ಬೆಂಗಳೂರು: ವಿಸ್ತಾರ ನ್ಯೂಸ್ ಬಯಲಿಗೆಳೆದ ರಾಜ್ಯದ ಅತಿದೊಡ್ಡ ಬಹುಕೋಟಿ ವಂಚನೆ ಪ್ರಕರಣವಾದ (Fraud Case) ವೇದಿಕ್ ಆಯುರ್ ಕ್ಯೂರ್ ಹೆಲ್ತ್ ದೋಖಾದ ಜಾಲಗಳು ಇಡೀ ರಾಜ್ಯಾದ್ಯಂತ ಹರಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಸ್ತಾರ ನ್ಯೂಸ್ ಶನಿವಾರ ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ 5 ಗಂಟೆವರೆಗೆ ನಿರಂತರ ಈ ಹಗರಣವನ್ನು ಬಯಲಿಗೆಳೆಯು ಮಹಾ ಅಭಿಯಾನವನ್ನು ನಡೆಸಿದ್ದು, ಜಾಲದ ಬೇರುಗಳನ್ನು ಹೊರಗೆಳೆದಿದೆ. ಇದೀಗ ರಾಜ್ಯ ಸರ್ಕಾರ (Karnataka Government) ಈ ಹಗರಣದ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ನೀಡಿದೆ.
“ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್ (Vedic Ayur cure health and retails private Ltd)”, “ಕಾರ್ಪ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ” ಹಾಗೂ “ಇ ಸ್ಟೋರ್ ಇಂಡಿಯಾ ಸೂಪರ್ ಮಾರ್ಕೆಟ್ ಸ್ಟೋರ್ ಫ್ರಾಂಚೈಸಿ (E Store India super Market store Franchise) ” ಹೆಸರಿನಲ್ಲಿ ಈ ಮಹಾ ವಂಚನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕಂಪನಿ ಆಯರ್ವೇದಿಕ್ ಉತ್ಪನ್ನ (Ayurvedic Product), ಉದ್ಯಮದ ಹೆಸರಿನಲ್ಲಿ ಜನರನ್ನು ನಂಬಿಸಿ ವಂಚನೆ ನಡೆಸಿದೆ. ಈ ವ್ಯವಹಾರದಲ್ಲಿ ಕರ್ನಾಟಕದ ಮೂಲೆ ಮೂಲೆಯ ಸಾವಿರಾರು ಮಂದಿ ಏಜೆಂಟರಾಗಿ, ಫ್ರಾಂಚೈಸಿಗಳಾಗಿ, ಡೆವಲಪರ್‌ಗಳಾಗಿ ಭಾಗಿಯಾಗಿದ್ದು, ಅವರೆಲ್ಲರೂ ಈಗ ಹಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಹಲವಾರು ಮಂದಿ ಇ-ಸ್ಟೋರ್ ಸೂಪರ್ ಮಾರ್ಕೆಟ್ ತೆರೆದು ಮೋಸ ಹೋಗಿದ್ದಾರೆ. ಇವರಲ್ಲಿ ಕೆಲವರು 50 ಲಕ್ಷಕ್ಕೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದಾರೆ. ರಾಜ್ಯದ ನಾನಾ ಭಾಗಗಗಳಿಂದ ನೂರಾರು ಮಂದಿ ವಿಸ್ತಾರ ನ್ಯೂಸ್‌ಗೆ ಕರೆ ಮಾಡಿ ತಾವು ಮೋಸ ಹೋಗಿರುವ ಕಥೆಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದರು.
ಆತ್ಮೀಯರಿಂದಲೇ ಮೋಸದ ಬಲೆಗೆ ಬಿದ್ದವರು
ಈ ಕಂಪನಿಯ ಉತ್ತರ ಪ್ರದೇಶದ್ದೇ ಆದರೂ ಜನರು ಬಲೆಗೆ ಬಿದ್ದದ್ದು ಆತ್ಮೀಯರಿಂದಲೇ. ಚೈನ್ ಲಿಂಕ್ ಯೋಜನೆಯಾಗಿರುವ ಇದರಲ್ಲಿ ಆರಂಭದಲ್ಲಿ ಸೇರಿಕೊಂಡವರು ಸ್ವಲ್ಪ ಮಟ್ಟಿಗೆ ಲಾಭ ಮಾಡಿಕೊಂಡಿದ್ದಾರೆ. ಅವರು ತಮ್ಮ ಆತ್ಮೀಯರಿಗೂ ಲಾಭ ಸಿಗಲಿ ಎಂಬ ಕಾರಣಕ್ಕೆ ಅವರಿಗೆ ತಾವು ಪಡೆದ ಲಾಭದ ವಿವರ ನೀಡಿ ಮನವೊಲಿಸಿ ಸೇರಿಸಿಕೊಳ್ಳುತ್ತಿದ್ದರು. ಕೆಲವರು ಉದ್ಯಮಿಗಳಾಗುವ, ವ್ಯಾಪಾರ ಮಾಡುವ ಕನಸು ಕಂಡವರು ದೊಡ್ಡ ಕಂಪನಿಯ ಫ್ರಾಂಚೈಸಿ ಸಿಗುತ್ತದೆ ಎಂಬ ಕಾರಣಕ್ಕೆ ಲಕ್ಷಾಂತರ ರೂ. ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಆದರೆ, ಕಳೆದ ಮೂರು ತಿಂಗಳಿನಿಂದ ಕಂಪನಿಯು ತನ್ನ ಆಯುರ್ ಪ್ರಾಡಕ್ಟ್ ಸರಬರಾಜು ಕಾರ್ಯವನ್ನು ನಿಲ್ಲಿಸಿದೆ. ಹೀಗಾಗಿ ಜನ ದಿಗಿಲುಗೊಂಡಿದ್ದಾರೆ. ತಮ್ಮನ್ನು ಈ ಸಿಸ್ಟಮ್ ಸೇರಲು ಪ್ರೇರೇಪಿಸಿದವರನ್ನು ಬೆನ್ನಟ್ಟುತ್ತಿದ್ದಾರೆ.
