Site icon Vistara News

Fraud Case in bengaluru: ಯೂಟ್ಯೂಬ್ ನೋಡಿ ತೂಕದ ಸ್ಕೇಲ್‌ನಲ್ಲಿ ಗೋಲ್ಮಾಲ್; ವಂಚಿಸುತ್ತಿದ್ದ 17 ಮಂದಿ ಸೆರೆ

#image_title

ಬೆಂಗಳೂರು: ನೀವೇನಾದೂ ಮನೆಗೆ ಕೆ.ಜಿ ಗಟ್ಟಲೇ ದಿನಸಿ ಸಾಮಗ್ರಿಯನ್ನು ಖರೀದಿ ಮಾಡುವುದಾದರೆ ಈ ಸುದ್ದಿ ನಿಮಗಾಗಿಯೇ. ನಿಮ್ಮ ಕಣ್ಣೆದುರಿಗೆ ನಿಮಗೆ ತಿಳಿಯದ ರೀತಿಯಲ್ಲಿ ವಂಚನೆ ಮಾಡುವ ಖದೀಮರು (Fraud Case) ಇದ್ದಾರೆ. ತೂಕ ಮಾಡುವ ಸ್ಕೇಲ್‌ನಲ್ಲಿ ಚಿಪ್ ಅಳವಡಿಸಿ ಗ್ರಾಹಕರಿಗೆ ವಂಚಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಮಾಪನ ಶಾಸ್ತ್ರ ಇಲಾಖೆಯಿಂದ ಪರವಾನಗಿ ಪಡೆದು ಸ್ಕೇಲ್ ಸರ್ವಿಸ್ ಮಾಡುವ ಕೆಲಸ ಮಾಡುತ್ತಿದ್ದ ಆರೋಪಿ ಸೋಮಶೇಖರ್ ಮತ್ತು ನವೀನ್ ಕುಮಾರ್ ಈ ಪ್ರಕರಣದ ಕಿಂಗ್ ಪಿನ್‌ಗಳೆಂದು ತಿಳಿದು ಬಂದಿದೆ. ಯೂಟ್ಯೂಬ್ ನೋಡಿ ತೂಕದ ಯಂತ್ರದಲ್ಲಿ ವೈಯರ್ ಬದಲಾವಣೆ ಮಾಡುವುದನ್ನು ಕಲಿತುಕೊಂಡಿದ್ದರು.

ತೂಕದ ಯಂತ್ರದಲ್ಲಿರುವ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಚಿಪ್‌ನಲ್ಲಿ ಬದಲಾವಣೆ ಮಾಡಿ ಸ್ಕೇಲ್‌ನಲ್ಲಿ ಹೆಚ್ಚುವರಿ ಬಟನ್ ಹಾಗೂ ರಿಮೋಟ್ ಅಳವಡಿಸುತ್ತಿದ್ದರು. ಇದೇ ರೀತಿ ಎರಡ್ಮೂರು ವರ್ಷಗಳಿಂದ ತೂಕದ ಸ್ಕೇಲ್‌ನಲ್ಲಿ ಮಾರ್ಪಾಡು ಮಾಡಿ ಮಾಲೀಕರಿಂದ ಹಣ ಪಡೆದು ತೂಕದ ಯಂತ್ರ ನೀಡುತ್ತಿದ್ದರು. ನಂತರ ಇದನ್ನು ಪಡೆದ ಅಂಗಡಿ ಮಾಲೀಕರು ಮಾಂಸ, ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿಗಳಲ್ಲಿ ತೂಕ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸಿ ಹಣ ಮಾಡುತ್ತಿದ್ದರು.

ಈ ವಂಚನೆ ಕುರಿತು ಇಬ್ಬರು ಗ್ರಾಹಕರಿಂದ ಬಂದ ಮಾಹಿತಿ ಮೇರೆಗೆ ವಿಶೇಷ ತಂಡ ರಚಿಸಿಕೊಂಡು‌ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಿವಿಧ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸೋಮಶೇಖರ್, ನವೀನ್ ಕುಮಾರ್, ವಿನೇಶ್ ಪಟೇಲ್, ರಾಜೇಶ್ ಕುಮಾರ್, ವ್ಯಾಟರಾಯನ್ ಹಾಗೂ ಮೇಘನಾಧಮ್, ಲೋಕೆಶ್ ಕೆ, ಲೋಕೆಶ್ ಎಸ್.ಆರ್., ಗಂಗಾಧರ್, ಚಂದ್ರಶೇಖರಯ್ಯ, ಅನಂತಯ್ಯ, ರಂಗನಾಥ್, ಶಿವಣ್ಣ, ಸನಾವುಲ್ಲಾ, ವಿಶ್ವನಾಥ್, ಮಹಮದ್ ಈಶಾಕ್ ಹಾಗೂ ಮಧುಸೂಧನ್ ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: Karnataka Rain: ವೀಕೆಂಡ್‌ನಲ್ಲೂ ಇರಲಿದೆ ಮಳೆರಾಯನ ಕಿರಿಕ್‌; ಬೆಂಗಳೂರು ಸೇರಿ 18 ಜಿಲ್ಲೆಗಳಿಗೆ ಮಳೆ ಅಲರ್ಟ್‌

ಆರೋಪಿಗಳ ಪೈಕಿ ನವೀನ್ ಕುಮಾರ್ 2020ರಲ್ಲಿಯೂ ತೂಕದ ಸ್ಕೇಲ್‌ನಲ್ಲಿ ಬದಲಾವಣೆ ಮಾಡಿ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ಕೆಪಿ ಅಗ್ರಹಾರ ಠಾಣೆಯಲ್ಲಿ ಆರೋಪಿತನ ವಿರುದ್ಧ ದೂರು ದಾಖಲಾಗಿತ್ತು. ದೂರು ನೀಡಿದ್ದ ಅಸಿಸ್ಟೆಂಟ್ ಕಂಟ್ರೋಲರ್‌ಗೆ ಈ ಆರೋಪಿ ಬೆದರಿಕೆ ಹಾಕಿದ್ದ. ಈ ಕುರಿತು ವಿಧಾನಸೌಧ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು 15 ವೇಯಿಂಗ್ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version