Site icon Vistara News

Fraud Case: ಕಾಲೇಜು ಸೀಟು ಕೊಡಿಸುವುದಾಗಿ 100ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ವಂಚನೆ

#image_title

ಬೆಂಗಳೂರು: ಕಾಲೇಜುಗಳಲ್ಲಿ ಆಡ್ಮಿಷನ್‌ ಮಾಡಿಸುವುದಾಗಿ ಹೇಳಿ, ವೀಸಾ ಪಡೆಯಲು ಕಾಲೇಜಿನ ಹೆಸರಲ್ಲಿ ನಕಲಿ ದಾಖಲೆಗಳನ್ನು ನೀಡುತ್ತಾ, 104 ವಿದೇಶಿ ಪ್ರಜೆಗಳನ್ನು ಭಾರತಕ್ಕೆ ಕರೆಸಿಕೊಂಡು ಕಾಲೇಜಿನಲ್ಲಿ ಆಡ್ಮಿಷನ್‌ ಮಾಡಿಸದೆ ಅಕ್ರಮವಾಗಿ ನೆಲೆಸಲು ನೆರವಾಗಿದ್ದ ಆರೋಪಿಯನ್ನು (Fraud Case) ಬಂಧಿಸಲಾಗಿದೆ.

ಬೆಂಗಳೂರಿನ ಡಿ.ಜಿ. ಹಳ್ಳಿ ನಿವಾಸಿ ಸಮೀರ್ ಖಾನ್ ಎಂಬಾತ ಗಲ್ಫ್ ರಾಷ್ಟ್ರಗಳಾದ ಯೆಮನ್, ಸೌದಿ ಅರೇಬಿಯಾ, ಇರಾನ್ ಮುಂತಾದ ರಾಷ್ಟ್ರಗಳ ಸುಮಾರು 104 ವಿದ್ಯಾರ್ಥಿಗಳಿಗೆ ವಂಚಿಸಿದ್ದಾನೆ. ಬೆಂಗಳೂರಿನ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿರುವ ಸವಿತಾ ಮಹರ್ಷಿ ಪದವಿ ಕಾಲೇಜಿನಲ್ಲಿ ವಿವಿಧ ಡಿಗ್ರಿ ಕೋರ್ಸುಗಳಿಗೆ ಆಡ್ಮಿಷನ್‌ ಮಾಡಿಸುವುದಾಗಿ ಹೇಳಿದ್ದಾನೆ.

ಕಾಲೇಜಿನ ಹೆಸರಿನಲ್ಲಿ ಅಡ್ಮಿಷನ್ ಲೆಟರ್‌ಗಳನ್ನು ನೀಡಿ, ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬರಲು ವೀಸಾ ಸಿಗುವಂತೆ ಮಾಡಿ, ಭಾರತಕ್ಕೆ ಬಂದ 104 ವಿದ್ಯಾರ್ಥಿಗಳಿಗೆ ಬೋನಾಫೈಡ್ ಸರ್ಟಿಫಿಕೇಟ್‌ಗಳನ್ನು ನೀಡಿದ್ದಾನೆ. ಆನಂತರ ಅವರುಗಳಿಗೆ ಸವಿತಾ ಮಹರ್ಷಿ ಪದವಿ ಕಾಲೇಜಿನಲ್ಲಿ ಅಡಿಷನ್ ಮಾಡಿಸದೇ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಲು ನೆರವಾಗಿದ್ದ.

ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸಿ.ಸಿ.ಬಿ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದೇಶಿ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಭಾರತಕ್ಕೆ ಬರಲು ನೆರವು ನೀಡಿದ್ದ ಆರೋಪಿ ಸಮೀರ್ ಖಾನ್ ಎಂಬುವ ಏಜೆಂಟ್‌ನನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಆರೋಪಿ ಸಮೀರ್‌ ಖಾನ್‌ ಅಕ್ರಮ ಹಣ ಗಳಿಸುವ ಉದ್ದೇಶದಿಂದ ಸವಿತಾ ಮಹರ್ಷಿ ಪದವಿ ಕಾಲೇಜಿನ ಹೆಸರಿನಲ್ಲಿ ಎಫ್ಆರ್‌ಆರ್‌ಓ ಕಛೇರಿಯಲ್ಲಿ ಎಫ್ಎಸ್ಐಎಸ್ ಐಡಿ, ಪಡೆದುಕೊಂಡು, ಕಾಲೇಜಿನ ಪರವಾಗಿ ಈತನೇ ವ್ಯವಹರಿಸುತ್ತಿದ್ದ ಎಂದು ತಿಳಿದು ಬಂದಿದೆ. ಕಾಲೇಜಿನ ಪರವಾಗಿ 104 ವಿದೇಶಿ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಮತ್ತು ಬೋನಾಪೈಡ್ ಲೆಟೆರ್‌ಗಳನ್ನು ಕಾಲೇಜಿನ ಲೆಟರ್‌ಹೆಡ್‌ನಲ್ಲಿ ವಿತರಿಸಿದ್ದ. ಈ ಮೂಲಕ ಭಾರತಕ್ಕೆ ವಿದೇಶಿ ಪ್ರಜೆಗಳು ಬಂದಿದ್ದರು.

ಸದ್ಯ ಈ ಪ್ರಕರಣದಲ್ಲಿ ಸವಿತಾ ಮಹರ್ಷಿ ಪದವಿ ಕಾಲೇಜಿನ ಪಾತ್ರವಿದೆಯೇ ಹಾಗೂ ಆರೋಪಿ ಸಮೀರ್ ಖಾನ್‌ನೊಂದಿಗೆ ಬೇರೆ ಯಾವ ಯಾವ ಆರೋಪಿಗಳು ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version