Site icon Vistara News

Free Bus Service: ಗದಗದಲ್ಲಿ ‘ಒರಿಜಿನಲ್‌’ ಕಿರಿಕ್‌; ಫ್ರೀ ಬಸ್‌ಗೆ ಮೊಬೈಲ್‌ ಡಾಕ್ಯುಮೆಂಟ್‌ ಎಲ್ಲ ಆಗೋಲ್ಲ!

Free bus quarrel in gadag

ಗದಗ: ಭಾರತ ಇಂದು ಡಿಜಿಟಲ್‌ ಯುಗದಲ್ಲಿ (Digital India) ಸಾಗುತ್ತಿದೆ. ಎಲ್ಲವೂ ಡಿಜಿಟಲ್‌ ಮೂಲಕವೇ ಇಂದು ನಡೆಯುತ್ತಿದೆ. ಒಂದು ರೂಪಾಯಿಯ ಪೇಮೆಂಟ್‌ನಿಂದ ಹಿಡಿದು, ಮನೆಗೆ ತರುವ ತರಕಾರಿ, ದಿನಸಿ ಸಾಮಗ್ರಿಗಳು ಸಹಿತ ಎಲ್ಲವೂ ಆನ್‌ಲೈನ್‌ ಮಯವಾಗಿದೆ. ಆದರೆ, ಸದ್ಯ ಮಾತ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ಬಸ್‌ (Free Bus Service) ಪ್ರಯಾಣ “ಶಕ್ತಿ”ಗೆ ನೀವು ಡಿಜಿಟಲ್‌ ಡಾಕ್ಯುಮೆಂಟ್‌ ತೋರಿಸಿದರೆ ಪ್ರಯೋಜನ ಇಲ್ಲ. ಸರ್ಕಾರ ಹೇಳಿದ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯ ಮುದ್ರಿತ ರೂಪವನ್ನು ನೀವು ಇಟ್ಟುಕೊಳ್ಳಲೇಬೇಕು. ಇದೇ ಈಗ ರಾಜ್ಯಾದ್ಯಂತ ಸಮಸ್ಯೆಗೆ ಕಾರಣವಾಗಿದೆ. ಅಲ್ಲಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಜತೆ ವಾಗ್ವಾದಕ್ಕೂ ಕಾರಣವಾಗಿದೆ. ಗದಗದಲ್ಲಿಯೂ ಇಂಥದ್ದೊಂದು ಪ್ರಸಂಗ ನಡೆದಿದೆ.

ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಹಿಳೆಯರು ಖುಷಿ ಖುಷಿಯಾಗಿಯೇ ಬಸ್‌ ಹತ್ತುತ್ತಿದ್ದಾರೆ. ಆದರೆ, ಈಗ ಗದಗಿನಲ್ಲಿ ಒರಿಜಿನಲ್ ಆಧಾರ್‌ ಕಾರ್ಡ್‌ ವಿಷಯಕ್ಕೆ ಕಿರಿಕ್‌ ನಡೆದಿದೆ. ಗದಗಿನ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿ ಜತೆ ವಾಗ್ವಾದ ನಡೆಸುತ್ತಿರುವ ಮಹಿಳೆ

ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಕವಿಯಲಿದೆ ಮೋಡ; ಕರಾವಳಿಯಲ್ಲಿ ಮಳೆಯ ಅಬ್ಬರ ನೋಡ

ಕೊಪ್ಪಳದಿಂದ ಹುಬ್ಬಳ್ಳಿಗೆ ಮಹಿಳೆಯೊಬ್ಬರು ಪ್ರಯಾಣ ಬೆಳೆಸಿದ್ದರು. ಈ‌ ಮಧ್ಯೆ ಗದಗಿನಲ್ಲಿ ಇನ್ನೊಂದು ಬಸ್‌ ಹತ್ತಿರುವ ಮಹಿಳೆಯು ಅಲ್ಲಿ ಕಂಡಕ್ಟರ್ ಜತೆಗೆ ವಾಗ್ವಾದ ನಡೆಸಿದ್ದಾರೆ. ಇಷ್ಟಕ್ಕೂ ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗಿದ್ದು, ದಾಖಲೆಯ ವಿಚಾರ. ಆಕೆ ತನ್ನ ಗುರುತಿನ ಮುದ್ರಿತ ದಾಖಲೆಯನ್ನು ಇಟ್ಟುಕೊಂಡಿಲ್ಲ. ಮೊಬೈಲ್‌ನಲ್ಲಿನ ಆಧಾರ್‌ ಕಾರ್ಡ್‌ ತೋರಿಸಿದ್ದಾರೆ.

