲಾರದಲ್ಲಿ ಬೃಹತ್ ಬಂಗಲೆಯೊಂದನ್ನು ಕಟ್ಟಿಸುತ್ತಿದೆ. ವಿದ್ಯಾರಣ್ಯಪುರ, ಸೋಲದೇವನಹಳ್ಳಿಯಲ್ಲಿ ಐಶಾರಾಮಿ ಮನೆಯಲ್ಲಿ ಈ ಕುಟುಂಬ ವಾಸವಾಗಿದೆ. ಪ್ರಾರಂಭದಲ್ಲಿ ಸಕಾಲಕ್ಕೆ ಚೀಟಿ ಹಣ ನೀಡುತ್ತಿದ್ದ ಖತರ್ನಾಕ್ ಕುಟುಂಬ ನಂತರದ ದಿನದಲ್ಲಿ ಚೀಟಿ ಕಟ್ಟುವವರಿಗೆ ಸರಿಯಾಗಿ ಹಣ ಪಾವತಿಸುತ್ತಿರಲಿಲ್ಲ. ಸುಮಾರು 10 ವರ್ಷಗಳಿಂದ ಲೈಸನ್ಸ್ ಪಡೆದು ಕಮಿಷನ್ ಆಧಾರದ ಮೇಲೆ ಚೀಟಿ ನಡೆಸುತ್ತಿರುವುದಾಗಿ ನಂಬಿಸಿದ್ದಾರೆ.
ಬರೋಬ್ಬರಿ 19 ಮಂದಿಯಿಂದ ಚೀಟಿ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಕಿಲಾಡಿ ಫ್ಯಾಮಿಲಿ ಚೀಟಿ ಮುಗಿದ ನಂತರ ಚೀಟಿ ಹಣ ನೀಡದೆ ಸತಾಯಿಸಿದ್ದಾರೆ. ಎಲ್ಲರಿಂದಲೂ ಸೇರಿ ಸುಮಾರು 2,31 ಕೋಟಿ ರೂ. ಚೀಟಿ ಹಣವನ್ನು ಕಟ್ಟಿಸಿಕೊಂಡು ವಂಚನೆ ಮಾಡಿದ್ದಾರೆ.
ಹಣ ಕೊಡುವಂತೆ ಕೇಳಿದರೆ ಅವಾಚ್ಯ ಶಬ್ಧಗಳಿಂದ ಬೈಯುವುದು ಹಾಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ 19 ಜನರಿಂದ 2.31 ಕೋಟಿ ವಂಚನೆ ಮಾಡಿದ್ದಾರೆಂದು ದಾಖಲೆ ಸಮೇತ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಫ್ರಾಡ್ ಫ್ಯಾಮಿಲಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಹತ್ತು ದಿನಗಳು ಕಳೆದರೂ ವಂಚಕರು ಪೊಲೀಸರ ಕಣ್ಣಿಗೆ ಬಿದ್ದಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