Site icon Vistara News

G 20 Summit : ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ-20 ವೇದಿಕೆ; ಆಯುರ್ವೇದಕ್ಕೆ ವಿಶ್ವ ಬಲ!

Hampi

ವಿಜಯನಗರ/ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿ ಜಿ 20 ಶೃಂಗಸಭೆಯು (G 20 Summit) ಭಾನುವಾರದಿಂದ ಆರಂಭಗೊಂಡಿದ್ದು, ಪ್ರಮುಖವಾಗಿ ನಾಲ್ಕು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಸಾಂಸ್ಕೃತಿಕ ಸ್ಥಳಗಳು ಹಾಗೂ ಅವುಗಳ ಅಭಿವೃದ್ಧಿ, ಆಯುರ್ವೇದ ಚಿಕಿತ್ಸೆ ಮತ್ತು ಅದಕ್ಕೆ ನೀಡಬೇಕಾದ ಉತ್ತೇಜನ, ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಅಲ್ಲದೆ, ದೇಶದ ಜವಳಿ ಕ್ಷೇತ್ರದ ವೈವಿಧ್ಯತೆ ಬಿಂಬಿಸುವ ಹಾಗೂ ಜಾಗತಿಕವಾಗಿ ಸಾಂಸ್ಕೃತಿಕ ಜವಳಿ ಉದ್ದಿಮೆಯ ಬೆಳವಣಿಗೆಗೆ ಇಂಬು ಕೊಡುವ ನಿಟ್ಟಿನಲ್ಲಿ ಹಂಪಿ ಎದುರು ಬಸವಣ್ಣ ಮಂಟಪದ ಆವರಣದಲ್ಲಿ ಜವಳಿ ವಸ್ತುಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಹೇಳಿದರು.

ತೋರಣಗಲ್ ಪಟ್ಟಣದ ವಿದ್ಯಾನಗರದ ಜೆ-ಮ್ಯಾಕ್ಸ್ ಸಭಾಂಗಣದಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಚರ್ಚೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್, ಹಂಪಿಯಲ್ಲಿ, ಜುಲೈ 9 ರಿಂದ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಪ್ರಾರಂಭವಾಗಿದ್ದು, 12 ವರೆಗೆ ನಡೆಯಲಿದೆ. ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ-20 ವೇದಿಕೆಯಾಗಲಿದೆ. ಈ ಹಿಂದೆ ಒರಿಸ್ಸಾದ ಖಜುರಾಹೋ ಹಾಗೂ ಭುವನೇಶ್ವರದಲ್ಲಿ ಜರುಗಿದ ಜಿ-20 1 ಮತ್ತು 2ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗಳು ಯಶಸ್ವಿಯಾಗಿವೆ. ಇದರಲ್ಲಿ ಜಿ-20 ಸದಸ್ಯ ರಾಷ್ಟ್ರಗಳ 45 ಅತ್ಯುನ್ನತ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರ ಜೊತೆಗೆ ಹಲವಾರು ವೆಬಿನಾರ್‌ಗಳನ್ನು ಸಹ ಆಯೋಜಿಸಲಾಗಿತ್ತು ಎಂದು ತಿಳಿಸಿದರು.

ಹಂಪಿಯ ಒಂದು ನೋಟ

ಇದನ್ನೂ ಓದಿ: Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಪಂಚಭೂತಗಳಲ್ಲಿ ಲೀನ

ಆಯುರ್ವೇದ ಸೇರಿ ನಾಲ್ಕು ಥೀಮ್‌ನಡಿ ಚರ್ಚೆ!

ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪು ಪ್ರಮುಖ ನಾಲ್ಕು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಿ, ಪುನರ್‌ಸ್ಥಾಪಿಸುವುದಾಗಿದೆ. 1970ರ ಯುನೆಸ್ಕೋ ಓಡಂಬಡಿಕೆಯಂತೆ ಎಲ್ಲ ರಾಷ್ಟ್ರಗಳು ಪರಸ್ಪರ ಸಹಕಾರದಿಂದ, ವಸಾಹತು ಸಮಯ ಅಥವಾ ಇನ್ನಿತರ ಮಾರ್ಗಗಳಿಂದ ಪಡೆಯಲಾದ ಸಾಂಸ್ಕೃತಿಕ ಮಹತ್ವವುಳ್ಳ ಕಲಾಕೃತಿಗಳನ್ನು ಹಿಂದಿರುಗಿಸಬೇಕು. ಭಾರತವು ಸಹ ಇದಕ್ಕೆ ಬದ್ಧವಾಗಿದ್ದು, ಈಗಾಗಲೇ ಭಾರತವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಮೆರಿಕವು 150 ಹೆಚ್ಚು ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಎರಡನೇ ಮುಖ್ಯ ಉದ್ದೇಶವೆಂದರೆ ಜನಜೀವನದ ಜತೆಗೆ ಪಾರಂಪರಿಕವಾಗಿ ಬಳಕೆಗೆ ಬಂದ ಪದ್ಧತಿಗಳನ್ನು ಉಳಿಸಿ ಬೆಳೆಸುವುದು ಆಗಿದೆ. ಭಾರತದಲ್ಲಿ ಆಯುರ್ವೇದ ಪದ್ಧತಿ ಬಳಕೆಯಲ್ಲಿ ಇದೆ. ಹಲವಾರು ಸಂದರ್ಭದಲ್ಲಿ ಆಯುರ್ವೇದದಲ್ಲಿ ಬಳಕೆಯಲ್ಲಿದ್ದ ಔಷಧೋಪಚಾರಗಳ ಸ್ವಾಮ್ಯ ಹಕ್ಕು (ಪೇಟೆಂಟ್) ಬೇರೆಯವರ ಪಾಲಾಗಿದೆ. ಈ ರೀತಿಯ ಘಟನೆಗಳನ್ನು ತಪ್ಪಿಸುವುದು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಕೆಲಸವಾಗಿದೆ. ಮೂರನೇ ಉದ್ದೇಶ ಸಾಂಸ್ಕೃತಿಕ ಅಂಶಗಳು, ಕಲಾ ಕುಸುರಿ ಹಾಗೂ ಉದ್ದಿಮೆಗಳನ್ನು ಪ್ರಚುರ ಪಡಿಸುವುದಾಗಿದೆ. ಇದರ ಅಂಗವಾಗಿ ಹಂಪಿಯಲ್ಲಿ ಜವಳಿ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ನಾಲ್ಕನೇ ಉದ್ದೇಶ ಸಾಂಸ್ಕೃತಿಕ ಅಂಶಗಳಿಗೆ ಡಿಜಿಟಲ್ ರೂಪ ನೀಡಿ, ಆಡಿಯೊ, ವಿಡಿಯೊ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು. ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸಲು ಆಧಾರವಾಗಿದೆ ಎಂದು ಜಿ-20 ಸಾಂಸ್ಕೃತಿಕ ಕಾರ್ಯಕಾರಣಿ ಗುಂಪು ನಂಬಿದೆ ಎಂದರು.

