Site icon Vistara News

Free Bus Service : ಫ್ರೀ ಬಸ್ಸಲ್ಲಿ ಬಂದ ಮಹಿಳೆಯರಿಂದ ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಅರ್ಚನೆ!

D Veerendra heggade letter

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ (Free Bus Service) ಶಕ್ತಿ ಯೋಜನೆ (Shakti scheme) ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದೆ. ಜೂನ್‌ 11ರಂದು ಚಾಲನೆ ಪಡೆದ ಈ ಯೋಜನೆಯಡಿ ಒಂದು ತಿಂಗಳ ಅವಧಿಯಲ್ಲಿ 16.7 ಲಕ್ಷ ಮಹಿಳೆಯರು ಓಡಾಡಿದ್ದಾರೆ. ಎಲ್ಲ ಮಹಿಳೆಯರು ಈ ಯೋಜನೆಯನ್ನು ಕೊಂಡಾಡುತ್ತಿರುವ ನಡುವೆಯೇ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಸರ್ಟಿಫಿಕೇಟ್‌ ಒಂದು ದೊರೆತಿದೆ. ಅದು ಬಂದಿದ್ದು ಧರ್ಮಸ್ಥಳದಿಂದ (Sri Kshetra Dharmastala).

Heavy rush at KSRTC Bus stand

ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆ (Dr. D Veerendra Heggade) ಅವರು ಶಕ್ತಿ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಿದ್ದರಾಮಯ್ಯ ಅವರಿಗೆ ಒಂದು ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಅವರು ಜುಲೈ 7ರಂದು ಮಂಡಿಸಿದ ಬಜೆಟ್‌ನ (Karnataka Budget 2023) ಅಂಶಗಳನ್ನು ಶ್ಲಾಘಿಸಿ ಬರೆದ ಈ ಪತ್ರದಲ್ಲಿ ಶಕ್ತಿ ಯೋಜನೆ ಮಹಿಳೆಯರಿಗೆ ಮಾಡಿಕೊಟ್ಟಿರುವ ಅನುಕೂಲಗಳನ್ನು ಉಲ್ಲೇಖಿಸಿದ್ದಾರೆ. ಜತೆಗೆ ಇನ್ನೊಂದು ವಿಶಿಷ್ಟ ಅಂಶವನ್ನು ಉಲ್ಲೇಖಿಸಿದ್ದಾರೆ. ಅದೇನೆಂದರೆ, ಶಕ್ತಿಯ ಯೋಜನೆಯ ಉಚಿತ ಬಸ್‌ ಪ್ರಯಾಣದ ಅವಕಾಶವನ್ನು ಪಡೆದು ಕ್ಷೇತ್ರಕ್ಕೆ ಬಂದ ಮಹಿಳೆಯರಲ್ಲಿ ಕೆಲವರು ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತಿದ್ದಾರೆ ಎಂದು ವೀರೇಂದ್ರ ಹೆಗ್ಗಡೆಯವರು ಉಲ್ಲೇಖಿಸಿದ್ದಾರೆ.

