ಆನೇಕಲ್: ಇಲ್ಲಿನ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ವಂಚಕ ದಂಪತಿ (Fraud Case) ಚೀಟಿ ಹಣ ಪಡೆದು ಪರಾರಿ ಆಗಿರುವ ಘಟನೆ ನಡೆದಿದೆ. ಹೂವಿನ ವ್ಯಾಪಾರಿಗಳು ಸೇರಿದಂತೆ ಸಣ್ಣ ಪುಟ್ಟ ಕೂಲಿ ಕೆಲಸ ಮಾಡುವವರು ಕಷ್ಟ ಕಾಲಕ್ಕೆ ನೆರವಾಗಲೆಂದು ಬನ್ನೇರುಘಟ್ಟ ಸಮೀಪದ ಜೆಲ್ಲಿಮಿಷನ್ ನಿವಾಸಿಯಾದ ಪೌಲಿನಾ ಹಾಗೂ ಮಂಜುನಾಥ್ ದಂಪತಿ ಬಳಿ ಚೀಟಿ ಹಾಕಿದ್ದರು. ಆದರೆ ಇದೀಗ ಹಣದ ಸಮೇತ ಪರಾರಿ ಆಗಿದ್ದಾರೆ.
ಪ್ರಾರಂಭದಲ್ಲಿ ಸಕಾಲಕ್ಕೆ ಚೀಟಿ ಹಣ ನೀಡುತ್ತಿದ್ದ ಖತರ್ನಾಕ್ ದಂಪತಿ ನಂತರದ ದಿನದಲ್ಲಿ ಚೀಟಿ ಕಟ್ಟುವವರಿಗೆ ಸರಿಯಾಗಿ ಹಣ ಪಾವತಿಸುತ್ತಿರಲಿಲ್ಲ. ಹೆಚ್ಚಾಗಿ ಮಹಿಳೆಯರ ಬಳಿಯೆ ಚೀಟಿ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಕಿಲಾಡಿ ದಂಪತಿ, ಚೀಟಿ ಮುಗಿದ ನಂತರ ಚೀಟಿ ಹಣ ನೀಡದೆ ಸತಾಯಿಸಿದ್ದಾರೆ.
ಚೀಟಿ ಹಣ ಕೇಳಲು ಹೋದ ಮಹಿಳೆಯರಿಗೆ ಮಂಜುನಾಥ್ ಧಮ್ಕಿ ಹಾಕಿದ್ದಾನೆ. ಜತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇತ್ತ ಆಕ್ರೋಶಗೊಂಡ ಚೀಟಿದಾರರು ಇದೀಗ ಬನ್ನೇರುಘಟ್ಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಪೌಲಿನಾ ಮತ್ತು ಮಂಜುನಾಥ್ ದಂಪತಿ ಪರಾರಿಯಾಗಿದ್ದಾರೆ. ಹೀಗಾಗಿ ನ್ಯಾಯ ಕೊಡಿಸುವಂತೆ ನೊಂದ ಮಹಿಳೆಯರು ಒತ್ತಾಯಿಸಿದ್ದಾರೆ.
ಚೀಟಿ ಹಾಕಿದವರಲ್ಲಿ ಬಹುತೇಕರು ಹೂ ಮಾರುವವರು, ಕೂಲಿ ಮಾಡುವವರು, ಮನೆಗೆಲಸ ಮಾಡುವವರು, ಅಂಗವಿಕಲರು ಸೇರಿ ಸಾಕಷ್ಟು ಮಂದಿ ಬಡವರು ಇದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿಗೆ 1 ಕೋಟಿಗೂ ಹೆಚ್ಚು ಹಣ ತೆಗೆದುಕೊಂಡು ವಂಚಿಸಿದ್ದಾರೆ. ವಂಚನೆ ಬಗ್ಗೆ ಪೌಲಿನಾ ಹಾಗೂ ಮಂಜುನಾಥ್ ದಂಪತಿ ಮೇಲೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ನೊಂದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು; ಅವರು ಭಾರತದ ಪ್ರಜೆಗಳಲ್ಲವೇ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನೆ
ಹಣ ಕಳೆದುಕೊಂಡವರಲ್ಲಿ ಕ್ಯಾನ್ಸರ್ ರೋಗಿ ಸಹ ಇದ್ದು, ಮುಂದಿನ ತಿಂಗಳು ಕ್ಯಾನ್ಸರ್ ಆಪರೇಷನ್ ಮಾಡಿಸಿಕೊಳ್ಳಬೇಕಿದೆ. ಕರೆ ಮಾಡಿ ಹಣ ಕೇಳಿದರೆ ನಾವು ಕೊಟ್ಟಾಗ ನೀವು ತೆಗೆದುಕೊಳ್ಳಬೇಕು ಎಂದು ಮಂಜುನಾಥ್ ಧಮ್ಕಿ ಹಾಕಿದ್ದಾನೆ ಎಂದು ವಂಚನೆಗೊಳಗಾದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.