ಬೆಂಗಳೂರು: ರಾಜ್ಯ ಸರ್ಕಾರದ 5 ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ ಒಂದಾಗಿರುವ “ಶಕ್ತಿ” ಅಡಿ ಮಹಿಳೆಯರು ಉಚಿತ ಪ್ರಯಾಣಕ್ಕೆ (Free Bus Service) ಹಲವು ಅಡ್ಡಿ ಆತಂಕಗಳು ಎದುರಾಗಿತ್ತು. ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಈ ಉಚಿತ ಬಸ್ ಸೇವೆಗೆ ಚಾಲನೆ ಕೊಟ್ಟಿದ್ದರು. ಆದರೆ, ರಾಜ್ಯಾದ್ಯಂತ ಗೊಂದಲಗಳು ಮಾತ್ರ ಮುಂದುವರಿದಿದ್ದವು. ಬಸ್‌ನಲ್ಲಿ ಮುದ್ರಿತ ಒರಿಜಿನಲ್ ಡಾಕ್ಯುಮೆಂಟ್ (Original Document) ಇದ್ದರೆ ಮಾತ್ರ ಉಚಿತ ಟಿಕೆಟ್ ಕೊಡುವುದಾಗಿ ಸಾರಿಗೆ ಸಿಬ್ಬಂದಿ ಹೇಳುತ್ತಿರುವುದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಆದರೆ, ಈ ಬಗ್ಗೆ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈಗ ಹೊಸ ಆದೇಶವೊಂದನ್ನು ಹೊರಡಿಸಲು ಮುಂದಾಗಿದೆ. ಉಚಿತ ಪ್ರಯಾಣಕ್ಕೆ ಮಹಿಳೆಯರು ಒರಿಜಿನಲ್ ದಾಖಲೆಯನ್ನು ಒಯ್ಯುವುದು ಕಡ್ಡಾಯ ಅಲ್ಲ ಎಂದು ಹೇಳಿದೆ.
ಬಸ್‌ನಲ್ಲಿ ಪ್ರಯಾಣಿಸುವಾಗ ಒರಿಜಿನಲ್ ದಾಖಲೆ ಕಡ್ಡಾಯ ಎಂದು ಈ ಹಿಂದೆ ಹೊರಡಿಸಿದ್ದ ಆದೇಶದಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಪಾಲಿಸುವುದು ಸಾರಿಗೆ ಸಿಬ್ಬಂದಿಗೆ ಅನಿವಾರ್ಯವೂ ಆಗಿತ್ತು. ಅದಕ್ಕಾಗಿ ಒರಿಜನಲ್ ದಾಖಲೆಯನ್ನು ತಾರದೇ ಇರುವವರಿಗೆ ಉಚಿತ ಟಿಕೆಟ್ ನೀಡಲು ನಿರಾಕರಣೆ ಮಾಡಲಾಗುತ್ತಿತ್ತು. ಜತೆಗೆ ಅವರಿಗೆ ದುಡ್ಡು ಕೊಟ್ಟು ಪ್ರಯಾಣ ಮಾಡುವಂತೆ ಸೂಚನೆ ನೀಡಲಾಗುತ್ತಿತ್ತು.
ಈಗ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಸ್ತಾರ ನ್ಯೂಸ್ ಜತೆ ಮಾತನಾಡಿದ್ದು, ಇ ಕಾಪಿ, ಕಲರ್ ಕಾಪಿ ತೋರಿಸಿಯೂ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಈ ಬಗ್ಗೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ ಬಗ್ಗೆ ಪರಿಷ್ಕೃತ ಆದೇಶ ಹೊರಬೀಳಲಿದೆ. ಈ ಮೂಲಕ ಬಸ್‌ನಲ್ಲಿ ಕಂಡು ಬರುತ್ತಿದ್ದ ಒರಿಜಿನಲ್ ದಾಖಲೆ ಗಲಾಟೆ ಬಗೆಹರಿಯಲಿದೆ.
ಇದನ್ನೂ ಓದಿ: PAN Card: ಆಧಾರ್ ಬಳಸಿಕೊಂಡು ಪ್ಯಾನ್ ಅಡ್ರೆಸ್ ಚೇಂಜ್ ಮಾಡಬಹುದು! ಈ ಸ್ಟೆಪ್ಸ್ ಫಾಲೋ ಮಾಡಿ…
ಗದಗ, ಯಾದಗಿರಿಯಲ್ಲಿ ನಡೆದಿತ್ತು ‘ಒರಿಜಿನಲ್’ ಕಿರಿಕ್
ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಹಿಳೆಯರು ಖುಷಿ ಖುಷಿಯಾಗಿಯೇ ಬಸ್ ಹತ್ತುತ್ತಿದ್ದಾರೆ. ಆದರೆ, ಈಗ ಗದಗ ಹಾಗೂ ಯಾದಗಿರಿಯಲ್ಲಿ ಒರಿಜಿನಲ್ ಆಧಾರ್ ಕಾರ್ಡ್ ವಿಷಯಕ್ಕೆ ಕಿರಿಕ್ ನಡೆದಿದೆ.
