ಬೆಂಗಳೂರು: ಭಾನುವಾರವಷ್ಟೇ (ಜೂನ್ 11) ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಲ್ಲಿ (Congress Guarantee) ಒಂದಾದ “ಶಕ್ತಿ” ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ (Free Bus Service) ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಭರ್ಜರಿ ಪ್ರತಿಕ್ರಿಯೆಯೂ ಲಭ್ಯವಾಗಿದೆ. ಅಲ್ಲದೆ, ಪ್ರಥಮ ದಿನವೇ ಉತ್ತಮ ಸ್ಪಂದನೆ ಸಿಕ್ಕಿದ್ದು, ಒಟ್ಟಾರೆಯಾಗಿ 5.71 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಒಟ್ಟು 1.40 ಕೋಟಿ ರೂಪಾಯಿಯನ್ನು ಸರ್ಕಾರ ಉಚಿತ ಮಾದರಿಯಲ್ಲಿ ಭರಿಸಿದೆ. ಆದರೆ, ಇದು ಈಗ ಪರೋಕ್ಷವಾಗಿ ವ್ಯತಿರಿಕ್ತ ಪರಿಣಾಮವನ್ನೂ ಬೀರತೊಡಗಿದೆ. ದುಡಿದು ತಿನ್ನುವ ಖಾಸಗಿ ಬಸ್, ಆಟೊ ಮಾಲೀಕರ ಪರಿಸ್ಥಿತಿ ಈಗ ಅಕ್ಷರಶಃ ಚಿಂತಾಜನಕವಾಗಿದೆ. ಅವರೆಲ್ಲರ ಆಕ್ರೋಶಕ್ಕೆ ರಾಜ್ಯ ಸರ್ಕಾರ ತುತ್ತಾಗಿದೆ.
ಶಕ್ತಿ ಕಳೆದುಕೊಂಡ ಖಾಸಗಿ ಬಸ್‌ಗಳು?
ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾಜ್ಯದ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದು, ರಾತ್ರಿ ಸುಮಾರು 12ರವರೆಗೂ ಅಂದಾಜು 5.71 ಲಕ್ಷ ಮಹಿಳೆಯರು ಈ ಸೌಲಭ್ಯವನ್ನು ಪಡೆದಿದ್ದಾರೆ. ಹೀಗಾಗಿ ಈ ಯೋಜನೆಯನ್ನು ಸರ್ಕಾರ ಚಾಲ್ತಿಗೆ ತಂದು ನಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿದೆ. ಖಾಸಗಿ ಬಸ್‌ಗಳ, ಆಟೊ ಮಾಲೀಕರ ಹಿತದೃಷ್ಟಿಯನ್ನೂ ಇಟ್ಟುಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಆಕ್ರೋಶ ಭರಿತ ಮಾತುಗಳು ಕೇಳಿಬಂದಿದ್ದು, ಇದಕ್ಕೀಗ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಮನವಿಯನ್ನೂ ಮಾಡಿದ್ದಾರೆ.
ಇದನ್ನೂ ಓದಿ: Student Bus pass: ರಿಯಾಯಿತಿ ವಿದ್ಯಾರ್ಥಿ ಬಸ್ ಪಾಸ್ ಪಡೆಯೋದು ಹೀಗೆ; ಹೆಣ್ಮಕ್ಕಳಿಗೆ ಫ್ರೀನಾ?
