ಬೆಂಗಳೂರು: ಸ್ವಂತ ಮನೆ ಇಲ್ಲದವರಿಗೆ ಕನಸಿನ ಸೂರು ಕಟ್ಟಿಸಿಕೊಳ್ಳಲು ಸದ್ಯದಲ್ಲಿಯೇ ಸುವರ್ಣಾವಕಾಶ ಒದಗಿ ಬರಲಿದೆ. ಆಶ್ರಯ ಯೋಜನೆಯಡಿ (Ashraya Scheme) ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಒಟ್ಟು 527.30 ಎಕರೆ ಜಾಗವನ್ನು ಗುರುತು ಮಾಡಲಾಗಿದೆ. ಇದು ನಿವೇಶನರಹಿತರಿಗೆ ಮಾತ್ರ ಇದರ ಸೌಲಭ್ಯ ದೊರೆಯಲಿದೆ.
ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇನ್ನೂ ನಿವೇಶನ ಮಾತ್ರ ಹಂಚಿಕೆ ಆಗಿಲ್ಲ. ಈ ಸಂಬಂಧ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳು ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತವು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸುತ್ತಲೇ ಬಂದಿದೆ. ಇಷ್ಟಾದರೂ ಹಂಚಿಕೆ ವಿಳಂಬವಾಗುತ್ತಲೇ ಇದೆ.
ಅರ್ಹರ ಗುರುತಿಸುವಿಕೆ ಮಾತ್ರ ಬಾಕಿ
ನಿವೇಶನ, ವಸತಿ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನವನ್ನು ನೀಡುವ ಸಂಬಂಧ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ 5 ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ನಿವೇಶನರಹಿತರು, ವಸತಿರಹಿತರ ಸರ್ವೆಯನ್ನು ಮಾಡಲಾಗಿತ್ತು. ಅಲ್ಲದೆ, ಅರ್ಜಿದಾರರ ಪೂರ್ವಾಪರ ಮಾಹಿತಿಯನ್ನು ಸಹ ಸಂಗ್ರಹಿಸಲಾಗಿತ್ತು.
ಬಾಡಿಗೆದಾರರ ಫೋಟೊ ಸಹಿತ ಮಾಹಿತಿ ಸಂಗ್ರಹ
ಸ್ವಂತ ನಿವೇಶನ ಇಲ್ಲ, ನಾವು ಬಾಡಿಗೆ ಮನೆಯಲ್ಲಿದ್ದೇವೆ ಎಂಬುದಾಗಿ ಅರ್ಜಿ ಸಲ್ಲಿಕೆ ವೇಳೆ ಮಾಹಿತಿಯನ್ನು ದಾಖಲು ಮಾಡಿದ್ದವರ ವಿಳಾಸಕ್ಕೆ ಭೇಟಿ ನೀಡಿದ್ದಲ್ಲದೆ, ಬಾಡಿಗೆ ಮನೆಯಲ್ಲಿರುವ ಬಗ್ಗೆ ಖಾತ್ರಿಗೆ ಫೋಟೊವನ್ನು ಸಹ ಪಡೆದುಕೊಳ್ಳಲಾಗಿದೆ. ಜತೆಗೆ ಈ ಮಾಹಿತಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ರವಾನೆ ಮಾಡಲಾಗಿತ್ತು. ಆದರೆ, ಗ್ರಾಪಂಗಳು ಮಾತ್ರ ನಿಧಾನಗತಿಯನ್ನು ಅನುಸರಿಸುತ್ತಿವೆ.
ಗೋಮಾಳ ಜಾಗ ನಿಗದಿ
ಈಗಾಗಲೇ ಜಿಲ್ಲಾಡಳಿತವು ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಲ್ಲಿ ಸರ್ಕಾರಿ ಗೋಮಾಳಗಳನ್ನು ಗುರುತಿಸಲಾಗಿದೆ. ಜತೆಗೆ ಪಹಣಿಯಲ್ಲಿಯೂ ಆಶ್ರಯ ನಿವೇಶನಕ್ಕೆ ಮೀಸಲು ಎಂದು ನಮೂದು ಮಾಡಲಾಗಿದೆ. ಈ ಬಗ್ಗೆ ತಾಲೂಕು ಪಂಚಾಯಿತಿ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಸಂದೇಶ ರವಾನೆಯಾಗಲಿದೆ.
ತೊಂದರೆ ಏನು?
ಈ ಸಂಬಂಧ ಕೆಲವು ತಾಂತ್ರಿಕ ಸಮಸ್ಯೆಗಳು ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಅಂತಹ ಕಡೆ ಸಮಸ್ಯೆ ನಿವಾರಣೆಗೆ ಬೇಕಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮಸ್ಯೆ ಇಲ್ಲದ ಕಡೆಗಳಲ್ಲಿ ನಿವೇಶನಗಳನ್ನು ವಿಂಗಡಿಸಿ ರಸ್ತೆ, ಚರಂಡಿ ನಿರ್ಮಾಣದ ಜತೆಗೆ ಶಾಲೆ ಹಾಗೂ ಅಂಗನವಾಡಿಗಳಿಗೆ ಜಾಗ ಗುರುತಿಸಲು ಮುಂದಾಗಲಾಗಿದೆ.
