Site icon Vistara News

Free Bus Service: 2ನೇ ವೀಕೆಂಡ್‌ಗೆ ತಗ್ಗಿದ ಮಹಿಳೆಯರ ರಷ್‌; ಬಸ್‌ಗಳಲ್ಲಿ ನಿರಾಳ ಸಂಚಾರ

Dharmasthala Bus stand

#image_title

ಬೆಂಗಳೂರು/ಮಂಗಳೂರು/ಧರ್ಮಸ್ಥಳ: ರಾಜ್ಯದಲ್ಲಿ ಶಕ್ತಿ ಯೋಜನೆಯಡಿ (Shakti scheme) ಕಳೆದ ವಾರಾಂತ್ಯದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಉಚಿತ ಪ್ರಯಾಣದ (Free Bus Service) ಮೊದಲ ವಾರಾಂತ್ಯದಲ್ಲಿ ದೊಡ್ಡ ಸಂಖ್ಯೆಯ ಮಹಿಳೆಯರು ದೇಗುಲ ದರ್ಶನ, ಪ್ರವಾಸದ ಹೆಸರಿನಲ್ಲಿ ಸಂಭ್ರಮಿಸಿದ್ದರ ಪರಿಣಾಮವಾಗಿ ಬಸ್‌ಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ (Religious temples) ನೂಕುನುಗ್ಗಲು ಉಂಟಾಗಿ ಅಸ್ತವ್ಯಸ್ತವಾಗಿತ್ತು. ಆದರೆ, ಎರಡನೇ ವಾರಾಂತ್ಯದ ಹೊತ್ತಿಗೆ ಈ ರಣೋತ್ಸಾಹ ಸ್ವಲ್ಪ ಮಟ್ಟಿಗೆ ತಗ್ಗಿದೆ. ಈ ಶನಿವಾರ (ಜೂನ್‌ 24) ರಾಜ್ಯದ ಯಾವುದೇ ಭಾಗದಲ್ಲಾಗಲೀ, ಕಳೆದ ಬಾರಿ ವಿಪರೀತ ಜನಸಾಗರವನ್ನು ಕಂಡ ಧರ್ಮಸ್ಥಳದಲ್ಲಾಗಲೀ ವಿಪರೀತ ರಷ್‌ ಕಂಡುಬಂದಿಲ್ಲ.

ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಉಚಿತ ಗ್ಯಾರಂಟಿ (Congress guarantee) ಯೋಜನೆಗಳ ಪೈಕಿ ಒಂದಾದ ಶಕ್ತಿ ಯೋಜನೆಯನ್ನು ಜೂನ್‌ 11ರಂದು ಉದ್ಘಾಟಿಸಿತ್ತು. ಅಂದು ಮಧ್ಯಾಹ್ನ ಒಂದು ಗಂಟೆಯಿಂದಲೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಆವತ್ತು ಆರಂಭವಾದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗಿ ಶನಿವಾರದ ಹೊತ್ತಿಗೆ ಹಾಹಾಕಾರವನ್ನೇ ಸೃಷ್ಟಿಸಿತ್ತು.

ಉಚಿತ ಪ್ರಯಾಣದ ಮೊದಲ ವಾರಾಂತ್ಯವಾಗಿದ್ದ ಜೂನ್ 17 ಮತ್ತು 18ರಂದು ಮಹಿಳೆಯರು ಧರ್ಮಸ್ಥಳ, ಸುಬ್ರಹ್ಮಣ್ಯ, ಮುರ್ಡೇಶ್ವರ ಮತ್ತಿತರ ಪುಣ್ಯ ಕ್ಷೇತ್ರ ಪ್ರವಾಸಿ ತಾಣಗಳಿಗೆ ಗುಂಪು ಗುಂಪಾಗಿ ಆಗಮಿಸಿದ್ದರು. ತಮ್ಮ ಸ್ನೇಹಿತೆಯರ ತಂಡವನ್ನು ಕಟ್ಟಿಕೊಂಡು ಬಸ್‌ಗಳಲ್ಲಿ ಮೊದಲೇ ಬುಕ್‌ ಮಾಡಿಕೊಂಡು ಆಗಮಿಸಿದ್ದರು. ಇದರಿಂದಾಗಿ ಬಸ್‌ಗಳೆಲ್ಲ ತುಂಬಿ ತುಳುಕಿದ್ದಲ್ಲದೆ, ಪುಣ್ಯ ಕ್ಷೇತ್ರಗಳಲ್ಲೂ ಒತ್ತಡ ಸೃಷ್ಟಿಯಾಗಿತ್ತು.

