ದಾವಣಗೆರೆ: ಮಾಧ್ಯಮಗಳು ರಾಜಕೀಯ ಪಕ್ಷಗಳ ಮುಖವಾಣಿಯಾಗದೆ ಪ್ರಜೆಗಳ ಮುಖವಾಣಿಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿ ಈಗಾಗಲೇ ಹತ್ತಾರು ದೃಶ್ಯ ಮಾಧ್ಯಮಗಳಿವೆ. ಅವುಗಳ ನಡುವೆ ವಿಭಿನ್ನವಾಗಿ, ವಿಶಿಷ್ಟವಾಗಿ ವಿಸ್ತಾರ ನ್ಯೂಸ್ (Vistara News Launch) ವಿಸ್ತಾರವಾಗಿ ಬೆಳೆಯಲಿ ಎಂದು ಸಂಸದ, ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಹಾರೈಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ವಿಸ್ತಾರ ನ್ಯೂಸ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ಕೆಲ ಮಾಧ್ಯಮಗಳು ವ್ಯಕ್ತಿನಿಷ್ಠವಾಗಿ ಕೆಲಸ ಮಾಡುತ್ತಿವೆ. ಆದರೆ, ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ವಸ್ತುನಿಷ್ಠವಾಗಿ, ಪಾರದರ್ಶಕವಾಗಿ ಮಾಧ್ಯಮ ಸಂಸ್ಥೆಯನ್ನು ಬೆಳೆಸುವರೆಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದರು.
ಇದನ್ನೂ ಓದಿ | Vistara News Launch | ಅಂಕೋಲಾದಲ್ಲಿ ಅದ್ಧೂರಿ ವಿಸ್ತಾರ ಕನ್ನಡ ಸಂಭ್ರಮ
ವಿಸ್ತಾರ ನ್ಯೂಸ್ ಇಂತಹ ಕನ್ನಡ ಸಂಭ್ರಮ ಕಾರ್ಯಕ್ರಮ ಮಾಡುತ್ತಿರುವುದು ಖುಷಿಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಜನಪರ, ಕನ್ನಡಪರ ಕಾರ್ಯಗಳನ್ನು ಮಾಡಲಿ. ಹತ್ತರಲ್ಲಿ ಹನ್ನೊಂದನೇ ಸಂಸ್ಥೆಯಾಗದೆ ಉತ್ತಮ ಸಂಸ್ಥೆಯಾಗಿ ವಿಸ್ತಾರ ಹೊರಹೊಮ್ಮಲಿ ಎಂದು ಶುಭ ಕೋರಿದರು.
ಮಾಜಿ ಮೇಯರ್, ಪಾಲಿಕೆ ಸದಸ್ಯ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ವಿಸ್ತಾರ ನ್ಯೂಸ್‌ನಲ್ಲೇ ವಿಶಾಲತೆ ಇದೆ. ಹರಿಪ್ರಕಾಶ್ ಕೋಣೆಮನೆ ಅವರು ಈಗಾಗಲೇ ಮೂರು ನಾಲ್ಕು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿ ಆ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಒಂದೇ ಸಂಸ್ಥೆಯಲ್ಲೇ ಪತ್ರಕರ್ತರಾಗಿ ಉಳಿಯದೆ ನೂರಾರು ಪತ್ರಕರ್ತರಿಗೆ ಕೆಲಸ ಕೊಟ್ಟು ಮಾದರಿ ಸಂಸ್ಥೆ ಕಟ್ಟಲು ಮುಂದಾಗಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಹನಾ ರವಿ ಮಾತನಾಡಿ, ವಿಸ್ತಾರ ನ್ಯೂಸ್ ಈಗಾಗಲೇ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲರಿಗೂ ಹತ್ತಿರವಾಗುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸುವಲ್ಲಿ ವಿಸ್ತಾರ ಈಗಾಗಲೇ ಯಶಸ್ವಿಯಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಸ್.ಆರ್. ಅಂಜಿನಪ್ಪ, ಕಾಸಪ ಅಧ್ಯಕ್ಷ ಬಿ.ವಾಮದೇವಪ್ಪ ಮತ್ತಿತರರು ಇದ್ದರು.