ಧರ್ಮಸ್ಥಳದಲ್ಲಿ ಮಹಿಳೆಯರ ಸಂದಣಿ

ಸರ್ಕಾರದ ಉಚಿತ ಬಸ್‌ ಪ್ರಯಾಣದ ಯೋಜನೆಯಿಂದಾಗಿ ಲಕ್ಷಾಂತರ ಹೆಣ್ಣು ಮಕ್ಕಳು ತಮ್ಮ ದೈನಂದಿನ ಓಡಾಟದ ಜತೆಗೆ ತೀರ್ಥ ಕ್ಷೇತ್ರ, ಪುಣ್ಯಕ್ಷೇತ್ರಗಳ ಸಂದರ್ಶನವನ್ನು ಮಾಡಿದ್ದಾರೆ. ಅದರಲ್ಲೂ ರಾಜ್ಯದ ಎಲ್ಲ ಕಡೆಯ ಹೆಣ್ಣು ಮಕ್ಕಳು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ, ನೀಡುತ್ತಿದ್ದಾರೆ. ಒಂದು ಹಂತದಲ್ಲಿ ಧರ್ಮಸ್ಥಳದಲ್ಲಿ ಮಹಿಳೆಯರ ದಟ್ಟಣೆಯನ್ನು ನಿಯಂತ್ರಿಸುವುದೇ ಕಷ್ಟವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿರೋಧ ಪಕ್ಷಗಳು ಇದು ಶಕ್ತಿ ಯೋಜನೆಯ ದುಷ್ಪರಿಣಾಮ ಎಂದು ವ್ಯಾಖ್ಯಾನಿಸಿದರೆ ಕಾಂಗ್ರೆಸ್‌ ನಾಯಕರು ಇದು ಶಕ್ತಿ ಯೋಜನೆಯ ಯಶಸ್ಸು ಎಂದು ವ್ಯಾಖ್ಯಾನಿಸಿದ್ದರು. ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ʻಹಿಂದುತ್ವಕ್ಕೆ ಕೊಡುವ ನಿಜವಾದ ಬೆಂಬಲ ಇದು. ಶಕ್ತಿ ಯೋಜನೆಯ ಮೂಲಕ ಮಹಿಳೆಯರು ದೇಗುಲ ದರ್ಶನ ಮಾಡುತ್ತಿರುವುದು ಧರ್ಮ ಉದ್ಧಾರದ ಭಾಗ. ಇದುವೇ ಹಿಂದುತ್ವ ರಕ್ಷಣೆʼ ಎಂದು ಬಿಜೆಪಿಯ ಕಾಲೆಳೆದಿದ್ದರು.

ಹೀಗೆ ಪರ ವಿರೋಧದ ನಡುವೆ ಚರ್ಚೆಯಲ್ಲಿದ್ದ ಶಕ್ತಿ ಯೋಜನೆಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೊಟ್ಟಿರುವ ಸರ್ಟಿಫಿಕೇಟ್‌ ಬಲವನ್ನು ತುಂಬಿದಂತಾಗಿದೆ. ಹಾಗಿದ್ದರೆ ಏನಿದೆ ವೀರೇಂದ್ರ ಹೆಗ್ಗಡೆಯವರು ಬರೆದಿರುವ ಪತ್ರದಲ್ಲಿ?

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬರೆದ ಪತ್ರ

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ.

ರಾಜ್ಯದಲ್ಲಿ 14ನೇ ಬಜೆಟ್‌ ಮಂಡಿಸಿದ ನಿಮಗೆ ಅಭಿನಂದನೆಗಳು.
ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮ ನೀಡಿದ್ದೀರಿ. ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಮಹಿಳೆಯರು ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ.

ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ವಿಚಾರ ತಿಳಿದು ಇಡೀ ಸಮಾಜಕ್ಕೆ ಸಂತೋಷವಾಗಿದೆ. ಎಲ್ಲರ ಪರವಾಗಿ ಅಭಿನಂದನೆಗಳು.

ಮಹಿಳೆಯರ ಉಚಿತ ಪ್ರಯಾಣದಿಂದ ಆಗಿರುವ ಲಾಭಗಳು, ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು ಮತ್ತು ಅವರ ಭಕ್ತಿ ಭಾವ, ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸುವವರ ಕೃತಜ್ಞತಾ ಭಾವವನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಉಲ್ಲೇಖಿಸಿದ್ದಾರೆ. ಇದರ ಜತೆಗೆ ಬಜೆಟ್‌ನಲ್ಲಿ ಜೈನ ಸಮುದಾಯಕ್ಕೆ ನೀಡಿದ ಪ್ರೋತ್ಸಾಹವನ್ನು ಉಲ್ಲೇಖಿಸಿದ್ದಾರೆ.

ಸಿದ್ದರಾಮಯ್ಯ ಅವರು ಈ ಹಿಂದೆ ಧರ್ಮಸ್ಥಳಕ್ಕೆ ಹೋಗಿದ್ದಾಗ.

ಧರ್ಮಸ್ಥಳಕ್ಕೆ ಬರುವಂತೆ ಆಹ್ವಾನ

ಈ ನಡುವೆ ಅವಕಾಶ ಇದ್ದಾಗ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಹೋಗಬೇಕಾಗಿ ಅಪೇಕ್ಷೆ ಎಂದು ಕೂಡಾ ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.

