ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ (Shakti scheme) ಆರಂಭವಾದಾಗ ಇನ್ನು ಮುಂದೆ ಪುರುಷರು ಕೂಡಾ ಇದರ ಲಾಭ ಪಡೆಯಲು ಬುರ್ಕಾ ಧರಿಸಿ ಬರಬಹುದು ಎಂದು ತಮಾಷೆ ಮಾಡಲಾಗುತ್ತಿತ್ತು. ಜತೆಗೆ ಯಾರೋ ಒಬ್ಬ ಮುಸ್ಲಿಂ ಧರ್ಮಗುರು ಮೂರ್ನಾಲ್ಕು ಜನರನ್ನು ಕೂರಿಸಿಕೊಂಡು ʻನೋಡಿ ಇನ್ನು ಮುಂದೆ ಬುರ್ಕಾಕ್ಕೆ ಭಾರಿ ಡಿಮ್ಯಾಂಡ್ ಬರಲಿದೆ. ಪುರುಷರೆಲ್ಲ ಬುರ್ಕಾ ಖರೀದಿ ಮಾಡ್ಕೊಂಡು ಫ್ರೀ ಆಗಿ (Free Bus service) ಪ್ರಯಾಣ ಮಾಡಲಿದ್ದಾರೆʼʼ ಎಂದು ಭವಿಷ್ಯ ನುಡಿದು ಗೇಲಿ ಮಾಡಿದ್ದರು. ರಾಜ್ಯದಲ್ಲಿ ಅಂಥ ಘಟನೆಗಳೇನೂ ಹೆಚ್ಚು ನಡೆದಿಲ್ಲವಾದರೂ ಧಾರವಾಡದಲ್ಲಿ ಗುರುವಾರ ಈ ಪ್ರಯತ್ನಕ್ಕೆ ಕೈ ಇಟ್ಟು ಸಿಕ್ಕಿಬಿದ್ದಿದ್ದಾನೆ (Bukha wearing Man).
ಧಾರವಾಡ ಜಿಲ್ಲೆಯ (Dharawad News) ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ಗುರುವಾರ ಬುರ್ಕಾ ಧರಿಸಿ ಮಹಿಳೆಯೊಬ್ಬರು ಕುಳಿತಿದ್ದದ್ದು ಕೆಲವರ ಸಂಶಯಕ್ಕೆ ಕಾರಣವಾಗಿತ್ತು. ಇನ್ನೇನು ಬಸ್ ಹತ್ತಬೇಕು ಎನ್ನುವಾಗ ಆ ಮಹಿಳೆಯ ಚಲನವಲನಗಳನ್ನು ಗಮನಿಸಿದ್ದ ಕೆಲವರು ತಡೆದು ವಿಚಾರಿಸಿದರು.
ಆತನ ಮುಖ, ಕಾಲುಗಳು, ದೇಹಭಾಷೆ, ನಡೆಯುವ ಶೈಲಿ, ಕುಳಿತ ಭಂಗಿಗಳೆಲ್ಲವೂ ಸಂಶಯಕ್ಕೆ ಕಾರಣವಾಗಿದ್ದವು. ಹೀಗಾಗಿ ಸೇರಿದ ಪ್ರಯಾಣಿಕರು ಆತನನ್ನು ಮುಖದ ಭಾಗದ ಬುರ್ಕಾವನನು ತೆಗೆಯುವಂತೆ ಹೇಳಿದರು. ಈ ವೇಳೆ ಮಾತನಾಡಿದ ಆತನ ಧ್ವನಿ ಸಂಶಯವನ್ನು ಇನ್ನಷ್ಟು ಹೆಚ್ಚಿಸಿತು.
ಬಳಿಕ ಒತ್ತಾಯದಿಂದ ಬುರ್ಕಾವನ್ನು ಪೂರ್ಣವಾಗಿ ತೆಗೆಸಲಾಯಿತು. ಆಗ ಒಳಗೆ ಇರುವುದು ಅವಳಲ್ಲ, ಅವನು ಎನ್ನುವುದು ಸ್ಪಷ್ಟವಾಯಿತು. ಒಬ್ಬ ಪ್ಯಾಂಟ್ ಶರ್ಟ್ ಧರಿಸಿದ ವ್ಯಕ್ತಿ ಆ ಬುರ್ಕಾದೊಳಗೆ ಇದ್ದ!
ಅಂದ ಹಾಗೆ ಹೀಗೆ ಸಿಕ್ಕಿಬಿದ್ದ ವ್ಯಕ್ತಿಯ ಹೆಸರು ವೀರಭದ್ರಯ್ಯ ನಿಂಗಯ್ಯ ಮಠಪತಿ. ನಾನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಘೋಡಗೋರಿ ಗ್ರಾಮದವನು ಎಂದು ಹೇಳಿಕೊಂಡಿದ್ದಾನೆ. ನಾನು ಭಿಕ್ಷಾಟನೆಗೆ ಬಂದಿದ್ದೇನೆ. ಅದಕ್ಕಾಗಿಯೇ ಬುರ್ಕಾ ಧರಿಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Free Bus service : ಫ್ರೀ ಬಸ್‌ನಿಂದ ಹೆಣ್ಮಕ್ಳು ಯಾರ ಮಾತೂ ಕೇಳ್ತಿಲ್ಲ, ಗಂಡಸ್ರಿಗೂ ಫ್ರೀ ಕೊಡಿ; ವಾಟಾಳ್ ಡಿಮ್ಯಾಂಡ್!
ಈ ವ್ಯಕ್ತಿ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಯಿಂದ ಸಂಶಿಗೆ ಬಂದಿದ್ದಾನೆ ಎನ್ನಲಾಗಿದೆ. ಈತ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕಾಗಿ ಬುರ್ಕಾ ಹಾಕಿಕೊಂಡಿರುವುದು ಬಹುತೇಕ ಖಚಿತವಾಗಿದೆ. ಯಾಕೆಂದರೆ, ಆತ ತನ್ನ ಕೈಯಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಫೋಟೊ ಇರುವ ಆಧಾರ್ ಕಾರ್ಡ್‌ನ ಝೆರಾಕ್ಸ್ ಪ್ರತಿಯನ್ನು ಕೂಡಾ ಹಿಡಿದುಕೊಂಡಿದ್ದ. ಇದು ಯಾರಾದರೂ ಸಂಶಯದಿಂದ ಕೇಳಿದರೆ ಕೊಡಲಿಕ್ಕಾಗಿ ಇಟ್ಟುಕೊಂಡಿರುವ ಸಾಧ್ಯತೆಯೂ ಇದೆ.