ಆದರೆ, ಈ ಮೊದಲೇ ಸರ್ಕಾರದಿಂದ ಸೂಚನೆ ಇರುವ ಹಿನ್ನೆಲೆಯಲ್ಲಿ ನಿರ್ವಾಹಕ ಮೊಬೈಲ್‌ ಮೂಲಕ ಫೋಟೊ ದಾಖಲೆ ಇಟ್ಟುಕೊಂಡು ಉಚಿತ ಟಿಕೆಟ್‌ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಣೆ ಮಾಡಿದ್ದಾರೆ. ಡಿಜಿಲಾಕರ್‌ನಲ್ಲಿದ್ದರೆ ಸರಿ ಎಂದು ಹೇಳಿದ್ದಾರೆ. ಆದರೆ, ಮಹಿಳೆಗೆ ಡಿಜಿ ಲಾಕರ್‌ ಬಗ್ಗೆ ಮಾಹಿತಿ ಇಲ್ಲ. ಅವರ ಬಳಿ ಮೊಬೈಲ್‌ನಲ್ಲಿ ದಾಖಲೆಯ ಫೋಟೊ ಮಾತ್ರ ಇತ್ತು.

ನಿರ್ವಾಹಕ ಉಚಿತ ಪ್ರಯಾಣಕ್ಕೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ, ನಿರ್ವಾಹಕನ ಮುಖಕ್ಕೆ ಮೊಬೈಲ್‌ ಹಿಡಿದು, ತಾನು ತೋರಿಸುತ್ತಿರುವುದೂ ದಾಖಲೆಯೇ ಆಗಿದೆ. ಇದು ನನ್ನ ಆಧಾರ್‌ ಕಾರ್ಡ್‌ನ ಸಾಫ್ಟ್‌ ಕಾಪಿಯಾಗಿದೆ. ನೋಡಿ, ಇದು ದಾಖಲೆ ಹೌದೋ‌ ಅಲ್ಲವೋ ಎಂದು ತಗಾದೆ ತೆಗೆದಿದ್ದಾಳೆ.

ಇದಕ್ಕೆ ನಿರ್ವಾಹಕ ಮಾತ್ರ ಬಿಲ್‌ಕುಲ್‌ ಒಪ್ಪಲಿಲ್ಲ. “ಇಲ್ಲ ಇಲ್ಲ, ನಮಗೆ ಇರುವ ಸೂಚನೆಯಂತೆ ನಾನು ನಡೆದುಕೊಳ್ಳಲೇಬೇಕು. ನೀವು ಮುದ್ರಿತ ದಾಖಲೆಯನ್ನು ತೋರಿಸಿ ಬಸ್‌ ಹತ್ತಿ” ಎಂದು ನೇರವಾಗಿ ಹೇಳಿದ್ದಾರೆ. ಆದರೆ, ಪಟ್ಟುಬಿಡದ ಮಹಿಳೆ ಜಗಳ ಮಾಡುತ್ತಲೇ ಈ ವಿಚಾರವನ್ನು ನಿಲ್ದಾಣದ ಸಂಚಾರ ನಿಯಂತ್ರಣ‌ ಕೊಠಡಿವರೆಗೂ ಎಳೆದುಕೊಂಡು ಹೋಗಿದ್ದಾಳೆ.

ಅಲ್ಲಿಯೂ ಸಹ ತನ್ನ ವಾದವನ್ನು ಮುಂದುವರಿಸಿದ್ದು, ಮೊಬೈಲ್ ತೋರಿಸಿ ಇದರಲ್ಲಿರುವ ನಂಬರ್ ಚೆಕ್ ಮಾಡಿಕೊಳ್ಳಿ ಎಂದು ವಾದವನ್ನು ಮುಂದಿಟ್ಟಿದ್ದಾಳೆ. ನಿಲ್ದಾಣದ ಅಧಿಕಾರಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಜತೆ ವಾದ ಮಾಡಿದ್ದಾಳೆ. ಕೊನೆಗೆ ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಪ್ರಯಾಣಕ್ಕೆ ಏನು ದಾಖಲೆ ಬೇಕು?

ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್‌ ಕಾರ್ಡ್‌ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ. ಆದರೆ, ಡಿಜಿಲಾಕರ್‌ ಅಲ್ಲದೆ, ಕೇವಲ ಫೋಟೊಗಳನ್ನು ಇಟ್ಟುಕೊಂಡು ಹೋದರೆ ಅದಾಗದು. ಹೀಗಾಗಿ ನಿಮ್ಮ ಬಳಿ ಮುದ್ರಿತ ದಾಖಲೆಯನ್ನು ಇಟ್ಟುಕೊಳ್ಳಬೇಕು.

ಇದನ್ನೂ ಓದಿ: Road Accident: ರಾಜ್ಯದ ಮೂರು ಕಡೆ ಪ್ರತ್ಯೇಕ ಅಪಘಾತ; ಮೂವರ ಸಾವು, 15ಕ್ಕೂ ಹೆಚ್ಚು ಮಂದಿ ಗಂಭೀರ

ಯಾದಗಿರಿಯಲ್ಲೂ ಇದೇ ಸಮಸ್ಯೆ!

ಯಾದಗಿರಿ: ಉಚಿತ ಬಸ್ ಪ್ರಯಾಣವು ಸಾರಿಗೆ ಸಂಸ್ಥೆ ನೌಕರರಿಗೆ ಪ್ರಯಾಸವನ್ನು ತಂದೊಡ್ಡಿದೆ. ಶಕ್ತಿ ಯೋಜನೆಯಿಂದ ಕಂಡಕ್ಟರ್, ಚಾಲಕರಿಗೆ ಫಜೀತಿ ಶುರುವಾಗಿದೆ. ಫ್ರೀ ಬಸ್ ಟಿಕೆಟ್ ಪಡೆಯಲು ಐಡಿ ಕಾರ್ಡ್ ಕಡ್ಡಾಯವನ್ನಾಗಿ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ವಿತರಣೆ ಮಾಡಿರುವ ಭಾವಚಿತ್ರವಿರುವ ಐಡಿ ಕಾರ್ಡ್ ತೋರಿಸಬೇಕು. ಆದರೆ, ಮುದ್ರಿತ ಒರಿಜಿನಲ್ ದಾಖಲೆಯನ್ನು ಮಹಿಳೆಯರು ತರದೆ, ನಕಲು ಪ್ರತಿ ಇಲ್ಲವೇ ಮೊಬೈಲ್‌ನಲ್ಲಿ ತರುತ್ತಿದ್ದಾರೆ. ಆದರೆ, ಇದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿ ಟಿಕೆಟ್‌ ನೀಡುವಂತಿಲ್ಲ. ಹೀಗಾಗಿ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ವರ್ಗದವರ ಜತೆ ಮಹಿಳೆಯೊಬ್ಬರು ಕಿರಿಕ್ ಮಾಡಿದ್ದಾರೆ.

ನೀವು ರೂಲ್ಸ್ ಮಾಡುತ್ತಿದ್ದಿರಾ? ಎಲ್ಲಿದೆ ರೂಲ್ಸ್‌ ತೋರಿಸಿ, ನೀವು ಫ್ರೂಫ್ ಅಂತ ಹೇಳಿದ್ರಿ ಒರಿಜಿನಲ್, ಝೆರಾಕ್ಸ್ ಅಂತ ಹೇಳಿಲ್ಲ. ಆನ್‌ಲೈನ್ ಅನ್ನು ಯಾಕೆ ಇಟ್ಟಿದ್ದೀರಿ? ಆನ್‌ಲೈನ್‌ ಬಂದ್ ಮಾಡಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಕೊನೆಗೆ ಈ ಮಹಿಳೆಯ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದ ಸಿಬ್ಬಂದಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು.

Exit mobile version