ಬೆಂಗಳೂರು: ಇಲ್ಲಿನ ಸಂಜಯನಗರದ ಉದ್ಯಮಿಯೊಬ್ಬರಿಗೆ ಸೋಲಾರ್ ಪ್ಲಾಂಟ್ (Solar plant) ಅಳವಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ ಕೋಟಿ ಕೋಟಿ ರೂಪಾಯಿ ವಂಚನೆ (Fraud Case) ಮಾಡಿದ್ದಾನೆ. ಜೆಮಿನಿ ಡೈಯಿಂಗ್ ಆ್ಯಂಡ್ ಪ್ರಿಂಟಿಂಗ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಗುಲ್ಲು ತಲರೇಜಾ (70) ವಂಚನೆಗೊಳಗಾದ ಉದ್ಯಮಿ ಆಗಿದ್ದಾರೆ.
ಗುಲ್ಲು ತಲರೇಜಾ ಅವರು ಗೊರಗುಂಟೆ ಪಾಳ್ಯ ಬಳಿ ಇರುವ ತಮ್ಮ ಕಂಪನಿಗೆ ಸೋಲಾರ್ ಪ್ಲಾಂಟ್ ಮಾಡಿಸಬೇಕೆಂದುಕೊಂಡಿದ್ದರು. ಈ ವೇಳೆ ಸಮೃದ್ಧಿ ರಿನವಬೇಲ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಪ್ರಮೋದ್ ಪ್ರಕಾಶ್ ಎಂಬಾತ ಪರಿಚಯವಾಗಿದ್ದ.
ಈ ಹಿಂದೆ ತಾನು ಮಾಡಿದ್ದ ಕೆಲಸಗಳ ಬಗ್ಗೆ ಕೊಟೇಷನ್ಗಳನ್ನು ತೋರಿಸಿ ಜತೆಗೆ ನಕಲಿ ಲೈಸೆನ್ಸ್ ತೋರಿಸಿ ಈ ನಯವಂಚಕ ಉದ್ಯಮಿ ಗುಲ್ಲು ತಲರೇಜಾ ಅವರನ್ನು ನಂಬಿಸಿದ್ದ. ಈತನ ನಡೆನುಡಿಯನ್ನು ನಂಬಿದ್ದ ಗುಲ್ಲು ತಲರೇಜಾ ಅವರು ಸೋಲಾರ್ ಕೊಟೇಷನ್ಗೆ ಒಪ್ಪಿಗೆ ನೀಡಿದರು. ಕೆಲಸ ಶುರು ಮಾಡುವ ಸಲುವಾಗಿ ಮೊದಲ ಹಂತದಲ್ಲಿ 20 ಲಕ್ಷ ರೂ. ನೀಡಿದ್ದರು.
ಲಕ್ಷ ಹಣ ಪಡೆದ ಪ್ರಮೋದ್ ಕೆಲಸವನ್ನು ಪೂರೈಸದೆ ಬದಲಿಗೆ ಸೋಲಾರ್ನ ಮಾಡ್ಯೂಲ್‌ಗಳ ಖರೀದಿಗಾಗಿ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಸೋಲಾರ್ ಪ್ಲಾಂಟ್ ಪ್ರಾಜೆಕ್ಟ್ ಅನ್ನು ಬೇಗ ಮುಗಿಸಿಕೊಡಲು 7 ಕೋಟಿಯ ಕೊಟೇಶನ್‌ನಲ್ಲಿ 4 ಕೋಟಿ 11 ಲಕ್ಷ ರೂಪಾಯಿವರೆಗೂ ಹಂತ ಹಂತವಾಗಿ ಬ್ಯಾಂಕ್ ಚೆಕ್, ಆರ್‌ಟಿಪಿಎಸ್ ಮುಖಾಂತರ ಬ್ಯಾಂಕ್ನಲ್ಲಿ ಪಡೆದುಕೊಂಡಿದ್ದ.
ಕೋಟಿ ಕೋಟಿ ಹಣ ಪಡೆದರೂ ಕೆಲಸ ಮಾತ್ರ ಶುರುವಾಗಿರಲಿಲ್ಲ. ನಿಗದಿತ ಸಮಯದಲ್ಲಿ ಕೆಲಸ ಮುಗಿಸಿಕೊಡುವುದಾಗಿ ಹೇಳಿದವನು, ಅವಧಿ ಮುಗಿದರೂ ಕೆಲಸವೇ ಪ್ರಾರಂಭಿಸರಲಿಲ್ಲ. ಇದರಿಂದ ಅನುಮಾನಗೊಂಡ ಉದ್ಯಮಿ ಗುಲ್ಲು ತಲರೇಜಾ ಅವರು ಪ್ರಮೋದ್ ಪ್ರಕಾಶ್‌ನನ್ನು ಸಂಪರ್ಕಿಸಿದಾಗ ನಾನಾ ಸಬೂಬು ಹೇಳಿ ತಪ್ಪಿಸಿಕೊಂಡಿದ್ದ.