ಗದಗಿನ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೊಪ್ಪಳದಿಂದ ಹುಬ್ಬಳ್ಳಿಗೆ ಮಹಿಳೆಯೊಬ್ಬರು ಪ್ರಯಾಣ ಬೆಳೆಸಿದ್ದರು. ಈ ಮಧ್ಯೆ ಗದಗಿನಲ್ಲಿ ಇನ್ನೊಂದು ಬಸ್ ಹತ್ತಿರುವ ಮಹಿಳೆಯು ಅಲ್ಲಿ ಕಂಡಕ್ಟರ್ ಜತೆಗೆ ವಾಗ್ವಾದ ನಡೆಸಿದ್ದಾರೆ. ಇಷ್ಟಕ್ಕೂ ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗಿದ್ದು, ದಾಖಲೆಯ ವಿಚಾರ. ಆಕೆ ತನ್ನ ಗುರುತಿನ ಮುದ್ರಿತ ದಾಖಲೆಯನ್ನು ಇಟ್ಟುಕೊಂಡಿಲ್ಲ. ಮೊಬೈಲ್‌ನಲ್ಲಿನ ಆಧಾರ್ ಕಾರ್ಡ್ ತೋರಿಸಿದ್ದಾರೆ.
ಆದರೆ, ಈ ಮೊದಲೇ ಸರ್ಕಾರದಿಂದ ಸೂಚನೆ ಇರುವ ಹಿನ್ನೆಲೆಯಲ್ಲಿ ನಿರ್ವಾಹಕ ಮೊಬೈಲ್ ಮೂಲಕ ಫೋಟೊ ದಾಖಲೆ ಇಟ್ಟುಕೊಂಡು ಉಚಿತ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಣೆ ಮಾಡಿದ್ದಾರೆ. ಡಿಜಿಲಾಕರ್‌ನಲ್ಲಿದ್ದರೆ ಸರಿ ಎಂದು ಹೇಳಿದ್ದಾರೆ. ಆದರೆ, ಮಹಿಳೆಗೆ ಡಿಜಿ ಲಾಕರ್ ಬಗ್ಗೆ ಮಾಹಿತಿ ಇಲ್ಲ. ಅವರ ಬಳಿ ಮೊಬೈಲ್‌ನಲ್ಲಿ ದಾಖಲೆಯ ಫೋಟೊ ಮಾತ್ರ ಇತ್ತು.
ನಿರ್ವಾಹಕ ಉಚಿತ ಪ್ರಯಾಣಕ್ಕೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ, ನಿರ್ವಾಹಕನ ಮುಖಕ್ಕೆ ಮೊಬೈಲ್ ಹಿಡಿದು, ತಾನು ತೋರಿಸುತ್ತಿರುವುದೂ ದಾಖಲೆಯೇ ಆಗಿದೆ. ಇದು ನನ್ನ ಆಧಾರ್ ಕಾರ್ಡ್‌ನ ಸಾಫ್ಟ್ ಕಾಪಿಯಾಗಿದೆ. ನೋಡಿ, ಇದು ದಾಖಲೆ ಹೌದೋ ಅಲ್ಲವೋ ಎಂದು ತಗಾದೆ ತೆಗೆದಿದ್ದಾರೆ.
ಇದಕ್ಕೆ ನಿರ್ವಾಹಕ ಮಾತ್ರ ಬಿಲ್‌ಕುಲ್ ಒಪ್ಪಲಿಲ್ಲ. “ಇಲ್ಲ ಇಲ್ಲ, ನಮಗೆ ಇರುವ ಸೂಚನೆಯಂತೆ ನಾನು ನಡೆದುಕೊಳ್ಳಲೇಬೇಕು. ನೀವು ಮುದ್ರಿತ ದಾಖಲೆಯನ್ನು ತೋರಿಸಿ ಬಸ್ ಹತ್ತಿ” ಎಂದು ನೇರವಾಗಿ ಹೇಳಿದ್ದಾರೆ. ಆದರೆ, ಪಟ್ಟುಬಿಡದ ಮಹಿಳೆ ಜಗಳ ಮಾಡುತ್ತಲೇ ಈ ವಿಚಾರವನ್ನು ನಿಲ್ದಾಣದ ಸಂಚಾರ ನಿಯಂತ್ರಣ ಕೊಠಡಿವರೆಗೂ ಎಳೆದುಕೊಂಡು ಹೋಗಿದ್ದಾರೆ.
