Site icon Vistara News

Fraud Case: ಜೈಲಿನಿಂದ ಹೊರಬಂದ ಯುವರಾಜ್‌ ಸ್ವಾಮಿ ವಿರುದ್ಧ ಮತ್ತೆರಡು ವಂಚನೆ ಕೇಸ್ ದಾಖಲು

ಯುವರಾಜ್‌ ಸ್ವಾಮಿ ವಿರುದ್ಧ ಮತ್ತೆರಡು ವಂಚನೆ ಕೇಸ್ ದಾಖಲು

ಯುವರಾಜ್‌ ಸ್ವಾಮಿ ವಿರುದ್ಧ ಮತ್ತೆರಡು ವಂಚನೆ ಕೇಸ್ ದಾಖಲು

ಬೆಂಗಳೂರು: ʻಯುವರಾಜ್ ಸ್ವಾಮಿʼ ಕೆಲ ವರ್ಷಗಳ ಹಿಂದೆ ವಂಚನೆ ಕೇಸ್‌ನಲ್ಲಿ ಭಾರಿ ಸುದ್ದಿ ಮಾಡಿದ್ದ ಮಹಾನ್ ವಂಚಕ. ಸೆಲೆಬ್ರಿಟಿಗಳೊಂದಿಗೆ ಫೋಟೊಗೆ ಫೋಸ್ ನೀಡಿ ಸಿಕ್ಕ ಸಿಕ್ಕವರಿಗೆ ನಾಮ ಹಾಕಿದ್ದವನು ಜೈಲಿನಿಂದ ಹೊರ ಬಂದಿದ್ದಾನೆ. ಈಗ ಮತ್ತೆ ಆತನ ವಂಚನೆ ಪ್ರಕರಣಗಳು ಮುಂದುವರಿದಿದ್ದು, ಈ ಬಾರಿ ನಿಧನ ಹೊಂದಿರುವ ನಿವೃತ್ತ ಐಎಎಸ್ ಅಧಿಕಾರಿಯ ಕೋಟಿ ಕೋಟಿ ಆಸ್ತಿ ಕಬಳಿಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಬಂಧನದ ಭೀತಿಯಲ್ಲಿರುವ ವಂಚಕ ತಲೆಮರೆಸಿಕೊಂಡಿದ್ದಾನೆ.

ಯುವರಾಜ್‌ ಸ್ವಾಮಿ ಅಲಿಯಾಸ್ ಸೇವಾಲಾಲ್ ಸಂಗಣ್ಣ ಬಸವ ಸ್ವಾಮೀಜಿ. ಈತನ ವಿರುದ್ಧ ಎರಡು ವರ್ಷಗಳ ಹಿಂದೆ ದೊಡ್ಡ ಮಟ್ಟದ ವಂಚನೆ ಆರೋಪ ಕೇಳಿ ಬಂದಿತ್ತು. ಸೆಲೆಬ್ರಿಟಿಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು, ಆ ಪೋಟೊಗಳನ್ನು ತೋರಿಸಿಕೊಂಡೇ ಜನರಿಗೆ ವಂಚಿಸುತ್ತಿದ್ದ. ಹೀಗೆ ಇದ್ದ ಯುವರಾಜ್‌ ಸ್ವಾಮಿ ಜ್ಞಾನಭಾರತಿ ಪೊಲೀಸರಿಗೆ ಲಾಕ್‌ ಆಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ. ಇನ್ನು ಈ ವೇಳೆ ದಾಖಲಾಗಿದ್ದ ಕೇಸ್‌ಗಳಿಂದ ಹೊರ ಬರಲು ರಾಜಿ ತಂತ್ರ ಅನುಸರಿಸಿದ್ದ ಸೇವಾಲಾಲ್ ಸಂಗಣ್ಣ ಬಸವ ಸ್ವಾಮೀಜಿ, ಫ್ರೀಜ್ ಆಗಿರುವ ಅಕೌಂಟ್‌ನ ಚೆಕ್‌ಗಳನ್ನು ತನ್ನ ವಿರುದ್ಧ ದೂರು ದಾಖಲಿಸಿದವರಿಗೆ ನೀಡಿ ಕೇಸ್ ರಾಜಿ ಮಾಡಿಕೊಂಡಿದ್ದ.

