ಬೆಂಗಳೂರು: ಸ್ವಿಗ್ಗಿ ಫುಡ್ ಡೆಲವರಿಗೆಂದು (Swiggy) ಸ್ಕೂಟರ್ ಬಾಡಿಗೆ ಪಡೆದುಕೊಂಡಿದ್ದ ಖತರ್ನಾಕ್ ವಂಚನಕನೊಬ್ಬ ಅಕ್ರಮವಾಗಿ ಮಾರಾಟ ಮಾಡಿದ್ದಾನೆ. ನಕಲಿ ದಾಖಲೆ ಸೃಷ್ಟಿಸಿ ಸ್ಕೂಟರ್ ಮಾರಾಟ ಮಾಡಿದ್ದು, ಜಿಪಿಎಸ್ ಟ್ರ್ಯಾಕ್‌ನಿಂದ (GPs track) ವಂಚನೆ ಪ್ರಕರಣ (Fraud Case) ಹೊರಬಿದ್ದಿದೆ. ವಂಚಕ ಗೋಪಾಲ್ ನಾಯ್ಡು ಅಲಿಯಾಸ್ ಲಲಿತ್ ಕುಮಾರ್ ಎಂಬಾತ ಹಿಂದೂಪುರ ಮೂಲದ ಅಶೋಕ್ ಮಾನೆ ಎಂಬುವವರಿಗೆ ಸ್ಕೂಟರ್ ಮಾರಾಟ ಮಾಡಿ ಪರಾರಿ ಆಗಿದ್ದಾನೆ.
ಕಳೆದ ಮೇ ತಿಂಗಳಲ್ಲಿ ಗೋಪಾಲ್ ನಾಯ್ಡು ಹೋಂಡಾ ಆಕ್ಟಿವಾ 5ಜಿ ಸ್ಕೂಟರ್ 56,000 ರೂ.ಗೆ ಮಾರಾಟ ಮಾಡುವುದಾಗಿ ಹೇಳಿ ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕಿದ್ದ. ಇದನ್ನು ಗಮನಿಸಿದ ಅಶೋಕ್ ಮಾನೆ ಈತನನ್ನು ಸಂಪರ್ಕಿಸಿದರು. ಯಶವಂತಪುರ ದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಗೋಪಾಲ್ 50 ಸಾವಿರ ರೂ.ಗೆ ಮಾರಾಟ ಮಾಡಲು ಫೈನಲ್ ಮಾಡಿದ್ದ.
ಈ ಸ್ಕೂಟರ್ ನನ್ನ ಹೆಸರಿನಲ್ಲಿದೆ ಎಂದೇಳಿ ಆರ್.ಸಿ.ಕಾರ್ಡ್, ಇನ್ಸೂರೆನ್ಸ್ ಕಾಪಿ, ಫಾರಂ 29 & 30ಗೆ ಸಹಿ ಹಾಕಿ ಅಶೋಕ್‌ಗೆ ನೀಡಿದ್ದ. ಇನ್ನೆರಡು ದಿನಗಳಲ್ಲಿ ಯಶವಂತಪುರ ಆರ್.ಟಿ.ಓ ನಲ್ಲಿ ನಿಮ್ಮ ಹೆಸರಿಗೆ ಸ್ಕೂಟರ್ ದಾಖಲಾತಿಗಳನ್ನು ವರ್ಗಾವಣೆ ಮಾಡಿಸಿಕೊಡುವುದಾಗಿ ಹೇಳಿದ್ದ. ಇದನ್ನೂ ನಂಬಿ ಅಶೋಕ್ ವಂಚಕ ಗೋಪಾಲ್‌ಗೆ ಹಣ ಕೊಟ್ಟು ಸ್ಕೂಟರ್ ಖರೀದಿಸಿದ್ದರು.