ಶಕ್ತಿ ಯೋಜನೆಯಿಂದ ತುಂಬಿ ತುಳುಕಿದ್ದ ಧರ್ಮಸ್ಥಳ

Heavy rush at KSRTC Bus stand

ಜೂನ್‌ 11ರಂದು ಶಕ್ತಿ ಯೋಜನೆ ಆರಂಭವಾಗಿದ್ದು, ಆರಂಭಿಕ ದಿನಗಳಲ್ಲಿ ಮಹಿಳೆಯರು ಭಾರಿ ಉತ್ಸಾಹದಿಂದ ಓಡಾಡಿದ್ದರು. ಅದರಲ್ಲೂ ಜೂನ್‌ 17 ಮತ್ತು 18ರ ವಾರಾಂತ್ಯದ ದಿನಗಳಲ್ಲಿ ಬಸ್‌ಗಳಲ್ಲಿ ಜಾಗವೇ ಇರಲಿಲ್ಲ. ಬಸ್‌ಗಳ ಸಂಚಾರವೇ ಅಸ್ತವ್ಯಸ್ತವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಹೆಚ್ಚುವರಿ ಬಸ್‌ಗಳನ್ನೇ ಬಿಡಬೇಕಾಯಿತು. ಅದರಲ್ಲೂ ಧರ್ಮಸ್ಥಳಕ್ಕೆ ರಾಜ್ಯದ ನಾನಾ ಭಾಗಗಳಿಂದ ಎಷ್ಟು ಬಸ್‌ ಬಿಟ್ಟರೂ ಸಾಲದು ಎಂಬಷ್ಟು ಸಂಖ್ಯೆಯಲ್ಲಿ ಭಕ್ತರು ಧಾವಿಸಿದ್ದರು. ಧರ್ಮಸ್ಥಳಕ್ಕೆ ಹೋಗುವ ಬಸ್‌ಗಳು, ಧರ್ಮಸ್ಥಳ ಬಸ್‌ ನಿಲ್ದಾಣ ತುಂಬಿ ತುಳುಕಿತ್ತು.

ಆದರೆ, ಮುಂದಿನ ವಾರ ಈ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಈಗಲೂ ಮಹಿಳಾ ಪ್ರಯಾಣಿಕರ ದೇಗುಲ ದರ್ಶನ ಉತ್ಸಾಹ ಇದೆಯಾದರೂ ಹಿಂದಿನ ಪ್ರಮಾಣದ ಒತ್ತಡ ಇಲ್ಲ.

ಹಿಂದಿನ ಸುದ್ದಿ: Free Bus Service: ಪುಣ್ಯಕ್ಷೇತ್ರಗಳಿಗೆ ದಾಳಿಯಿಟ್ಟ ಮಹಿಳೆಯರು; ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲಿ ಕಾಲಿಡಲು ಜಾಗವಿಲ್ಲ!

ಅನ್ನಭಾಗ್ಯವನ್ನು ಹೆಗ್ಗಡೆಯವರು ಹೊಗಳಿದ್ದಾರೆಂದ ಸಿದ್ದರಾಮಯ್ಯ

ಇತ್ತ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಶಕ್ತಿ ಯೋಜನೆಯ ಬಗ್ಗೆ ಮೆಚ್ಚುಗೆಯ ಪತ್ರ ಬರೆದ ನಡುವೆಯೇ, ಹೆಗ್ಗಡೆಯವರು ಅನ್ನ ಭಾಗ್ಯ ಯೋಜನೆಯ ಬಗ್ಗೆ ಪ್ರೋತ್ಸಾಹಕ ಮಾತುಗಳನ್ನು ಆಡಿದ್ದಾರೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ವಿಧಾನಸಭೆಯಲ್ಲಿ ಗುರುವಾರ ಹೇಳಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಅನ್ನ ಭಾಗ್ಯ ಮಾಡಿರುವ ಕ್ರಾಂತಿಯ ಬಗ್ಗೆ ಉಲ್ಲೇಖಿಸುತ್ತಾ, ಬಡವರಿಗೆ ಅನ್ನ ನೀಡುವ ಸರ್ಕಾರದ ಕಾರ್ಯಕ್ರಮವನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೂ ಹೊಗಳಿದ್ದರು ಎಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ: Anna Bhagya Scheme : ಕೇಂದ್ರದ ಅಕ್ಕಿಗೂ ಬಿತ್ತಾ ಕತ್ತರಿ?; ಈ ಬಾರಿ 3 KG ಅಕ್ಕಿ ಏಕೆ? ಸ್ಪಷ್ಟನೆ ನೀಡಿದ ಸಿಎಂ

Exit mobile version