ಕೊಪ್ಪಳ: ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಹಸಿ ಬಾಣಂತಿಯೊಬ್ಬಳ ಶವ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, (Woman Murdered) ಇದರ ಬಗ್ಗೆ ನಾನಾ ಸಂಶಯಗಳು ವ್ಯಕ್ತವಾಗುತ್ತಿದೆ. ಇದು ಆತ್ಮಹತ್ಯೆಯಾಗಿರುವ ಸಾಧ್ಯತೆ ಇಲ್ಲ. ಬದಲಾಗಿ ನಿಧಿಗಾಗಿ ನಡೆದಿರುವ ಕೊಲೆ ಎಂದು ಸಂಶಯಿಸಲಾಗಿದೆ.
ನೇತ್ರಾವತಿ ಕುರಿ (26) ಕೊಲೆಯಾದ ಬಾಣಂತಿ. ಅವರಿಗೆ ಕೇವಲ ಒಂದೂವರೆ ತಿಂಗಳ ಪುಟ್ಟ ಮಗುವಿದ್ದು, ಅವರ ಶವ ಸಮೀಪದ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇತ್ರಾವತಿಯನ್ನು ಸುಟ್ಟು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ರಾತ್ರಿ ಅಮಾವಾಸ್ಯೆ ಇದ್ದು, ತಡರಾತ್ರಿ ನಿಧಿಗಾಗಿ ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಮನೆಯಿಂದ ಅನತಿ ದೂರದಲ್ಲಿ ಶವ ಸಿಕ್ಕಿದೆ. ಪರಿಸರದಲ್ಲಿ ವಾಮಾಚಾರ ಸಂಬಂಧಿತ ಕೆಲವು ವಸ್ತುಗಳು ಸಿಕ್ಕಿರುವುದು ಇದೊಂದು ನಿಧಿಗಾಗಿ ನಡೆಸಿದ ಕೊಲೆಯಾಗಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಪರಿಶೀಲನೆ ನಡೆಸಿದ್ದಾರೆ.
ಚರಂಡಿ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾರ್ಮಿಕರು ಸಾವು
ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾರ್ಮಿಕರು ಇದ್ದಕಿದ್ದಂತೆ ಹೊಟ್ಟೆನೋವು ಉಂಟಾಗಿ ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದ ಬೀದಿ ಬದಿಯ ಚರಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರು ಇದ್ದಕ್ಕಿದ್ದಂತೆ ಹೊಟ್ಟೆ ನೋವು ತಲೆದೋರಿ ಅಸ್ವಸ್ಥರಾಗಿದ್ದರು. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸತ್ಯಪ್ಪ(50), ಮೈಲಪ್ಪ(41) ಮೃತ ಕೂಲಿಕಾರ್ಮಿಕರು.
ಬಸವನಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಲಾಗಿದೆ. ಕಾರ್ಮಿಕರ ಸಾವಿನ ತನಿಖೆ ನಡೆಸಲು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ನಮ್ಮೊಳಗಿನ ಸಂತಸ ಹೆಚ್ಚಿಸಲು ಇಲ್ಲಿವೆ ಮೂವತ್ತು ಸಿಂಪಲ್ ಸಲಹೆಗಳು!