ಕಳೆದ ಭಾನುವಾರ ಮಣ್ಣಿನ ಅಮಾವಾಸ್ಯೆ ಇದ್ದುದರಿಂದ ಉತ್ತರ ಕರ್ನಾಟಕದಲ್ಲಂತೂ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಓಡಾಟ ನಡೆಸಿದ್ದರು. ಹೀಗಾಗಿ ಎಲ್ಲ ಕಡೆ ಅನಾಹುತಕಾರಿ ಅಲ್ಲೋಲಕಲ್ಲೋಲಗಳು ನಡೆದಿದ್ದವು. ಬಸ್‌ನ ಬಾಗಿಲು ಒಡೆಯುವುದು, ಹಲ್ಲೆ, ಕಿಟಕಿಗಳ ಮೂಲಕ ಹತ್ತುವುದು ಸೇರಿದಂತೆ ನಾನಾ ದೃಶ್ಯಗಳು ಕಾಣಿಸಿಕೊಂಡಿದ್ದವು. ಕೆಲವು ಕಡೆ ಪ್ರವಾಸಿ ತಾಣಗಳಿಗೆ ಹೋದರೆ ಸಂಜೆಯ ಹೊತ್ತು ಮರಳಿ ಬರಲು ಬಸ್ಸಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ, ಈ ಶನಿವಾರ ದೊಡ್ಡ ಮಟ್ಟದ ಒತ್ತಡ ಕಾಣಿಸುತ್ತಿಲ್ಲ.

ಬಿಕೋ ಎನ್ನುತ್ತಿರುವ ಕಲಬುರಗಿ ಬಸ್‌ ನಿಲ್ದಾಣ

ಕಳೆದ ಬಾರಿ ಭಾರಿ ಸಂಖ್ಯೆಯ ಮಹಿಳೆಯ ಓಡಾಟ, ಒತ್ತಡಕ್ಕೆ ಸಾಕ್ಷಿಯಾದ ಕಲಬುರಗಿ ಬಸ್‌ ನಿಲ್ದಾಣದಲ್ಲಿ ಈ ಶನಿವಾರ ಯಾವುದೇ ಒತ್ತಡ ಇರಲಿಲ್ಲ. ಪ್ರಯಾಣಿಕರಿಲ್ಲದೆ ವಸ್ತುಶಃ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿದೆ.

ಬಿಕೋ ಎನ್ನುತ್ತಿರುವ ಕಲಬುರಗಿ ಬಸ್‌ ನಿಲ್ದಾಣ

ಧರ್ಮಸ್ಥಳದಲ್ಲೂ ಭಾರಿ ಒತ್ತಡವಿಲ್ಲ

ಕಳೆದ ಶನಿವಾರ ಬೆಳಗ್ಗಿನ ಹೊತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳೆಯರದೇ ಸಾಮ್ರಾಜ್ಯವಾಗಿತ್ತು. ಶುಕ್ರವಾರವೇ ತಂಡಗಳಾಗಿ ರಾಜ್ಯದ ನಾನಾ ಭಾಗಗಳಿಂದ ಹೊರಟಿದ್ದವರು ಬೆಳಗ್ಗೆ ಧರ್ಮಸ್ಥಳಕ್ಕೆ ಲಗ್ಗೆ ಇಟ್ಟಿದ್ದರು. ಆದರೆ, ಈ ಬಾರಿ ಅಲ್ಲೂ ಆ ಒತ್ತಡವಿಲ್ಲ.

ಧರ್ಮಸ್ಥಳ ಬಸ್‌ ನಿಲ್ದಾಣದ ಮುಂಜಾನೆಯ ದೃಶ್ಯ

ಸಹಜವಾಗಿ ಶನಿವಾರ ಎಷ್ಟು ಜನದಟ್ಟಣೆ ಇರುತ್ತದೋ ಆ ಮಟ್ಟದಲ್ಲಷ್ಟೇ ಇರುವುದು ಕಂಡುಬಂದಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬರುವ ಬಸ್‌ಗಳು ತುಂಬಿವೆಯಾದರೂ ಕಳೆದ ಬಾರಿಯಷ್ಟು ರಷ್‌ ಇಲ್ಲ.

