ಬೆಂಗಳೂರು: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ (Free Electricity) ನೀಡುವ ʻಗೃಹ ಜ್ಯೋತಿʼ ಯೋಜನೆಯ (Gruhajyothi scheme) ಫಲಾನುಭವಿಗಳಾಗಲು ಜೂನ್ 18ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೂನ್ 15ರಿಂದಲೇ ಆರಂಭವಾಗಬೇಕಾಗಿದೆ ಅರ್ಜಿ ಸಲ್ಲಿಕೆಯನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ ಅರ್ಜಿ ಸ್ವೀಕಾರವನ್ನು ಜೂನ್ 18ರಿಂದ ಆರಂಭಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.
ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ (Sewa sindhu Portal), ಸರ್ಕಾರಿ ಸಂಸ್ಥೆಗಳ ಬಿಲ್ ಪಾವತಿ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸರ್ಕಾರ ಜೂನ್ 15ರಿಂದಲೇ ಅರ್ಜಿ ಸಲ್ಲಿಕೆಗೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತಾದರೂ ತಂತ್ರಾಂಶದಲ್ಲಿ (ಸಾಫ್ಟ್ ವೇರ್) ಕೆಲವು ತಾಂತ್ರಿಕ ಅಡಚಣೆಗಳು ಕಾಣಿಸಿಕೊಂಡಿತ್ತು. ಸಮಸ್ಯೆಗಳು ಸಣ್ಣದೇ ಆದರೂ ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಎಲ್ಲವನ್ನೂ ಸರಿಪಡಿಸಿಕೊಂಡೇ ಜನರ ಮುಂದೆ ಬರುವ ದೃಷ್ಟಿಯಿಂದ ಅರ್ಜಿ ಸ್ವೀಕಾರ ದಿನಾಂಕವನ್ನು ಜೂನ್ 18ಕ್ಕೆ ಮುಂದೂಡಲಾಗಿತ್ತು.
ಜುಲೈ ಮೊದಲ ಭಾಗದಲ್ಲಿ ಗ್ರ್ಯಾಂಡ್ ಲಾಂಚ್
ಗೃಹ ಜ್ಯೋತಿ ಯೋಜನೆಯಡಿ ರಾಜ್ಯಾದ್ಯಂತ 2 ಕೋಟಿ ಫಲಾನುಭವಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ಅರ್ಜಿ ಸ್ವೀಕಾರಕ್ಕೆ ಕನಿಷ್ಠ 20 ದಿನಗಳ ಅವಕಾಶ ನೀಡಲಾಗುತ್ತದೆ. ಈ ನಡುವೆ ಜುಲೈ ಮೊದಲ ಭಾಗದಲ್ಲಿ ಯೋಜನೆಯನ್ನು ಗ್ರ್ಯಾಂಡ್ ಆಗಿ ಲಾಂಚ್ ಮಾಡುವ ಪ್ಲ್ಯಾನ್ ಇದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿವರಾಗಿರುವ ಕೆ.ಜೆ. ಜಾರ್ಜ್ ಅವರು ಈ ಯೋಜನೆಯನ್ನು ಉದ್ಘಾಟಿಸುವ ನಿರೀಕ್ಷೆ ಇದೆ.
20 ದಿನಗಳ ಅವಕಾಶವಿದೆ
ಹಿಂದಿನ ಸೂಚನೆಯ ಪ್ರಕಾರ ಕಂಪ್ಯೂಟರ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಜೂನ್ 18ರಿಂದ ಅವಕಾಶ ನೀಡಲಾಗಿದೆ. ಅಂತಿಮ ದಿನಾಂಕವನ್ನು ಮೊದಲು ಜುಲೈ 5 ಎಂದು ನಿಗದಿ ಮಾಡಲಾಗಿತ್ತು. ಇದೀಗ ಅದು ಜುಲೈ 8ಕ್ಕೆ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಯಾವುದೇ ರೀತಿಯ ತೊಂದರೆಗಳು ಆಗದಂತೆ ಇಂಧನ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಹೀಗೆ ಐದು ವಿಭಾಗಗಳಲ್ಲಿ ಜಾರಿ ಮಾಡಿಕೊಳ್ಳಲಾಗುತ್ತಿದೆ. ಹೊಸ ಮನೆ ಬಾಡಿಗೆದಾರರಿಗೆ ಸಹ ಗೃಹಜ್ಯೋತಿ ಭಾಗ್ಯವಿದ್ದು, ಹೊಸ ಮನೆಗೆ 53 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. 53 ಯೂನಿಟ್ ಜೊತೆ 10% ಪರ್ಸೆಂಟ್ ಅಂದರೆ 58 ಯೂನಿಟ್ ವಿದ್ಯುತ್ ಉಚಿತವಾಗಿದೆ.
ಅರ್ಜಿ ಸಲ್ಲಿಕೆಗೆ ಏನೇನು ಬೇಕು?
ಅರ್ಜಿ ಸಲ್ಲಿಸುವವರು ಆರ್‌ಆರ್ ನಂಬರ್ ಜೊತೆಗೆ ಆಧಾರ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು.
ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕರಾರು ಪತ್ರ ಅಥವಾ ವೋಟರ್ ಐಡಿ ಕಡ್ಡಾಯವಾಗಿದ್ದು, ಇವೆರಡರಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು.
ಅರ್ಜಿ ಸಲ್ಲಿಕೆಯನ್ನು ಇಂಧನ ಇಲಾಖೆ ಸರಳೀಕರಣ ಮಾಡಿದೆ. ಹಳ್ಳಿಗಳಲ್ಲಿ ಹಾಗೂ ನಗರ ಭಾಗಗಳಲ್ಲಿ ಬಾಡಿಗೆ ಇರುವವರ ದೃಷ್ಟಿಯಿಂದ ಸರಳೀಕರಣ ಮಾಡಲಾಗಿದೆ.
ಇದನ್ನೂ ಓದಿ : Gruhajyothi scheme: ಗೃಹ ಜ್ಯೋತಿ ಸ್ಕೀಂ; ಎಲ್ಲ ಗೊಂದಲಗಳಿಗೆ ಇಲ್ಲಿದೆ ನಿಖರ ಉತ್ತರ