Site icon Vistara News

Free Bus Service: ದುಡ್ಡೂ ತಂದಿಲ್ಲ, ದಾಖಲೆಯೂ ಜತೆಗಿಲ್ಲ; ಬಸ್ಸಿನಲ್ಲೇ ಗೊಳೋ ಎಂದು ಅತ್ತ ಮಹಿಳೆ!

free bus in udupi and women

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ (Congress Guarantee) ಯೋಜನೆಯಲ್ಲಿ ಮೊದಲಿಗೆ ಅನುಷ್ಠಾನಗೊಂಡಿರುವ ಮಹಿಳೆಯರಿಗೆ ಉಚಿತ ಬಸ್‌ (Free Bus Service) ಯೋಜನೆಯ “ಶಕ್ತಿ” ಬಗ್ಗೆ ಇನ್ನೂ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಹೋಗಿಲ್ಲ. ಈ ಕಾರಣಕ್ಕಾಗಿ ಹಲವಾರು ರೀತಿಯ ಗೊಂದಲಗಳು ಇನ್ನೂ ಮುಂದುವರಿದಿದೆ. ಕೆಲವು ಮಹಿಳೆಯರಿಗೆ ದಾಖಲೆ ತರಬೇಕು ಎಂಬ ವಿಚಾರವೇ ಗೊತ್ತಿಲ್ಲ. ಉಚಿತ ಎಂದ ಮೇಲೆ ಹಾಗೇ ಹೋದರಾಯಿತು ಎಂದು ಕೈ ಬೀಸಿಕೊಂಡು ಬರುತ್ತಿರುವವರೂ ಇದ್ದಾರೆ. ಇನ್ನು ಮುದ್ರಿತ ಒರಿಜಿನಲ್‌ ದಾಖಲೆಯನ್ನು (Original Document) ತರದೇ ಮೊಬೈಲ್‌ ಮೂಲಕ ಫೋಟೊ ಕಾಪಿಯನ್ನು ತೋರಿಸುವವರೂ ಇದ್ದಾರೆ. ಇದು ಸಾರಿಗೆ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗುತ್ತದೆ. ಗೊಂದಲಗಳೂ ಸಹ ಬಗೆಹರಿಯುತ್ತಿಲ್ಲ. ಈಗ ಉಡುಪಿಯಲ್ಲಿ ಇದ್ಯಾವುದೂ ಗೊತ್ತಿಲ್ಲದ ಮಹಿಳೆಯೊಬ್ಬರು ಕಣ್ಣೀರಾಗಿರುವ ಪ್ರಸಂಗ ನಡೆದಿದೆ.

ಉಡುಪಿಯಿಂದ ಶಿವಮೊಗ್ಗ ತೆರಳಬೇಕಾಗಿದ್ದ ವಯಸ್ಕ ಮಹಿಳೆಯೊಬ್ಬರು ಬಸ್‌ ಹತ್ತಿದ್ದಾರೆ. ಅವರ ತಲೆಯಲ್ಲಿ ಹೇಗೂ ನಮಗೆ ಫ್ರೀ ಪ್ರಯಾಣ ಎಂಬ ವಿಚಾರವಷ್ಟೇ ಇತ್ತು ಬಿಟ್ಟರೆ, ಅದಕ್ಕೆ ದಾಖಲೆಗಳನ್ನು ಜತೆಯಲ್ಲಿಟ್ಟುಕೊಂಡು ಬರಬೇಕು ಎಂಬಿತ್ಯಾದಿ ಯಾವ ಮಾಹಿತಿಯೂ ಗೊತ್ತಿಲ್ಲ. ಇದೇ ಎಡವಟ್ಟಿಗೆ ಕಾರಣವಾಗಿದೆ.

ಇದನ್ನೂ ಓದಿ: Free Bus Service: ಗದಗದಲ್ಲಿ ‘ಒರಿಜಿನಲ್‌’ ಕಿರಿಕ್‌; ಫ್ರೀ ಬಸ್‌ಗೆ ಮೊಬೈಲ್‌ ಡಾಕ್ಯುಮೆಂಟ್‌ ಎಲ್ಲ ಆಗೋಲ್ಲ!

ಬಸ್‌ ಕಂಡಕ್ಟರ್‌ ಎಂದಿನಂತೆ ಎಲ್ಲರಿಗೂ ಟಿಕೆಟ್‌ ಬಗ್ಗೆ ವಿಚಾರಿಸಿಕೊಂಡು ಬಂದಿದ್ದಾರೆ. ಹಾಗೆಯೇ ಈ ಮಹಿಳೆಯ ಬಳಿ ಬಂದು ದಾಖಲೆ ತೋರಿಸಿ ಅಮ್ಮಾ ಎಂದು ಕೇಳಿದ್ದಾರೆ. ಅದಕ್ಕೆ ಇವರು ಯಾವ ದಾಖಲೆ ಎಂದು ಕೇಳಿದ್ದಾರೆ. ಅದಕ್ಕೆ ನಿರ್ವಾಹಕ, ಸರ್ಕಾರ ಹೇಳಿದ ಯಾವುದಾದರೂ ಒಂದು ದಾಖಲೆ (ನಿಮ್ಮ ಫೋಟೊ ಇರುವಂಥದ್ದು) ತೋರಿಸಿ, ನಾನು ನಿಮಗೆ ಟಿಕೆಟ್‌ ಕೊಡಬೇಕು ಎಂದು ಹೇಳಿದ್ದಾರೆ.

