ಬೆಂಗಳೂರು: ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಯಂತೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಘೋಷಣೆ ಮಾಡಿದ ಬೆನ್ನಲ್ಲೇ ಈಗ ಅನುಮೋದನೆ ಆದೇಶವೂ ಹೊರಬಿದ್ದಿದೆ. ಜೂನ್ 11 ರಿಂದ ಜಾರಿಯಾಗಲಿರುವ ಉಚಿತ ಬಸ್ (Free Bus) ಪ್ರಯಾಣದ ಶಕ್ತಿ ಯೋಜನೆಯನ್ನು ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಜಾರಿ ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಆದರೆ, ಈ ಉಚಿತ ಪ್ರಯಾಣಕ್ಕೆ ಏಳು ಕಂಡೀಷನ್ ಹಾಕಿ ಯೋಜನೆಯ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಷರತ್ತುಗಳೇನು?
- ರಾಜ್ಯದೊಳಗೆ ಸಂಚರಿಸುವ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ
- ಐಷಾರಾಮಿ ಬಸ್ಸುಗಳಾದ ರಾಜಹಂಸ, ಎಸಿ, ಸ್ಲೀಪರ್, ವಾಯುವಜ್ರದಂತಹ ಬಸ್‌ಗಳಲ್ಲಿ ಯೋಜನೆ ಅನ್ವಯಿಸುವುದಿಲ್ಲ
- ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಪುರುಷರಿಗೆ ಶೇ. 50 ಮೀಸಲು ಆಸನ ಇಲ್ಲ. ಉಳಿದ ಎಲ್ಲ ನಿಗಮಗಳ ಬಸ್‌ಗಳಲ್ಲಿ ಪುರುಷರಿಗೆ ಶೇ. 50ರಷ್ಟು ಆಸನಗಳು ಮೀಸಲು
- ಈ ಉಚಿತ ಪ್ರಯಾಣದ ವೆಚ್ಚವನ್ನು ಶೂನ್ಯ ಟಿಕೆಟ್ ಹಾಗೂ ಸ್ಮಾರ್ಟ್ ಕಾರ್ಡ್ ದತ್ತಾಂಶ ಆಧರಿಸಿ ಭರಿಸಲಾಗುವುದು.
- ಮೂರು ತಿಂಗಳಲ್ಲಿ ಸೇವಾ ಸಿಂಧು ಕೇಂದ್ರಗಳಲ್ಲಿ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುವುದು
- ಸ್ಮಾರ್ಟ್ ಕಾರ್ಡ್ ಸಿಗುವ ತನಕ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ವಿತರಿಸಿರುವ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ
ಸಿಕ್ಕಿತು ಆಡಳಿತಾತ್ಮಕ ಅನುಮೋದನೆ
ರಾಜ್ಯದ ಎಲ್ಲ ಮಹಿಳಾ ಪ್ರಯಾಣಿಕರಿಗೆ ರಾಜ್ಯ ರಸ್ತೆ ಸಾರಿಗೆಯಲ್ಲಿ ಉಚಿತ ಪ್ರಯಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ರಾಜ್ಯ ಸರ್ಕಾರ ನೀಡಿದೆ.
ಇದನ್ನೂ ಓದಿ: Monsoon Driving: ಮಳೆಗಾಲದಲ್ಲಿ ಖುಷಿಯಾಗಿ ಕಾರು ಪ್ರಯಾಣಕ್ಕೆ ಹೊರಡುವಾಗ ಈ ಟಿಪ್ಸ್ ಗಮನದಲ್ಲಿರಲಿ
“‘ಶಕ್ತಿ ಯೋಜನೆ”ಯಡಿ ರಾಜ್ಯದ ಎಲ್ಲ ಮಹಿಳೆಯರು ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ. ನಿಗಮ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ. ಸಂಸ್ಥೆ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ. ಸಂಸ್ಥೆ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕ.ಕ.ರ.ಸಾ. ನಿಗಮ) ಸಾಮಾನ್ಯ ಬಸ್‌ಗಳಲ್ಲಿ ಇನ್ನು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.