Site icon Vistara News

‌Fraud Case: ಬಾಸ್‌ ಅಕೌಂಟ್‌ನಿಂದ ಪ್ರಿಯತಮನ ಜತೆಗೆ ಸ್ನೇಹಿತೆಯರ ಬಾಯ್‌ಫ್ರೆಂಡ್‌ಗಳಿಗೂ ಲಕ್ಷ ಲಕ್ಷ ಟ್ರಾನ್ಸ್‌ಫರ್!

Fraud Case in bengaluru

ಬೆಂಗಳೂರು: ಅದು ವಿದ್ಯಾರಣ್ಯಪುರಲ್ಲಿರುವ ಖಾಸಗಿ ಕಂಪನಿ. ಅಲ್ಲಿನ ಮಾಲೀಕನ ಖಾತೆಯಿಂದ ಒಂದು ವಾರಗಳ ಕಾಲ ಹಣ ವರ್ಗಾವಣೆ ಆಗುತ್ತಾ ಬಂದಿದೆ. ವಾರದ ಬಳಿಕ ಖಾತೆ ನೋಡಿದಾಗ ಮಾಲೀಕನಿಗೆ ಶಾಕ್‌ ಕಾದಿತ್ತು. ತನಗೇ ಗೊತ್ತಿಲ್ಲದಂತೆ ತನ್ನ ಖಾತೆಯಿಂದ ಹಣ ವರ್ಗಾವಣೆ ಆಗಿದೆ! ಪೊಲೀಸ್‌ ಕಂಪ್ಲೇಂಟ್‌ ಆದ ಮೇಲೆ ಗೊತ್ತಾಗಿದ್ದು, ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಿಸೆಪ್ಷನಿಸ್ಟ್‌ ಕೆಲಸ ಇದಾಗಿದೆ ಎಂಬುದು. ಆಕೆ ಬಾಸ್‌ನ ಅಕೌಂಟ್‌ನಿಂದ ತನ್ನ ಬಾಯ್‌ಫ್ರೆಂಡ್‌ ಅಲ್ಲದೆ, ಸ್ನೇಹಿತೆಯರ ಬಾಯ್‌ಫ್ರೆಂಡ್‌ಗಳಿಗೂ ದುಡ್ಡು ಕಳುಹಿಸಿದ್ದಾಳೆ. ಅದೂ ಗೂಗಲ್‌ ಪೇ (Google Pay) ಮೂಲಕ! ಈಗ ಪೊಲೀಸರು ವಂಚನೆ ಮಾಡಿದ (‌Fraud Case) ಆ ಚಾಲಾಕಿಯ ಹಿಂದೆ ಬಿದ್ದಿದ್ದಾರೆ.

ಆಕೆ ಸೇರಿದ್ದು 15 ಸಾವಿರ ರೂಪಾಯಿ ಸಂಬಳದ ಕೆಲಸಕ್ಕೆ. ರಿಸೆಪ್ಷನಿಸ್ಟ್‌ ಆಗಿ ಸೇರಿದ್ದ ಹುಡುಗಿಯನ್ನು ನಂಬಿದ ಮಾಲೀಕ ಆಕೆಯ ಬಳಿ ಗೂಗಲ್‌ ಪೇ ಆ್ಯಪ್‌ನ ಪಾಸ್ವರ್ಡ್‌ ಕ್ರಿಯೇಟ್‌ ಮಾಡಿಸಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂಬುದು ಈಗ ತಿಳಿದುಬಂದಿದೆ.

ಇದನ್ನೂ ಓದಿ: Karnataka Election 2023 : ಮುಖ್ಯಮಂತ್ರಿ ನೇಮಕ ಅಂತಿಮವಾಗಿಲ್ಲ ಎಂದ ಸುರ್ಜೇವಾಲಾ; ಕಾಂಗ್ರೆಸ್‌ನಲ್ಲಿ ಗೊಂದಲವೋ ಗೊಂದಲ

ಬಾಸ್‌ಗೆ ಗೊತ್ತಾಗದಂತೆ 2 ಲಕ್ಷದ 70 ಸಾವಿರ ಹಣವನ್ನು ಬಾಯ್‌ಫ್ರೆಂಡ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿದ್ದಾಳೆ. ಬಳಿಕ ಅದರ ಹಿಸ್ಟರಿಯನ್ನು ಅಳಿಸಿ ಹಾಕಿದ್ದಾಳೆ. ಸ್ವಲ್ಪ ಸಮಯ ಕಾದು ನೋಡಿದ್ದಾಳೆ. ಈ ವಿಷಯ ಬಾಸ್‌ಗೆ ಗೊತ್ತಾಗಲಿಲ್ಲ. ಹಾಗೆಯೇ ಮತ್ತೆ ಬಾಸ್‌ನ ಮೊಬೈಲ್‌ ಎತ್ತಿಕೊಂಡು ಸ್ನೇಹಿತೆಯರ ಬಾಯ್‌ಫ್ರೆಂಡ್‌ಗಳ ಅಕೌಂಟ್‌ಗೂ ಹಣವನ್ನು ವರ್ಗಾವಣೆ ಮಾಡಿದ್ದಾಳೆ.