ಆಗ ಆ ಮಹಿಳೆ, ನನಗೆ ಯಾಕೆ ಟಿಕೆಟ್‌ ಕೊಡುತ್ತೀರಿ? ಇದು ಮಹಿಳೆಯರಿಗೆ ಉಚಿತ ಪ್ರಯಾಣ ಅಲ್ಲವೇ ಎಂದು ಕೇಳಿದ್ದಾರೆ. ಆಗ ನಿರ್ವಾಹಕ, ಹೌದಮ್ಮ, ಮಹಿಳೆಯರಿಗೆ ಉಚಿತ ಪ್ರಯಾಣ ಇದೆ. ಆದರೆ, ನೀವು ನಿಮ್ಮ ದಾಖಲೆ ಕೊಡಬೇಕು. ನಾನು ಆಗ ನಿಮಗೆ ಉಚಿತವಾದ ಟಿಕೆಟ್‌ ಅನ್ನು ಕೊಡುತ್ತೇನೆ. ಹೀಗೇ ನಿಯಮ ಇದೆ ಎಂದು ಹೇಳಿದ್ದಾರೆ.

ಗೊಳೋ ಎಂದು ಅತ್ತ ಮಹಿಳೆ

ಆಗ ಹೌಹಾರಿದ ಮಹಿಳೆ, ತಮ್ಮ ಬಳಿ ಯಾವುದೇ ದಾಖಲೆ ಇಲ್ಲ. ತಾವು ಯಾವುದನ್ನೂ ತಂದಿಲ್ಲ ಎಂದು ಆತಂಕದಿಂದಲೇ ಹೇಳಿದ್ದಾರೆ. ಆದರೆ, ಇದಕ್ಕೆ ನಿರ್ವಾಹಕ ಏನೂ ಮಾಡಲು ಸಾಧ್ಯ ಇರಲಿಲ್ಲ. ಅದಕ್ಕೆ ಅವರು, ಇಲ್ಲಮ್ಮ, ನಿಮ್ಮ ಬಳಿ ದಾಖಲೆ ಇಲ್ಲದಿದ್ದರೆ ನೀವು ದುಡ್ಡು ಕೊಟ್ಟು ಪ್ರಯಾಣ ಮಾಡಬೇಕು. ಇದು ಸಹ ನಿಯಮದಲ್ಲಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಮಹಿಳೆಗೆ ದಿಕ್ಕು ತೋಚದಾಗಿದೆ. ಕಣ್ಣಲ್ಲಿ ನೀರು ಬರಲು ಶುರುವಾಗಿದೆ. ಕಾರಣ, ಅವರ ಬಳಿ ಹಣ ಇರಲಿಲ್ಲ. ಹೇಗೂ ಉಚಿತ ಎಂಬ ಕಾರಣಕ್ಕೆ ಹಣವಿಲ್ಲದೆ ಬಸ್‌ ಹತ್ತಿದ್ದರು. ಗೊಳೋ ಎಂದು ಅಳ್ಳಲು ಶುರು ಮಾಡಿದ್ದಾರೆ.

ಇದನ್ನು ಸಹ ಪ್ರಯಾಣಿಕರು ವಿಡಿಯೊ ಮಾಡಿಕೊಂಡಿದ್ದಾರೆ. ಆದರೆ, ಅಲ್ಲಿಯೇ ಇದ್ದ ಒಬ್ಬ ಸಹ ಪ್ರಯಾಣಿಕರು ಮಾನವೀಯತೆ ದೃಷ್ಟಿಯಿಂದ ಶಿವಮೊಗ್ಗಕ್ಕೆ ಟಿಕೆಟ್ ಮಾಡಿಸಿ ಕೊಟ್ಟಿದ್ದಾರೆ. ಅಲ್ಲಿಗೆ ಈ ಪ್ರಹಸನ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಕವಿಯಲಿದೆ ಮೋಡ; ಕರಾವಳಿಯಲ್ಲಿ ಮಳೆಯ ಅಬ್ಬರ ನೋಡ

ಸದ್ಯ ಪ್ರಯಾಣಕ್ಕೆ ಏನು ದಾಖಲೆ ಬೇಕು?

ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್‌ ಕಾರ್ಡ್‌ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ. ಆದರೆ, ಡಿಜಿಲಾಕರ್‌ ಅಲ್ಲದೆ, ಕೇವಲ ಫೋಟೊಗಳನ್ನು ಇಟ್ಟುಕೊಂಡು ಹೋದರೆ ಅದಾಗದು. ಹೀಗಾಗಿ ನಿಮ್ಮ ಬಳಿ ಮುದ್ರಿತ ದಾಖಲೆಯನ್ನು ಇಟ್ಟುಕೊಳ್ಳಬೇಕು.

Exit mobile version