ನೀತಿ ಸಂಹಿತೆ ಭಯ
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಅಷ್ಟರೊಳಗೆ ನಿವೇಶನವನ್ನು ಹಂಚಿಕೆ ಮಾಡುವ ಬಗ್ಗೆ ಕೆಲಸಗಳಿಗೆ ವೇಗ ನೀಡಲಾಗುತ್ತಿದೆ. ಆದರೆ, ಅಷ್ಟರಲ್ಲಿ ನೀತಿ ಸಂಹಿತೆ ಜಾರಿಯಾದರೆ ನಿವೇಶನ ಹಂಚಿಕೆ ಪ್ರಕ್ರಿಯೆಯು ಮತ್ತೆ ಮೂರರಿಂದ ನಾಲ್ಕು ತಿಂಗಳು ಮುಂದಕ್ಕೆ ಹೋಗುತ್ತದೆ. ಒಂದು ವೇಳೆ ಅಷ್ಟರೊಳಗೇ ಹಂಚಿಕೆಯಾದರೂ ಕೈತಪ್ಪಿದವರ ಸಿಟ್ಟಿಗೆ ಸರ್ಕಾರ ಗುರಿಯಾಗಬೇಕಿದೆ ಎಂಬ ಆತಂಕವೂ ಸ್ಥಳೀಯರಲ್ಲಿ ಕಾಡುತ್ತಿದೆ.
ಯಾವ ತಾಲೂಕಿನಲ್ಲಿ ಎಷ್ಟು ಜಮೀನು ಮಂಜೂರು?
ದೇವನಹಳ್ಳಿ ತಾಲೂಕು – 62.14 ಎಕರೆ
ದೊಡ್ಡಬಳ್ಳಾಪುರ ತಾಲೂಕು – 93.39 ಎಕರೆ
ಹೊಸಕೋಟೆ ತಾಲೂಕು – 324.20 ಎಕರೆ
ನೆಲಮಂಗಲ ತಾಲೂಕು – 46.37 ಎಕರೆ
ಈ ನಾಲ್ಕು ತಾಲೂಕುಗಳಲ್ಲಿ ನಿವೇಶನಕ್ಕಾಗಿ ಒಟ್ಟು 527.30 ಎಕರೆ ಜಾಗವನ್ನು ಗುರುತು ಮಾಡಲಾಗಿದೆ.
ಇದನ್ನೂ ಓದಿ: Agriculture Startup: ಕೃಷಿ ನವೋದ್ಯಮ ಆರಂಭಿಸುವಿರೇ? 50 ಲಕ್ಷ ರೂ. ಸಾಲಕ್ಕೆ ಶೇ.50 ರಿಯಾಯಿತಿ ಪಡೆಯಿರಿ!
ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು ಏನು?
- ಪುರಸಭೆ ಹಾಗೂ ಇತರೆ ಯಾವುದೇ ಪ್ರದೇಶದಲ್ಲಿ ಅರ್ಜಿದಾರರ ಕುಟುಂಬದವರ ಬಳಿಯಾಗಲೀ, ಅರ್ಜಿದಾರರ ಹೆಸರಿನಲ್ಲಾಗಲೀ ಯಾವುದೇ ಆಸ್ತಿ ಇರುವಂತಿಲ್ಲ.
- ಸ್ವಂತ ನಿವೇಶನ ಇಲ್ಲ ಎಂಬ ಬಗ್ಗೆ ನೋಟರಿ ಅಫಿಡವಿಟ್ ಅನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
- ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರವನ್ನು ನೀಡಬೇಕು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
- ಪಡಿತರ ಚೀಟಿ ಹಾಗೂ ಎಲ್ಲ ಸದಸ್ಯರ ನಕಲು ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿಯನ್ನು ಲಗತ್ತಿಸಬೇಕು.
- ವಿಕಲಚೇತನರಾಗಿದ್ದರೆ ಜಿಲ್ಲಾ ವೈದ್ಯಾಧಿಕಾರಿಯ ಸಹಿಯುಳ್ಳ ಪ್ರಮಾಣ ಪತ್ರವನ್ನು ದಾಖಲೆಯಾಗಿ ನೀಡಬೇಕು.
- ಮಾಜಿ ಸೈನಿಕರು, ಹಿರಿಯ ನಾಗರಿಕರಾಗಿದ್ದಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
- ಮಹಿಳೆ, ವಿಧವೆ, ವಿಚ್ಛೇದಿತರಾಗಿ ಒಂಟಿಯಾಗಿರುವವ ಆದ್ಯತೆಯನ್ನು ನೀಡಲಾಗುತ್ತದೆ.