ಬೆಂಗಳೂರು: ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಸಹಚರರು ಕುರಿ ಮಾಂಸ ತಿಂದು ದುಡ್ಡು ಕೊಡದೇ ಮೋಸ (Fraud Case) ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ನಲಪಾಡ್ ಹುಟ್ಟುಹಬ್ಬಕ್ಕಾಗಿ ಬಲಗೈ ಬಂಟ ರಾಮಚಂದ್ರ ಅಲಿಯಾಸ್ ರಾಮನಾಯಕ್ ಎಂಬಾತ ಶರತ್ ಕುಮಾರ್ ಎಂಬ ಕುರಿ ವ್ಯಾಪಾರಿಯಿಂದ ಮೇಕೆಯೊಂದನ್ನು ಖರೀದಿಸಿದ್ದಾರೆ.
ಸುಮಾರು ನಾಲ್ಕೂವರೆ ಲಕ್ಷ ಬೆಲೆ ಬಾಳುವ ಮೇಕೆ ಖರೀದಿ ಮಾಡಿದ್ದು, ಒಂದು ವರ್ಷದಿಂದ ಮೇಕೆ ಹಣ ಕೊಡದೆ ರಾಮಚಂದ್ರ ಸತಾಯಿಸುತ್ತಿದ್ದಾನೆ. ರೌಡಿಶೀಟರ್ ಆಗಿರುವ ಆತ ದುಡ್ಡು ಕೇಳಿದರೆ ಧಮ್ಕಿ ಹಾಕುತ್ತಿದ್ದಾನೆ. ಇತ್ತ ಈ ಬಗ್ಗೆ ಎಲ್ಲ ಮಾಹಿತಿ ಗೊತ್ತಿದ್ದರೂ ನಲಪಾಡ್ ಕೂಡ ಪ್ರತಿಕ್ರಿಯಿಸುತ್ತಿಲ್ಲ ಎಂದು ಶರತ್‌ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ಲಕ್ಷಾಂತರ ಮೌಲ್ಯದ ಬಟ್ಟೆ ಖರೀದಿಸಿ ಮೋಸ
ಕೇವಲ ಮೇಕೆ ಖರೀದಿ ಮಾತ್ರವಲ್ಲದೆ ರಾಮಚಂದ್ರ ಲಕ್ಷಾಂತರ ರೂ. ಬಟ್ಟೆ ಖರೀದಿಸಿ ಹಣ ನೀಡಿದೆ ಮೋಸ ಮಾಡಿದ್ದಾರೆ ಎಂದು ಶರತ್‌ಕುಮಾರ್ ಆಪಾದಿಸಿದ್ದಾರೆ. ಈ ಬಗ್ಗೆ ನಲಪಾಡ್ ಹಾಗೂ ಸ್ನೇಹಿತರ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ಎರಡು ವರ್ಷಗಳ ಹಿಂದೆ ಶರತ್‌ಗೆ ರಾಮಚಂದ್ರನ ಪರಿಚಯವಾಗಿದ್ದು, ಇಬ್ಬರಲ್ಲೂ ಆತ್ಮೀಯತೆ ಬೆಳೆದಿತ್ತು. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕುರಿ ಸಾಗಾಣಿಕೆ ಮಾಡಿಕೊಂಡಿದ್ದ ಶರತ್‌ಕುಮಾರ್ ಜತೆಗೆ ಬೆಂಗಳೂರಿನ ಎಚ್.ಬಿ.ಆರ್ ಲೇಔಟ್‌ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ.
ಹೀಗೆ ಇದ್ದಾಗ ಕಳೆದ ವರ್ಷ ಸುಮಾರು 4,50,000 ಬೆಲೆ ಬಾಳುವ ಕುರಿಗಳನ್ನು ಮತ್ತು 89,000 ರೂ. ಮೌಲ್ಯದ ಬಟ್ಟೆಗಳನ್ನು ರಾಮಚಂದ್ರ ಖರೀದಿ ಮಾಡಿದ್ದಾನೆ. ಮಾತ್ರವಲ್ಲದೆ 11 ಸಾವಿರ ರೂ. ನಗದು ಹಣವನ್ನು ಪಡೆದು ವಾಪಸ್ ನೀಡದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಹಣ ಕೊಡುವುದಿಲ್ಲ, ನನಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಸಂಪರ್ಕವಿದೆ. ನೀನು ಯಾವ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ನಾನು ಬಚಾವ್ ಆಗುತ್ತೇನೆ ಎಂದು ರಾಮಚಂದ್ರ ಹೇಳುತ್ತಿದ್ದಾನೆ ಎಂದು ಶರತ್‌ಕುಮಾರ್ ದೂರಿದ್ದಾರೆ.
ಇದನ್ನೂ ಓದಿ: Murder Case : ತನ್ನ ಜತೆ ಬರಲು ಒಪ್ಪದ 8 ವರ್ಷದ ಮಗನನ್ನು ಚೂರಿಯಿಂದ ಇರಿದು ಕೊಂದ ಪಾಪಿ ತಂದೆ
ಜತೆಗೆ ಟೋಯಿಂಗ್ ವಾಹನದ ಟೆಂಡರ್ ನಲಪಾಡ್‌ನಿಂದ ಪಡೆದು ನಿನಗೆ ತಿಂಗಳಿಗೆ 50,000 ರೂ. ಕೊಡುತ್ತೇನೆ ಎಂದು ಸುಳ್ಳು ಹೇಳಿ ನನ್ನನ್ನು ನಂಬಿಸಿ ನನ್ನ ಕುರಿ ಫಾರಂನಿಂದ ಕುರಿಗಳನ್ನು ನಲಪಾಡ್‌ನ ಆಪ್ತನಾಗಿರುವ ಹೊಸಕೋಟೆ ಯೂತ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿಯ ಕುರಿ ಫಾರಂಗೆ ತಲುಪಿಸಿದ್ದಾನೆ ಎಂದು ಶರತ್‌ಕುಮಾರ್ ಆರೋಪಿಸಿದ್ದಾರೆ. ಸದ್ಯ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ಕೋರ್ಟ್ ಮೊರೆ ಹೋಗುವುದಾಗಿ ಶರತ್ ತಿಳಿಸಿದ್ದಾರೆ.