ಸರ್ಕಾರದ ಈ ಉಚಿತ ಯೋಜನೆಯಿಂದ ತಮ್ಮ ವ್ಯಾಪಾರ ವಹಿವಾಟಿಗೆ ಬರೆ ಬಿದ್ದಿದೆ. ವ್ಯಾಪಾರದಲ್ಲಿ ಶೇ.75ರಷ್ಟು ಇಳಿಕೆ ಕಂಡಿದೆ ಎಂದು ಖಾಸಗಿ ಬಸ್ ಮಾಲೀಕರು, ಚಾಲಕರು ಹಾಗೂ ಸಿಬ್ಬಂದಿ ವಿವರವನ್ನು ತೆರೆದಿಟ್ಟಿದ್ದಾರೆ. ಆದರೆ, ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳುವುದೇ ಬೇರೆಯಾಗಿದೆ. ಒಂದೇ ದಿನದಲ್ಲಿ ಯಾವ ಉದ್ಯಮವೂ ನೆಲ ಕಚ್ಚುವುದಿಲ್ಲ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿ ಮಾಡಿ ಒಂದು ದಿನ ಆಗಿದೆಯಷ್ಟೇ. ಮೊದಲ ಕೆಲ ವಾರಗಳ ಕಾಲ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣ ಮಾಡಬೇಕು ಎನ್ನುವ ಜೋಶ್‌ನಲ್ಲಿರುತ್ತಾರೆ. ಕ್ರಮೇಣವಾಗಿ ಅದು ಕಡಿಮೆಯಾಗಲಿದ್ದು, ಎಲ್ಲರ ವ್ಯಾಪಾರವೂ ಸರಿಹೋಗಲಿದೆ. ಅಷ್ಟೇ ಅಲ್ಲದೆ, ರಾಜ್ಯದ ಮಹಿಳೆಯರಿಗೆ ಈ ಯೋಜನೆ ಉಚಿತವಾಗಿರುವುದರಿಂದ ಇತರೆ ಮಹಿಳೆಯರು ಎಂದಿನಂತೆ ತಮ್ಮಿಷ್ಟದ ಸಾರಿಗೆ ವ್ಯವಸ್ಥೆಯತ್ತ ಮುಖ ಮಾಡಲಿದ್ದಾರೆ. ಖಾಸಗಿ ಬಸ್‌ಗಳಿಗೆ ನಮ್ಮ ಯೋಜನೆಯಿಂದ ಏನೂ ದೊಡ್ಡ ಹೊಡೆತವಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಳೆಯರಿಂದಲೂ ಬೇಕಾಬಿಟ್ಟಿ ಓಡಾಟ ಇಲ್ಲ?
ಶಕ್ತಿ ಯೋಜನೆ ಚಾಲ್ತಿಗೆ ಬಂದಿದೆ ಎಂಬ ಕಾರಣದಿಂದ ಮಹಿಳೆಯರು ಸಹ ಬೇಕಾಬಿಟ್ಟಿಯಾಗಿ ಬಸ್‌ಗಳಲ್ಲಿ ಸಂಚಾರ ಮಾಡುತ್ತಿಲ್ಲ. ಕಳೆದ ಸೋಮವಾರಕ್ಕಿಂತ ಈ ವಾರ ಶೇ. 15ರಿಂದ 20ರಷ್ಟು ಮಾತ್ರ ಮಹಿಳೆಯರ ಸಂಚಾರದಲ್ಲಿ ಹೆಚ್ಚಳವಾಗಿದೆ. ಎಸಿ ಬಸ್‌ಗಳಲ್ಲಿಯೂ ಮಹಿಳೆಯರ ಸಂಖ್ಯೆ ಕಡಿಮೆಯಾಗಿಲ್ಲ, ಬದಲಾಗಿ ಮೆಟ್ರೋ ಪ್ರಯಾಣಿಕರಲ್ಲಿ ಮಾತ್ರ ಕೊಂಚ ಮಟ್ಟಿಗೆ ತಗ್ಗಿದೆ. ಅವರಲ್ಲಿ ಹೆಚ್ಚಿನವರು ಈ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Veershaiva Lingayath: ಪಂಚಾಚಾರ್ಯರ ಸಭೆಗೆ ವಿರಕ್ತರು ಹೋಗಬಾರದು: ವೀರಶೈವ ಆಚರಣೆಗಳನ್ನು ತೆಗೆಯುತ್ತೇವೆ ಎಂದ ಜಾಮದಾರ್
ಶಿವಮೊಗ್ಗ, ದಾವಣಗೆರೆ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರ ಪ್ರಮಾಣ ಕುಸಿದಿತ್ತು. ಹೆಚ್ಚಿನ ಜನರು ಸರ್ಕಾರಿ ಬಸ್‌ಗಳಲ್ಲಿ ಸಂಚಾರ ಮಾಡಿದ್ದಾರೆ. ಇದು ಹೀಗೇ ಮುಂದುವರಿದರೆ ತಮ್ಮ ಕಥೆ ಏನು ಎಂಬ ಬಗ್ಗೆ ಎಲ್ಲರೂ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಬೆಂಗಳೂರು ಸೇರಿದಂತೆ ಇನ್ನಿತರ ಕಡೆ ಆಟೊ ಚಾಲಕರದ್ದೂ ಸಹ ಇದೇ ವ್ಯಥೆಯಾಗಿದ್ದು, ಈಗ ಮಹಿಳೆಯರು ಬಸ್ ಪ್ರಯಾಣವನ್ನೇ ಇಷ್ಟಪಡುತ್ತಿದ್ದಾರೆ. ನಮ್ಮ ನಿತ್ಯದ ದುಡಿಮೆಗೆ ಸಂಚಕಾರ ಬಂದಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.