Site icon Vistara News

Free Bicycle: ಫಿಟ್‌ ಆಗಲು ಸೈಕಲಿಸ್ಟ್‌ ಆಗಿ; ಕಲಿಸಲು ಇವ್ರು ರೆಡಿ, ಕಲಿಯೋಕೆ ನೀವ್‌ ರೆಡಿನಾ?

Training to ride a bicycle for free from Dalta

Training to ride a bicycle for free from Dalta

ಬೆಂಗಳೂರು: ಬಹುತೇಕರಿಗೆ ಸೈಕಲ್ ಚಾಲನೆ ಇಷ್ಟವಿದ್ದರೂ ಕಲಿಯಲು ಬಾಡಿಗೆ ಸೈಕಲ್‌ಗಳು ಹಿಂದಿನಂತೆ ಲಭಿಸುತ್ತಿಲ್ಲ. ಇನ್ನು ಹೊಸ ಸೈಕಲ್‌ ಕೊಂಡು ಕಲಿಯುವ ಗೋಜಿಗೆ ಹೋಗುವುದಿಲ್ಲ. ಒಂದು ವೇಳೆ ಸೈಕಲ್‌ ಲಭಿಸಿದ್ದರೂ ಹೇಳಿಕೊಡುವವರು ಸುಲಭವಾಗಿ ಸಿಗುವುದಿಲ್ಲ. ಇದನ್ನು ಗಮನಿಸಿರುವ ಡಲ್ಟ್‌ (DULT) ಹೊಸ ಹೆಜ್ಜೆ ಇಟ್ಟಿದೆ. ಕರ್ನಾಟಕ ಬೈಸೈಕಲ್ ಡೀಲರ್ಸ್ ಅಸೋಸಿಯೇಶನ್, ಡೆಕತ್ಲಾನ್ ಹಾಗೂ ಇತರೆ ಸಂಘಗಳ ಜತೆ ಕೈಜೋಡಿಸಿ, ನಗರದಲ್ಲಿ ಸೈಕಲ್ ಚಲಾಯಿಸಲು ಕಲಿಯುವ ಆಸಕ್ತಿ ಹೊಂದಿರುವವರಿಗೆ ಉಚಿತವಾಗಿ (dult cycling training) ಹೇಳಿಕೊಡಲಾಗುತ್ತಿದೆ.

ಉದ್ಯಾನನಗರಿ ಬೆಂಗಳೂರಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ವಾಯುಮಾಲಿನ್ಯದ ಪ್ರಮಾಣ ಸಹ ಏರಿಕೆ ಆಗುತ್ತಲೇ ಇದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಖಾಸಗಿ ಸಂಸ್ಥೆಯೊಂದು ಕೈ ಹಾಕಿದೆ. ನಗರದಲ್ಲಿ ಸೈಕ್ಲಿಸ್ಟ್‌ಗಳಿಗೆ ಅರಿವು ಮೂಡಿಸುವುದರ ಜತೆಗೆ ಸೈಕಲ್ ಓಡಿಸಲು ಬಾರದವರಿಗೆ ಉಚಿತವಾಗಿ ಸೈಕಲ್ ಓಡಿಸಲು ಹೇಳಿಕೊಡಲಾಗುತ್ತಿದೆ.

ಪೆಡಲ್‌ ಶಾಲೆ ಕಾರ್ಯಕ್ರಮಕ್ಕೆ ಚಾಲನೆ

ನಗರದ ಕಬ್ಬನ್ ಪಾರ್ಕ್ ಆವರಣದಲ್ಲಿ ಈ ಕಾರ್ಯಕ್ರಮಕ್ಕೆ ಮಾ.19ರಂದು ಚಾಲನೆ ನೀಡಲಾಯಿತು. ಬೈಸಿಕಲ್ ಮೇಯರ್ ಆಫ್ ಬೆಂಗಳೂರಿನ ಸತ್ಯ ಶಂಕರನ್, ಡಲ್ಟ್ ಹಿರಿಯ ಅಧಿಕಾರಿಗಳು, ಡೆಕತ್ಲಾನ್ ಸಿಬ್ಬಂದಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ವೇಳೆ ಸತ್ಯ ಶಂಕರನ್‌ ಮಾತನಾಡಿ, ಪೆಡಲ್ ಶಾಲೆ ಎಂಬ ಹೆಸರನಡಿ ಆರಂಭವಾಗಿರುವ ಈ ಕಾರ್ಯಕ್ರಮದಿಂದ ಖಂಡಿತವಾಗಿಯೂ ನಗರದ ಮಾಲಿನ್ಯದ ಪ್ರಮಾಣ ಕುಗ್ಗಿ, ಜನರ ಆರೋಗ್ಯದ ಸ್ಥಿತಿಯೂ ಉತ್ತಮವಾಗಲಿದೆ. ನಗರದಲ್ಲಿ ಈ ಪ್ರಯತ್ನಕ್ಕೆ ಯಶಸ್ಸು ಕಂಡ ಮೇಲೆ ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಉಚಿತವಾಗಿ ಹಾಗೂ ಪ್ರೊಫೆಶನಲ್‌ ಆಗಿ ಸೈಕಲ್ ಕಲಿಯಬೇಕು ಎಂಬ ಆಸೆ ಇರುವವರು DULT ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಆಗಬೇಕು. ಅವರಿಗೆ ಬೆಂಗಳೂರು ಬೈಸಿಕಲ್ ಸ್ಕೂಲ್ ಹಾಗೂ ಡೆಕತ್ಲಾನ್ ವತಿಯಿಂದ ತರಬೇತುದಾರರನ್ನು ನಿಯೋಜಿಸಿ ಟ್ರೈನಿಂಗ್ ನೀಡಲಾಗುತ್ತದೆ.

ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಯಲ್ಲಿ ಉಡುಪಿ, ಬೆಂಗಳೂರು, ಬೀದರ್‌ನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ನಗರದ 17 ಸ್ಥಳಗಳಲ್ಲಿ ಉಚಿತವಾಗಿ ಹೇಳಿಕೊಡಲು ಈ ಯೋಜನೆಯನ್ನು ರೂಪಿಸಲಾಗಿದ್ದು, ಇದರಿಂದ ಸೈಕಲ್ ಬಳಕೆಯನ್ನು ಉತ್ತೇಜಿಸಿದಂತಾಗುತ್ತದೆ. ಅಷ್ಟೇ ಅಲ್ಲದೆ, ರಸ್ತೆಗಳಲ್ಲಿರುವ ಟ್ರಾಫಿಕ್ ಪ್ರಮಾಣ ಕಡಿಮೆ ಆಗುವುದರ ಜತೆಗೆ ಸೈಕಲ್ ಓಡಿಸುವುದರಿಂದ ಆರೋಗ್ಯವೂ ವೃದ್ಧಿಯಾಗಲಿದ್ದು, ಪರಿಸರದ ಮಾಲಿನ್ಯವೂ ಕಡಿಮೆಯಾಗುತ್ತದೆ ಎಂದು ಸಂಘಟನಕಾರರು ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version