ಯಾರು ಆರೋಪಿಗಳು?
ವೇದಿಕ್ ಆಯುರ್‌ನ ಸಿಎಂಡಿ ಎಂದು ಹೇಳಿಕೊಂಡ ಮಹಮ್ಮದ್ ಫೈಜಾನ್ ಪ್ರಮುಖ ಆರೋಪಿಯಾಗಿದ್ದು, ಉಳಿದಂತೆ ಉಮೇಶ್ ಕುಮಾರ್ ತ್ಯಾಗಿ, ಉರೋಜ್ ಅಲಿ ಖಾನ್, ಶಂಶಾದ್ ಅಹ್ಮದ್, ನಾಜಿಮಾ ಖಾನ್, ಅನಿಲ್ ಜಾದವ್ ಮೇಲೆ ಈಗ ಎಫ್‌ಐಆರ್ ದಾಖಲಾಗಿದೆ. ಇವರೆಲ್ಲರೂ ಕಂಪನಿಯ ನಿರ್ದೇಶಕರಾಗಿದ್ದಾರೆ. ಸೊಲ್ಲಾಪುರ ಮೂಲದ ವಿನಾಯಕ ರಾವತ್ ದಕ್ಷಿಣ ಭಾರತದ ಉಸ್ತುವಾರಿಯಾಗಿದ್ದಾನೆ. ಈತ ಈಗ ಸೊಲ್ಲಾಪುರದಲ್ಲೇ ಇದ್ದು ವಿಸ್ತಾರ ನ್ಯೂಸ್‌ನಲ್ಲಿ ಪ್ರಸಾರವಾಗುತ್ತಿರುವ ಅಭಿಯಾನವನ್ನು ಗಮನಿಸುತ್ತಿದ್ದಾನೆ ಎನ್ನಲಾಗಿದೆ.
ರಾಜ್ಯದಲ್ಲಿ ಹಗರಣದ ತನಿಖೆ ಭರವಸೆ
ವೇದಿಕ್ ಆಯುರ್ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಜಿ. ಪರಮೇಶ್ವರ್, ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದ್ದಾರೆ. ವಿಸ್ತಾರ ನ್ಯೂಸ್ ಈ ಹಗರಣವನ್ನು ಬಯಲಿಗೆಳೆದಿರುವುದನ್ನು ಸಾವಿರಾರು ಮಂದಿ ಶ್ಲಾಘಿಸಿದ್ದಾರೆ.
ರಾಜ್ಯದ ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ, ಕಲಬುರಗಿ, ಯಾದಗಿರಿ, ವಿಜಯ ನಗರ, ರಾಯಚೂರು, ದಾವಣಗೆರೆಗಳಲ್ಲಿ ಇ-ಸ್ಟೋರ್ ಆರಂಭಿಸಿ ನೂರಾರು ಮಂದಿ ಹಣ ಕಳೆದುಕೊಂಡಿದ್ದಾರೆ. ಶಿವಮೊಗ್ಗ ಒಂದರಲ್ಲೇ 2000 ಮಂದಿ ಈ ಚೈನ್ ಲಿಂಕ್‌ನಲ್ಲಿ ಹಣ ಹಾಕಿ ಕೈಸುಟ್ಟುಕೊಂಡಿದ್ದಾರೆ. ಇವರ ಪೈಕಿ ಕೆಲವರು ದೂರು ನೀಡಿದ್ದಾರೆ. ಈ ದೂರುಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಲಿದ್ದು, ಅವರಿಗೆ ನ್ಯಾಯ ಸಿಗುವ ಭರವಸೆ ಸಿಕ್ಕಿದೆ.
ಇದನ್ನೂ ಓದಿ: Fraud Case: ವೇದಿಕ್ ಆಯುರ್ ದೋಖಾ ಪ್ರಕರಣ; ಮಾಹಿತಿ ಪಡೆದು ಸಮಗ್ರ ತನಿಖೆಗೆ ಅದೇಶ ಎಂದ ಪರಮೇಶ್ವರ್