ಈತನ ಕುರಿತು ವಿಚಾರಿಸಿದಾಗ ಈತನ ವಂಚನೆ ಬೆಳಕಿಗೆ ಬಂದಿದೆ. ಹೀಗಾಗಿ ಕೊಟ್ಟ ಹಣವನ್ನು ವಾಪಸ್ ಕೇಳಿದ್ದಾರೆ. ಆದರೆ ಆರೋಪಿ ಪ್ರಮೋದ್ ಧಮ್ಕಿ ಹಾಕುವುದು, ಗೂಂಡಾಗಳನ್ನು ಹಿಂದೆ ಬಿಡುವುದನ್ನು ಮಾಡುತ್ತಿದ್ದ ಎಂದು ಉದ್ಯಮಿ ಗುಲ್ಲು ಆರೋಪಿಸಿದ್ದಾರೆ. ಸದ್ಯ ಉದ್ಯಮಿ ನೀಡಿದ ದೂರಿನ್ವಯ ಸಂಜಯನಗರ ಪೊಲೀಸರು ಆರೋಪಿ ಪ್ರಮೋದ್ ಪ್ರಕಾಶ್‌ನನ್ನು ಬಂಧಿಸಿದ್ದಾರೆ.
ಖಾಸಗಿ ಕಾಲೇಜಿಗೂ ವಂಚನೆ
ತನಿಖೆ ವೇಳೆ ಆರೋಪಿ ಪ್ರಮೋದ್ ಪ್ರಕಾಶ್, ವಂಚಿಸಿದ ಹಣವನ್ನು ಚಲನಚಿತ್ರದಲ್ಲಿ ಹೂಡಿಕೆ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಇತ್ತ ಬನಶಂಕರಿಯ ಖಾಸಗಿ ಕಾಲೇಜಿನಲ್ಲೂ ಸೋಲಾರ್ ಪ್ಲಾಂಟ್ ಮಾಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ.
ಬೆಟ್ಟಿಂಗ್ ಚಟಕ್ಕೆ ಬಿದ್ದ ಟೆಕ್ಕಿ
ಮತ್ತೊಂದು ಕಡೆ ಗ್ಯಾಂಬ್ಲಿಂಗ್ ಹಾಗೂ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಟೆಕ್ಕಿಯೊಬ್ಬ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಮಹೇಶ್ ಎಂಬಾತ ಟೆಕ್ಕಿ ಕೆಲಸ ಬಿಟ್ಟು 24/7.ಕಾಂ ಎಂಬ ಗ್ಯಾಂಬ್ಲಿಂಗ್ ಆ್ಯಪ್ವೊಂದನ್ನು ತೆರೆದಿದ್ದ. ಆದರೆ ಅದು ಅಷ್ಟಾಗಿ ಕ್ಲಿಕ್ ಆಗದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಆ್ಯಡ್ ಕೊಡಲು ಮುಂದಾಗಿದ್ದ.
ಇದನ್ನೂ ಓದಿ: Bengaluru Murder case: ಕುಡಿತದ ಮತ್ತಿನಲ್ಲಿ ಸ್ನೇಹಿತರ ಭೀಕರ ಕೃತ್ಯ: ಕಲ್ಲಿನಿಂದ ವ್ಯಕ್ತಿಯ ತಲೆ ಜಜ್ಜಿ ಕೊಲೆ
ಈ ವೇಳೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಜಾಹೀರಾತು ನೀಡಿದಾಗ ಸಹಜವಾಗಿಯೇ ನಿರುದ್ಯೋಗಿ ಯುವಕರು ಈತನನ್ನು ಸಂಪರ್ಕ ಮಾಡಿದ್ದರು. ಕಂಪೆನಿಯಲ್ಲಿ ಕೆಲಸ ಕೊಡಿಸಲು ಮೂರು ಲಕ್ಷ ರೂಪಾಯಿ ಫೀಸ್ ಆಗುತ್ತದೆ ಎಂದು ಹೇಳಿ ಸುಮಾರು 35ಕ್ಕೂ ಹೆಚ್ಚು ಜನರಿಂದ ಹಣ ಪಡೆದಿದ್ದ. ಒಟ್ಟು 70 ಲಕ್ಷದವರೆಗೂ ದೋಚಿದ್ದ ಮಹೇಶ್, ಆ ಹಣದಲ್ಲಿ ಎರಡು ಕಾರು 5 ಮೊಬೈಲ್ ಫೋನ್ಗಳನ್ನು ಖರೀದಿ ಮಾಡಿದ್ದ. ಸದ್ಯ ಈ ಸಂಬಂಧ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