ಮೂರು ತಿಂಗಳ ಹಿಂದೆ ರಿಸೆಪ್ಷನಿಸ್ಟ್‌ ಆಗಿ ಬಂದಿದ್ದ ರೀತು

ವಿದ್ಯಾರಣ್ಯಪುರಲ್ಲಿನ ಖಾಸಗಿ ಕಂಪನಿಯ ಮಾಲೀಕ ವೆಂಕಟೇಶ್ ರೆಡ್ಡಿ ಮೋಸ ಹೋದವರು. ಮೂರು ತಿಂಗಳ ಹಿಂದೆ ರಿಸೆಪ್ಷನಿಸ್ಟ್ ಆಗಿ ಬಂದಿದ್ದ ರೀತು ಎಂಬಾಕೆ ವಂಚನೆ ಮಾಡಿದವಳು. ನಂಬಿಕೆ ಗಳಿಸಿದ್ದ ರೀತು ಬಳಿ ಬಂದಿದ್ದ ಮಾಲೀಕ ವೆಂಕಟೇಶ್ ರೆಡ್ಡಿ ಅವರು ಗೂಗಲ್‌ ಪೇ ಪಾಸ್ವರ್ಡ್‌ ಅನ್ನು ಸೆಟ್‌ ಮಾಡಿಸಿಕೊಂಡಿದ್ದರು. ಹೇಗೂ ಅದರ ಪಾಸ್ವರ್ಡ್‌ ಗೊತ್ತಾಗಿದ್ದರಿಂದ ಅವಕಾಶಕ್ಕೆ ರೀತು ಕಾದು ಕುಳಿತಿದ್ದಳು. ಮೊಬೈಲ್ ಚಾರ್ಜ್ ಹಾಕಿದ್ದಾಗ ಅದರ ಮೂಲಕ ಮೊದಲಿಗೆ ತನ್ನ ಬಾಯ್‌ಫ್ರೆಂಡ್‌ಗೆ 70 ಸಾವಿರ ಹಣ ವರ್ಗಾವಣೆ ಮಾಡಿದ್ದಾಳೆ.

ಬಳಿಕ ಹೀಗೇ ಹಂತ ಹಂತವಾಗಿ ತನ್ನ ಇಬ್ಬರು ಸ್ನೇಹಿತೆಯರ ಬಾಯ್‌ಫ್ರೆಂಡ್‌ಗಳ ಅಕೌಂಟ್‌ಗೂ 2 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿದ್ದಾಳೆ. ಇಷ್ಟು ಮಾಡಿದವಳೇ ಏಕಾಏಕಿ ಕೆಲಸ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಇದಾದ ಒಂದು ವಾರದ ಬಳಿಕ ವೆಂಕಟೇಶ್‌ ರೆಡ್ಡಿ ಅವರು ತಮ್ಮ ಖಾತೆಯನ್ನು ಪರಿಶೀಲಿಸಿದಾಗ ವಿಷಯ ಗಮನಕ್ಕೆ ಬಂದಿದೆ. ತಕ್ಷಣ ವಿದ್ಯಾರಣ್ಯಪುರ ಠಾಣೆಯಲ್ಲಿ ಒಟ್ಟು 7 ಜನರ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ರೈತರಿಗೆ ಕೇಂದ್ರ ಸಿಹಿ ಸುದ್ದಿ; ಮುಂಗಾರು ಹಂಗಾಮಿಗೆ ರಸಗೊಬ್ಬರಕ್ಕೆ 1.08 ಲಕ್ಷ ಕೋಟಿ ರೂ. ಸಬ್ಸಿಡಿ

ದೂರು ದಾಖಲಿಸಿಕೊಂಡ ಪೊಲೀಸರಿಗೆ ಇದು ರೀತು ಕೃತ್ಯ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈಗ ರೀತು ಸೇರಿದಂತೆ ಹಣ ವರ್ಗಾವಣೆ ಆದ ಬಾಯ್‌ಫ್ರೆಂಡ್‌ನ‌ ಮೇಲೆ ದೂರು ದಾಖಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ಮೊಬೈಲ್ ನಂಬರ್ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Exit mobile version