ಬೆಂಗಳೂರು: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ (Free electricity) ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆ (Gruha Jyothi scheme) ನೋಂದಣಿಗೆ ಜನರು ಉತ್ಸುಕರಾಗಿದ್ದಾರೆ. ಆದರೆ, ಸರ್ವರ್ ಪ್ರಾಬ್ಲಮ್ ಮಾತ್ರ ಸತತ ಮೂರನೇ ದಿನವೂ ಕಾಡಿದೆ. ಜೂನ್ 18ರಿಂದ ಸೇವಾ ಸಿಂಧು ಪೋರ್ಟಲ್ (Sewa sindhu Portal) ಮೂಲಕ ಗೃಹ ಜ್ಯೋತಿ ನೋಂದಣಿಗೆ ಅವಕಾಶ ನೀಡಲಾಗಿದೆ. ಆದರೆ, ಮೂರನೇ ದಿನವೂ ಸರ್ವರ್ ಸಮಸ್ಯೆ ಎಲ್ಲರನ್ನೂ ಕಾಡಿದೆ.
ಅರ್ಜಿ ಸಲ್ಲಿಕೆ ಆರಂಭ ಆದ ಮೊದಲ ದಿನ 55 ಸಾವಿರ ಅರ್ಜಿ ಸ್ವೀಕಾರವಾಗಿದ್ದರೆ, ಎರಡನೇ ದಿನ ಪರಿಸ್ಥಿತಿ ಸ್ವಲ್ಪ ಸುಧಾರಿಸಿ, ಜೂನ್ 19ರಂದು 1,06,958 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅಂದರೆ, ಎರಡು ದಿನದಲ್ಲಿ ಎರಡು ದಿನಗಳಲ್ಲಿ ಒಟ್ಟು 1,61,958 ಅರ್ಜಿಗಳು ಸಲ್ಲಿಕೆಯಾಗಿವೆ. ಮೂರನೇ ದಿನ ಸರ್ವರ್ ಸಮಸ್ಯೆಗಳ ನಡುವೆಯೂ ಸಾಕಷ್ಟು ಅರ್ಜಿ ಸಲ್ಲಿಕೆಯಾಗಿರುವುದು ಕಂಡುಬಂದಿದೆ. ರಾಜ್ಯದ ಬಹುತೇಕ ಮಂದಿ ಜತೆಯಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಮುಂದಾಗುವುದರಿಂದ ಸರ್ವರ್ ಮೇಲೆ ಒತ್ತಡ ಬಿದ್ದು ತೊಂದರೆಯಾಗುತ್ತಿದೆ ಎನ್ನಲಾಗಿದೆ. ಆದರೆ, ಮೂರನೇ ದಿನ ಹೆಚ್ಚಿನ ಕಡೆಗಳಲ್ಲಿ ಪೋರ್ಟಲ್‌ಗಳು ಸ್ಲೋ ಆಗಿ ಆದರೂ ಕೆಲಸ ಮಾಡಿವೆ.
ಹೊಸಪೇಟೆಯಲ್ಲಿ ಕೈಕೊಟ್ಟ ಪೋರ್ಟಲ್
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕೆಇಬಿ ಆಫೀಸ್ ನಲ್ಲಿ ಅಪ್ಲಿಕೇಶನ್ ಸಲ್ಲಿಕೆಗೆ ಬೆಳಗ್ಗೆ ಏಳು ಗಂಟೆಗೇ ಬಂದು ಗ್ರಾಹಕರು ಕಾಯುತ್ತಿದ್ದರು. ಆದರೆ, ಸರ್ವರ್ ಸರಿ ಇಲ್ಲದೆ ತೊಂದರೆ ಉಂಟಾಯಿತು.
ʻʻಇದೊಂಥರ ಆಡೋಣು ಬಾ.. ಕೆಡಿಸೋಣ ಬಾ ಅನ್ನೋ ರೀತಿ ಇದೆ. ಬರೀ ಫಾರಂ ಮಾತ್ರ ಇಸ್ಕೊಳ್ತಿದಾರೆ, ಒಟಿಪಿ ಬರುತ್ತೆ ಹೇಳಿ ಅಂತಿದ್ದಾರೆ. ಆಗ ನಾವೆಲ್ಲಿ ಇರುತ್ತೆವೆಯೋ.. ಅವರೆಲ್ಲಿ ಇರ್ತಾರೋ ಗೊತ್ತಿಲ್ಲ. ಹೆಸರು, ಫೋನ್ ನಂಬರ್ ಬರೆದುಕೊಂಡು ಕಳುಹಿಸುತ್ತಿದ್ದಾರೆ. ಸರ್ಕಾರ ಏನ್ ಮಾಡೋದಕ್ಕೆ ಹೊರಟಿದೆಯೋ ಗೊತ್ತಿಲ್ಲʼʼ ಎಂದು ಕೆಲವರು ಕಷ್ಟ ಹೇಳಿಕೊಂಡರು.
ಗದಗದ ಸೇವಾ ಕೇಂದ್ರದಲ್ಲೂ ಸಮಸ್ಯೆ ಮುಂದುವರಿದಿದೆ. ಇಲ್ಲಿ ಬೆಳಗ್ಗೆ 10.30ರವರೆಗೆ ಮಾತ್ರ ಸರ್ವರ್ ಸರಿ ಇರುತ್ತದೆ. ನಂತರ ಸಮಸ್ಯೆ ಕಾಡುತ್ತಾ ಹೋಗುತ್ತದೆ ಎನ್ನಲಾಗಿದೆ.
ಹಾವೇರಿಯಲ್ಲಿ ಕರ್ನಾಟಕ ಒನ್ ಕೇಂದ್ರದ ಮುಂದೆ ಜನಜಂಗುಳಿ ನೆರೆದಿದ್ದು, ಕೆಲವೇ ಜನರ ನೋಂದಣಿ ಆಗುತ್ತಿದೆ. ಕೆಲವರು ಸೇವಾ ಕೇಂದ್ರದಿಂದ ಸೇವಾಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಹುಬ್ಬಳ್ಳಿಯಲ್ಲೂ ಇದೇ ರೀತಿಯ ಸಮಸ್ಯೆ ಆಗಿದೆ.
ನೋಂದಣಿ ಪ್ರಕ್ರಿಯೆ ಸರಳವಾಗಿದೆ
-ನೋಂದಣಿ ಪ್ರಕ್ರಿಯೆ ಅತ್ಯಂತ ಸರಳೀಕರಣವಾಗಿದ್ದು, ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ.
– ಕೇವಲ ವಿದ್ಯುತ್ ಸಂಖ್ಯೆಯಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನಷ್ಟೆ ನಮೂದಿಸಿದರೆ ಸಾಕು
– ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ.
– ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತದೆ.
– ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ. ಆದ್ದರಿಂದ ಗ್ರಾಹಕರು ಆತಂಕ ಪಡಬೇಕಾಗಿಲ್ಲ
ಇದನ್ನೂ ಓದಿ : Congress Guarantee: ಕೇಂದ್ರ ಸರ್ಕಾರ ಗೃಹಲಕ್ಷ್ಮೀ ʼಆ್ಯಪ್ʼ ಹ್ಯಾಕ್ ಮಾಡಿದೆ: ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