ವಾರ ಕಳೆದರೂ ಯಾವುದೇ ಅಪಡೇಟ್ ಬಾರದೆ ಇದ್ದಾಗ, ಪುನಃ ಅಶೋಕ್, ಗೋಪಾಲ್ ನಾಯ್ಡು ಮೊಬೈಲ್‌ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಔಟ್ ಅಪ್ ನೆಟ್ವರ್ಕ್ ಎಂದು ಉತ್ತರ ಬಂದಿತ್ತು. ಈ ನಡುವೆ ಅಶೋಕ್ ಕೆಲಸ ನಿಮಿತ್ತ ಹಿಂದೂಪುರಕ್ಕೆ ಸ್ಕೂಟರ್ ತೆಗೆದುಕೊಂಡು ಹೋಗಿ ಬಳಸುತ್ತಿದ್ದರು.
ಜಿಪಿಎಸ್ ಜಾಡು ಹಿಡಿದು ಬಂದ ಸಿಬ್ಬಂದಿ
ಜು.6 ರಂದು ಬೆಳಗ್ಗೆ 7.30 ರ ಸುಮಾರಿಗೆ ಅಶೋಕ್ ಕೆಲಸಕ್ಕೆಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ, Ontrack Technologies Pvt ltd ಕಂಪನಿ ಸಿಬ್ಬಂದಿ ತಡೆದಿದ್ದಾರೆ. ಈ ಸ್ಕೂಟರ್ ನಮ್ಮ ಸಂಸ್ಥೆಗೆ ಸೇರಿದ್ದು, ಸ್ವಿಗ್ಗಿ ಕೆಲಸಕ್ಕಾಗಿ ಬಾಡಿಗೆ ನೀಡಿದ್ದು, ನೀವೂ ಯಾಕೆ ಅಕ್ರಮವಾಗಿ ಬಳಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸ್ಕೂಟರ್‌ಗೆ ಅಳವಡಿಸಿದ್ದ ಜಿ.ಪಿ.ಎಸ್ ಮೂಲಕ ಟ್ರ್ಯಾಕಿಂಗ್ ಮಾಡಿಕೊಂಡು ಹಿಂದೂಪುರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮದುವೆಯಾಗುವುದೇ ವೃತ್ತಿ, ಲಕ್ಷಲಕ್ಷ ಹಣ ಸಂಪಾದನೆ; 15ನೇ ಹೆಂಡತಿಯಿಂದ ಪೊಲೀಸರಿಗೆ ಸಿಕ್ಕಿಬಿದ್ದ!
Ontrack Technologies Pvt ltd ಕಂಪನಿಯಿಂದ ವಂಚಕ ಗೋಪಾಲ್‌ನಾಯ್ಡು ಸ್ವಿಗ್ಗಿ ಕೆಲಸಕ್ಕೆಂದು ಈ ಸಂಸ್ಥೆಯಿಂದ ಸ್ಕೂಟರ್ ಬಾಡಿಗೆ ಪಡೆದುಕೊಂಡಿದ್ದಾನೆ. ಆದರೆ ಸ್ಕೂಟರ್ ವಾಪಸ್ ನೀಡದೆ ಮೋಸ ಮಾಡಿದ್ದಾನೆ. ಈತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ ಸಿಬ್ಬಂದಿ ಕಡೆಗೆ ಸ್ಕೂಟರ್‌ಗೆ ಅಳವಡಿಸಿದ್ದ ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಿದ್ದಾರೆ. ಆಗಲೇ ಸ್ಕೂಟರ್ ಅಕ್ರಮವಾಗಿ ಮಾರಾಟ ಮಾಡಿದ್ದು ತಿಳಿದು ಬಂದಿದೆ.
ಸದ್ಯ ಹಣ, ಸ್ಕೂಟರ್ ಎರಡನ್ನು ಕಳೆದುಕೊಂಡು ಮೋಸ ಹೋಗಿರುವ ಅಶೋಕ್ ಮಾನೆ ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚಕ ಗೋಪಾಲ್‌ನಾಯ್ಡುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