ಕನ್ನಡ ಧ್ವಜಾರೋಹಣ ಮೂಲಕ ಚಾಲನೆ
ಬೆಳಗ್ಗೆ 10.30ಕ್ಕೆ ಕನ್ನಡ ಧ್ವಜಾರೋಹಣ ಮೂಲಕ ವಿಸ್ತಾರ ಕನ್ನಡ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ನಗರದ ಸಿದ್ಧಗಂಗಾ ಶಾಲೆಯ ಮಕ್ಕಳು ನಾಡಗೀತೆ ಹಾಡುವ ಮೂಲಕ ಹುಮ್ಮಸ್ಸು ತುಂಬಿದರು. 10.45ಕ್ಕೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹಾಗೂ ಸದಸ್ಯ ಗಡಿಗುಡಾಳ್ ಮಂಜುನಾಥ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಏಕಾಂತಪ್ಪ, ದಾವಣಗೆರೆ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ ಚಾಲನೆ ನೀಡಿದರು.
ನಗರದ ನ್ಯಾಷನಲ್ ಕಾನ್ವೆಂಟ್ ಸ್ಕೂಲ್ ಮಕ್ಕಳು ಹಚ್ಚೇವು ಕನ್ನಡದ ದೀಪ ಹಾಡಿಗೆ ಹೆಜ್ಜೆ ಹಾಕಿದರು. ಆರ್.ಬಿ. ಡ್ಯಾನ್ಸ್ ಸ್ಕೂಲ್ ಮಕ್ಕಳು ಕನ್ನಡ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ಬಿ.ಜಿ.ಎಂ ಶಾಲೆಯ ಚಿಣ್ಣರು ವಚನಗಾಯನ ಮಾಡಿರುವುದು ಎಲ್ಲರ ಗಮನ ಸೆಳೆದಿದ್ದು, ಒಬ್ಬರಿಗಿಂತ ಒಬ್ಬರು ಅತ್ಯಾಕರ್ಷಕವಾಗಿ ಗಾಯನ ಮಾಡಿದರು. ಸೌಮ್ಯ ಸತೀಶ್ ತಂಡದವರು ಸಾಂಪ್ರದಾಯಿಕ ಉಡುಪುಗಳ ಫ್ಯಾಶನ್ ಶೋ ನಡೆಸಿದರು. ಶ್ರೀ ಶಾರದಾಂಬ ವಚನ ಗಾಯನ ತಂಡ ಮತ್ತು ವಚನಾಮೃತ ಮಹಿಳಾ ಬಳಗ ತಂಡದ ಸದಸ್ಯರು ಹತ್ತಕ್ಕೂ ಹೆಚ್ಚು ವಚನಗಳನ್ನು ಗಾಯನ ಮಾಡುವ ಮೂಲಕ ಗಮನ ಸೆಳೆದರು.
ವಿಸ್ತಾರ ಕನ್ನಡ ಸಂಭ್ರಮಕ್ಕೆ 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಸಾಕ್ಷಿಯಾಗಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ಮನೋರಂಜನೆ ಕಾರ್ಯಕ್ರಮವು ಗಮನ ಸೆಳೆದಿದ್ದು, ಪತ್ರಕರ್ತರಾದ ದೇವಿಕಾ ಸುನೀಲ್ ಹಾಗೂ ತೇಜಸ್ವಿನಿ ಪ್ರಕಾಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಎಲ್ಲ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಸ್ತಾರ ನ್ಯೂಸ್ ತಂಡಕ್ಕೆ ಶುಭಾಶಯ ಕೋರಿದರು.
ಇದನ್ನೂ ಓದಿ | Vistara News Launch | ಗಣಿನಾಡಿನಲ್ಲಿ ವಿಸ್ತಾರ ನ್ಯೂಸ್ ಚಾನೆಲ್ ಚಾಲನೆ ಸಂಭ್ರಮ