ಯುವರಾಜ್‌ ಸ್ವಾಮಿಯಿಂದ ಮೋಸ ಹೋಗಿರುವ ಗೋವಿಂದಯ್ಯ

ಆದರೆ, ಆತನ ಬಂಡವಾಳ ಬೆಳಕಿಗೆ ಬಂದ ಮೇಲೆ ಮೋಸ ಹೋಗಿದ್ದ ಗೋವಿಂದಯ್ಯ ಎಂಬುವರು ಯುವರಾಜ್ ಸ್ವಾಮಿ ಅಲಿಯಾಸ್ ಸೇವಾಲಾಲ್ ಸ್ವಾಮಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ. ಇದರೊಟ್ಟಿಗೆ ಮತ್ತೊಂದು ಕೇಸ್ ಸಹ ಯುವರಾಜ್ ಸ್ವಾಮಿಯ ವಿರುದ್ಧ ದಾಖಲಾಗಿದೆ. ಅದು ಬಹುಕೋಟಿ ಬೆಲೆ ಬಾಳುವ ನಿವೃತ್ತ ಹಾಗೂ ನಿಧನ ಹೊಂದಿರುವ ಐಎಎಸ್ ಅಧಿಕಾರಿಯ ಆಸ್ತಿ ಕಬಳಿಕೆ ಸಂಚಿಗೆ ಸಂಬಂಧಿಸಿದ ದೂರಾಗಿದೆ.

10 ಕೋಟಿ ರೂ. ಆಸ್ತಿ ಮೇಲೆ ಸ್ವಾಮಿ ಕಣ್ಣು

ಸದಾಶಿವನಗರದಲ್ಲಿ ನಿವೃತ್ತ ಹಾಗೂ ನಿಧನ ಹೊಂದಿರುವ ಐಎಎಸ್ ಅಧಿಕಾರಿ ರೂಪ್ಲಾ ನಾಯಕ್ ಅವರ ನಿವಾಸವಿದೆ. ಸುಮಾರು 10 ಕೋಟಿ ರೂಪಾಯಿ ಬೆಲೆ ಬಾಳುವ ಈ ಮನೆಯನ್ನು ತನ್ನ ಹೆಸರಿಗೆ, ರೂಪ್ಲಾ ನಾಯಕ್‌ರವರ ನಕಲಿ ಸಹಿ ಮಾಡಿ ಕಬಳಿಸುವ ಹುನ್ನಾರ ನಡೆಸಿದ್ದಾನೆ.

ಈತ ಸಮುದಾಯದ ಗುರೂಜಿ ಎಂದು ಬಿಂಬಿಸಿಕೊಂಡಿದ್ದ. ರೂಪ್ಲಾ ನಾಯಕ್ ನಮ್ಮ ಆಶ್ರಮಕ್ಕೆ ಅವರ ಮನೆಯನ್ನು ದಾನವಾಗಿ ನೀಡಿ, ವಿಲ್ ಮಾಡಿಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದ. ಇದಕ್ಕಾಗಿ ರೂಪ್ಲಾ ನಾಯಕ್ ಮರಣದ ನಂತರ ಬಿಡಿಎನಲ್ಲಿ ದಾಖಲೆಗಳನ್ನು ತನ್ನ ಹೆಸರಿಗೆ ಬದಲಾಯಿಸಿಕೊಳ್ಳಲು ಷಡ್ಯಂತ್ರ ರೂಪಿಸಿದ್ದ. ಅಷ್ಟೇ ಅಲ್ಲದೆ ಆ ಆಸ್ತಿಯನ್ನು ಮಾರಾಟ ಮಾಡಲು ಬಿಲ್ಡರ್‌ಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಸಂಪರ್ಕಿಸಿದ್ದ ಎಂದು ತಿಳಿದು ಬಂದಿದೆ. ಆದರೆ, ಅಷ್ಟರಲ್ಲಾಗಲೇ ಈ ಯುವರಾಜನ ಹುನ್ನಾರ ರೂಪ್ಲಾ ನಾಯಕ್ ಮೊಮ್ಮಕ್ಕಳ ಗಮನಕ್ಕೆ ಬಂದಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: The Kerala Story: ಸತ್ಯ ಘಟನೆ ಹೇಳುವಾಗ ಬ್ಯಾನ್‌ ಮಾಡುವುದು ಸರಿಯಲ್ಲ: ತಾರಾ ಅನುರಾಧ

ಇತ್ತ ತನ್ನ ವಿರುದ್ಧ ಮತ್ತೆ ಎರಡು ಕೇಸ್‌ಗಳು ದಾಖಲಾಗುತ್ತಿದ್ದಂತೆ ಬೆಂಗಳೂರು ಬಿಟ್ಟು ಬಂಧನ ಭೀತಿಯಿಂದ ದೆಹಲಿಗೆ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸದಾಶಿವನಗರ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ, ವಂಚಕ ಯುವರಾಜ್ ಸ್ವಾಮಿಗಾಗಿ ಶೋಧ ನಡೆಸಿದ್ದಾರೆ.

Exit mobile version