Site icon Vistara News

Free Electricity: ಅಡೆತಡೆಗಳ ನಡುವೆಯೂ ಭರ್ಜರಿ ನೋಂದಣಿ; ನಾಲ್ಕೇ ದಿನದಲ್ಲಿ 12.51 ಲಕ್ಷ ಅರ್ಜಿ

gruhajyothi scheme

#image_title

ಬೆಂಗಳೂರು: ಎಲ್ಲ ಕುಟುಂಬಗಳಿಗೆ ಉಚಿತ ವಿದ್ಯುತ್‌ (Free Electricity) ನೀಡುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ʼಗೃಹ ಜ್ಯೋತಿ ಸ್ಕೀಮ್‌ʼ (Gruhajyothi scheme)ನ ನೋಂದಣಿ ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದೆ.

ಅರ್ಜಿ ಸ್ವೀಕಾರ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ (Sewa sindhu portal)ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯು ಜೂನ್‌ 18ರಂದು ಆರಂಭಗೊಂಡಿತ್ತು. ಮೊದಲ  ದಿನ – 96,305, ಎರಡನೆಯ ದಿನ- 3,34,845 ಮೂರನೇ ದಿನ ರಾತ್ರಿ ವೇಳೆಗೆ – 4,64,225 ಹಾಗೂ ನಾಲ್ಕನೇ ದಿನ (ಬುಧವಾರ) 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮಧ್ಯ ರಾತ್ರಿ 12 ಗಂಟೆಗೆ ಈ ಸಂಖ್ಯೆ 4.5 ಲಕ್ಷ ದಾಟುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ನಾಲ್ಕು ದಿನಗಳಿಂದಲೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಅಡೆತಡೆ ಉಂಟಾಗುತ್ತಿದೆ. ಆದರೂ ರಾಜ್ಯಾದ್ಯಂತ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈಗ 12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಒಟ್ಟು 2.14 ಅರ್ಹ ಫಲಾನುಭವಿಗಳಿದ್ದಾರೆ ಎಂದು ಹೇಳಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆ ದಿನ ಎಂಬುದು ಇಲ್ಲದೆ ಇರುವುದರಿಂದ ಯಾರೂ ಅವಸರ ಮಾಡಬೇಕಾಗಿಲ್ಲ ಎಂದು ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಪ್ರತ್ಯೇಕ ಲಾಗ್‌ ಇನ್‌ ಐಡಿ, ಲಿಂಕ್‌

ನಾಳೆಯಿಂದ (ಜೂನ್‌ 22-ಗುರುವಾರ) ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ಅನ್ನು ನೀಡಲಾಗಿದೆ. ಹಾಗಾಗಿ ನಾಳೆಯಿಂದ ರಾಜ್ಯದ 2000 ವಿದ್ಯುಚ್ಛಕ್ತಿ ಕಚೇರಿಗಳು, ಗ್ರಾಮ ಪಂಚಾಯತಿಗಳು ಹಾಗು ನಾಡ ಕಛೇರಿಗಳಲ್ಲಿ ಪ್ರತ್ಯೇಕ ಲಿಂಕ್‌ ಮೂಲಕ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.
ಹೊಸ ಲಿಂಕ್‌ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಿ, ಅದನ್ನೇ ಸಾರ್ವಜನಿಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ಕರ್ನಾಟಕ ಒನ್‌, ಬೆಂಗಳೂರು ಒನ್‌ ಹಾಗು ಗ್ರಾಮ ಒನ್‌ ಜೊತೆಗೆ, ಸಾರ್ವಜನಿಕರು ತಮ್ಮ ಕಂಪ್ಯೂಟರ್‌, ಲ್ಯಾಪ್‌’ಟಾಪ್‌, ಮೊಬೈಲ್‌ ಫೋನ್‌ ಗಳಲ್ಲಿ ಹಾಗೂ ಕೆಲವು ವಿದ್ಯುತ್ ಕಚೇರಿಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.  
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿಪಡಿಸದ ಕಾರಣ ಗ್ರಾಹಕರು ಗಡಿಬಿಡಿಯಾಗದೇ, ಆತಂಕ ಪಡದೇ ಸೇವಾ ಸಿಂಧು ಪೋರ್ಟಲ್‌ https://sevasindhugs.karnataka.gov.in ಮೂಲಕ ನೋಂದಾಯಿಸಬಹುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

Exit mobile version