ವಾರಾಣಸಿಯಲ್ಲಿ ಆಗಸ್ಟ್ 26 ರಂದು ಸಾಂಸ್ಕೃತಿಕ ಕಾರ್ಯಕಾರಣಿ ಗುಂಪಿನ ಅಂತಿಮ ಸಭೆ ನಡೆಯಲಿದೆ. ವಾರಾಣಸಿ ಸಭೆಯಲ್ಲಿ ಡಿಜಟಲೀಕರಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಗಿನ್ನಿಸ್ ದಾಖಲೆಯ ಲಂಬಾಣಿ ಕುಸೂತಿ ಕಲೆ

ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಜವಳಿ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ. ಜು.10ರಂದು ವಸ್ತುಪ್ರದರ್ಶನವು ಉದ್ಘಾಟನೆ ನಡೆಯಲಿದೆ. ಸಂಡೂರಿನ ಕಲಾಕೇಂದ್ರದ 450ಕ್ಕೂ ಹೆಚ್ಚು ಜನ ಲಂಬಾಣಿ ಮಹಿಳೆಯರು 1300 ವೈವಿಧ್ಯಮಯ ಕಸೂತಿಗಳನ್ನು ಸಿದ್ಧಪಡಿಸಿದ್ದು, ಇದು ವಿಶ್ವ ಗಿನ್ನೆಸ್ ದಾಖಲೆಗೆ ಸೇರಲಿದೆ. ಇದರ ಪ್ರದರ್ಶನವೂ ಇಲ್ಲಿರುತ್ತದೆ. ಜೊತೆಗೆ ಇತರೆ ಕರಕಶುಲ ಹಾಗೂ ಜವಳಿ ಕಸೂತಿ ಕಲೆಗಾರರು ಪಾಲ್ಗೊಳ್ಳುವರು. ಈ ಮೂಲಕ ಜಾಗತಿಕವಾಗಿ ಸಾಂಪ್ರದಾಯಿಕ ಲಂಬಾಣಿ ಕಸೂತಿಗೆ ಮನ್ನಣೆ ದೊರಕಿಸಿ, ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ದೊರಕಿಸುವ ಜತೆಗೆ ಸಾಂಪ್ರದಾಯಿಕ ಬದುಕಿನ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ ತಿಳಿಸಿದರು.

ಗೋಷ್ಠಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಮಹಾ ನಿರ್ದೇಶಕ ಕೆ.ಕೆ.ಬಸಾ ಹಾಗೂ ಕೇಂದ್ರ ವಾರ್ತಾ ವಿಭಾಗದ (ಪಿಐಬಿ) ಸಹಾಯಕ ಮಹಾ ನಿರ್ದೇಶಕಿ ನಾನು ಭಾಸಿನ್ ಉಪಸ್ಥಿತರಿದ್ದರು.

ಇದನ್ನೂ ಓದಿ: Jain Muni Murder : ಕೇಂದ್ರಕ್ಕೆ ಆಮರಣಾಂತ ಉಪವಾಸ ಎಚ್ಚರಿಕೆ ಕೊಟ್ಟ ಜೈನಮುನಿ!

ಆಯುರ್ವೇದಕ್ಕೆ ವಿಶ್ವದ ಬಲ!

ಭಾರತದಲ್ಲಿ ಆಯುರ್ವೇದ ಪದ್ಧತಿ ಬಳಕೆಯಲ್ಲಿ ಇದೆ. ಆಯುರ್ವೇದ ಚಿಕಿತ್ಸೆ ಅದಕ್ಕೆ ನೀಡಬೇಕಾದ ಉತ್ತೇಜನದ ಬಗ್ಗೆ ಇಲ್ಲಿ ಚರ್ಚೆ ಮಾಡುವುದರ ಜತೆಗೆ ಫಾರ್ಮುಲಾದ ಪೇಟೆಂಟ್‌ ಸಂರಕ್ಷಣೆಗೂ ಮಹತ್ವವನ್ನು ನೀಡಲು ವಿಶ್ವದ ಹಲವು ದೇಶಗಳ ಪ್ರತಿನಿಧಿಗಳು ಚರ್ಚೆ ನಡೆಸುತ್ತಿರುವುದರಿಂದ ವಿಶ್ವದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಮನ್ನಣೆಯನ್ನು ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

Exit mobile version