ಬೆಂಗಳೂರಿನಲ್ಲಂತೂ ಯಾವುದೇ ಒತ್ತಡವಿಲ್ಲ

ಕಳೆದ ಶನಿವಾರ ಬೆಂಗಳೂರಿನ ಮೆಜೆಸ್ಟಿಕ್‌ ವಿಮಾನ ನಿಲ್ದಾಣ ಮಹಿಳೆಯರಿಂದಲೇ ತುಂಬಿ ಹೋಗಿತ್ತು. ಆದರೆ, ಶನಿವಾರ ಬಸ್‌ಗಳೇ ಪ್ರಯಾಣಿಕರಿಗಾಗಿ ಕಾಯುವ ಸ್ಥಿತಿ ನಿರ್ಮಾಣಗೊಂಡಿತ್ತು.

ಕಲಬುರಗಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರಿದ್ದರೂ ರಷ್‌ ಇಲ್ಲ

ಎರಡನೇ ವೀಕೆಂಡ್‌ಗೆ ಮಾಮೂಲಿ ದಿನಗಳಂತೆ ಬಸ್ ಗಳು ಖಾಲಿ‌ಖಾಲಿಯಾಗಿ ಓಡಾಡುತ್ತಿವೆ. ಶನಿವಾರ ಮುಂಜಾನೆ ಧರ್ಮಸ್ಥಳ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಬಸ್ ಗಳಿಗೆ ಏರಲು ಮಹಿಳೆಯರೇ ಇಲ್ಲ ಎಂಬ ಸ್ಥಿತಿ ಇದೆ.

ನಿರ್ವಾಹಕರು ಜಿಲ್ಲೆಗಳ ಹೆಸರು ಜೋರಾಗಿ ಕೂಗುತ್ತಿದ್ದರೂ ಬಸ್ ಗಳಿಗೆ ಜನ ಬರುತ್ತಿಲ್ಲ.

ಒತ್ತಡ ಒಂದೇ ವಾರಕ್ಕೆ ಕಡಿಮೆಯಾಗಲು ಕಾರಣವೇನು?

1. ಕಳೆದ ವಾರ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದರಿಂದ ಒತ್ತಡಕ್ಕೆ ಸಿಲುಕಿ ತೊಂದರೆಗೆ ಒಳಗಾಗಿದ್ದರು. ಹೀಗಾಗಿ ಈ ಬಾರಿಯೂ ಅದೇ ರಿಪೀಟ್‌ ಆಗಬಹುದು ಎಂಬ ಆತಂಕ.
2. ಎಲ್ಲರೂ ಗುಂಪು ಗುಂಪಾಗಿ ಹೋಗಬೇಡಿ, ಈ ಯೋಜನೆ ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಇರುತ್ತದೆ. ಯಾರೂ ಆತುರ ಮಾಡಬೇಡಿ ಎಂಬ ಸರ್ಕಾರದ ಮನವಿ.
3. ಸರ್ಕಾರಿ ಬಸ್‌ಗಳಲ್ಲಿ ಒತ್ತಡದಿಂದಾಗಿ ಉಂಟಾದ ಗಲಾಟೆಗಳು.
4. ಮಳೆ ಬಂದಿರುವುದರಿಂದ ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮುಂದಾಗಿರುವುದು.

ಕಳೆದ ಶನಿವಾರ ಭಾನುವಾರ ದಟ್ಟಣೆ ಹೇಗಿತ್ತು?

ಜೂನ್‌ 17, ಶನಿವಾರ
ಪ್ರಯಾಣಿಕರ ಸಂಖ್ಯೆ: 54,30,150, ಪ್ರಯಾಣ ವೆಚ್ಚ: 12,88,81,618 ರೂ
ಜೂನ್‌ 18, ಭಾನುವಾರ
ಪ್ರಯಾಣಿಕರ ಸಂಖ್ಯೆ; 51,48,938, ಪ್ರಯಾಣ ವೆಚ್ಚ: 13,99,98,299 ರೂ.

ಇದನ್ನೂ ಓದಿ: Free Bus service: ಶಕ್ತಿ ಯೋಜನೆ ಸೈಡ್‌ ಎಫೆಕ್ಟ್‌; ವೃದ್ಧೆಗೆ ಮಹಿಳಾ ಕಂಡಕ್ಟರ್‌ ಕಪಾಳಮೋಕ್ಷ!

Exit mobile version