ಅಲ್ಲಿಯೂ ಸಹ ತನ್ನ ವಾದವನ್ನು ಮುಂದುವರಿಸಿದ್ದು, ಮೊಬೈಲ್ ತೋರಿಸಿ ಇದರಲ್ಲಿರುವ ನಂಬರ್ ಚೆಕ್ ಮಾಡಿಕೊಳ್ಳಿ ಎಂದು ವಾದವನ್ನು ಮುಂದಿಟ್ಟಿದ್ದಾರೆ. ನಿಲ್ದಾಣದ ಅಧಿಕಾರಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಜತೆ ವಾದ ಮಾಡಿದ್ದಾರೆ. ಕೊನೆಗೆ ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: passenger train: ಹಳಿ ಮೇಲೆ ಬಿದ್ದ ಬಂಡೆ ಕಲ್ಲು; 2 ಗಂಟೆ ನಿಂತಲ್ಲೇ ನಿಂತ ಬೀದರ್- ಕಲಬುರಗಿ ಪ್ಯಾಸೆಂಜರ್ ರೈಲು
ಸದ್ಯ ಪ್ರಯಾಣಕ್ಕೆ ಏನು ದಾಖಲೆ ಬೇಕು?
ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್, ವೋಟರ್ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್ ಕಾರ್ಡ್ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ.
ಯಾದಗಿರಿಯಲ್ಲೂ ಇದೇ ಸಮಸ್ಯೆ!
ಯಾದಗಿರಿ: ಉಚಿತ ಬಸ್ ಪ್ರಯಾಣವು ಸಾರಿಗೆ ಸಂಸ್ಥೆ ನೌಕರರಿಗೆ ಪ್ರಯಾಸವನ್ನು ತಂದೊಡ್ಡಿದೆ. ಶಕ್ತಿ ಯೋಜನೆಯಿಂದ ಕಂಡಕ್ಟರ್, ಚಾಲಕರಿಗೆ ಫಜೀತಿ ಶುರುವಾಗಿದೆ. ಫ್ರೀ ಬಸ್ ಟಿಕೆಟ್ ಪಡೆಯಲು ಐಡಿ ಕಾರ್ಡ್ ಕಡ್ಡಾಯವನ್ನಾಗಿ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ವಿತರಣೆ ಮಾಡಿರುವ ಭಾವಚಿತ್ರವಿರುವ ಐಡಿ ಕಾರ್ಡ್ ತೋರಿಸಬೇಕು. ಆದರೆ, ಮುದ್ರಿತ ಒರಿಜಿನಲ್ ದಾಖಲೆಯನ್ನು ಮಹಿಳೆಯರು ತರದೆ, ನಕಲು ಪ್ರತಿ ಇಲ್ಲವೇ ಮೊಬೈಲ್‌ನಲ್ಲಿ ತರುತ್ತಿದ್ದಾರೆ. ಆದರೆ, ಇದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿ ಟಿಕೆಟ್ ನೀಡುವಂತಿಲ್ಲ. ಹೀಗಾಗಿ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ವರ್ಗದವರ ಜತೆ ಮಹಿಳೆಯೊಬ್ಬರು ಕಿರಿಕ್ ಮಾಡಿದ್ದಾರೆ.
ನೀವು ರೂಲ್ಸ್ ಮಾಡುತ್ತಿದ್ದಿರಾ? ಎಲ್ಲಿದೆ ರೂಲ್ಸ್ ತೋರಿಸಿ, ನೀವು ಫ್ರೂಫ್ ಅಂತ ಹೇಳಿದ್ರಿ ಒರಿಜಿನಲ್, ಝೆರಾಕ್ಸ್ ಅಂತ ಹೇಳಿಲ್ಲ. ಆನ್‌ಲೈನ್ ಅನ್ನು ಯಾಕೆ ಇಟ್ಟಿದ್ದೀರಿ? ಆನ್‌ಲೈನ್ ಬಂದ್ ಮಾಡಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಕೊನೆಗೆ ಈ ಮಹಿಳೆಯ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದ ಸಿಬ್ಬಂದಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು.
ಇದನ್ನೂ ಓದಿ: Free Bus Service: ದುಡ್ಡೂ ತಂದಿಲ್ಲ, ದಾಖಲೆಯೂ ಜತೆಗಿಲ್ಲ; ಬಸ್ಸಿನಲ್ಲೇ ಗೊಳೋ ಎಂದು ಅತ್ತ ಮಹಿಳೆ!
ಈಗ ಸ್ವತಃ ಸಾರಿಗೆ ಸಚಿವರೇ ಒರಿಜಿನಲ್ ದಾಖಲು ಅವಶ್ಯಕತೆ ಇಲ್ಲ ಎಂದು ಹೇಳಿರುವುದರಿಂದ ಮೊಬೈಲ್‌ನಲ್ಲಿ ಮಹಿಳೆಯರು ಇ-ಕಾಪಿಯನ್ನು ಇಟ್ಟುಕೊಂಡು ಸಂಚಾರ ಮಾಡಿದರೂ ಸಾಕು.