ತುಮಕೂರು: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಸನಾತನ ಧರ್ಮವನ್ನು (sanathana Dharma) ನಾಶ ಮಾಡಬೇಕು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಒಳಗಾದ ಬೆನ್ನಿಗೇ ಈಗ ಮತ್ತೊಬ್ಬ ನಾಯಕರು ಹಿಂದು ಧರ್ಮದ (Hindu Religion) ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ʻʻಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದ್ದರು ಎಂಬುದೇ ಪ್ರಶ್ನೆʼʼ ಎಂದಿದ್ದಾರೆ ಗೃಹ ಸಚಿವ ಜಿ. ಪರಮೇಶ್ವರ್ (G parameshwar). ತುಮಕೂರಿನ ಕೊರಟಗೆರೆಯಲ್ಲಿ ಶಿಕ್ಷಕರ ದಿನಾಚರಣೆ (Teachers day) ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಈ ಮಾತು ಹೇಳಿದರು.
ʻʻಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಹಿಂದೂ ಧರ್ಮ ಯಾವಾಗ ಹುಟ್ಟಿತು? ಯಾರು ಹುಟ್ಟಿಸಿದರು ಹಿಂದೂ ಧರ್ಮವನ್ನು? ಎಂಬುದಕ್ಕೆ ಇನ್ನೂ ಪ್ರಶ್ನಾರ್ಥಕ ಚಿಹ್ನೆಯೇ ಇದೆ. ಪ್ರಶ್ನಾರ್ಥಕ ಚಿಹ್ನೆಯನ್ನು ಯಾರೂ ತೆಗೆದಿಲ್ಲʼʼ ಎಂದರು ಪರಮೇಶ್ವರ್.
ʻʻಬೌದ್ಧಧರ್ಮ ನಮ್ಮ ದೇಶದಲ್ಲಿ ಹುಟ್ಟಿತು. ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತು. ಇಸ್ಲಾಂ ಧರ್ಮ ಬಂದಿದೆ ಮತ್ತು ಕ್ರೈಸ್ತ ಧರ್ಮ ಹೊರಗಡೆಯಿಂದ ಬಂದಿದೆ. ಎಲ್ಲವೂ ಸ್ಪಷ್ಟವಾಗಿದೆʼʼ ಎಂದು ಹೇಳಿದ ಪರಮೇಶ್ವರ್, ʻʻಎಲ್ಲಾ ಧರ್ಮಗಳ ಸಾರಾಂಶ ಒಂದೇ, ಮನುಕುಲಕ್ಕೆ ಒಳ್ಳೆದಾಗಬೇಕು ಎನ್ನುವುದುʼʼ ಎಂದಿದ್ದಾರೆ ಜಿ. ಪರಮೇಶ್ವರ್.
ಉದಯನಿಧಿ ಹೇಳಿಕೆಯ ಬೆಂಕಿ ಇನ್ನೂ ಆರಿಲ್ಲ
ಸನಾತನ ಧರ್ಮವೆಂದರೆ ಸೋಂಕು ರೋಗದ ತರ. ಅದನ್ನು ನಿರ್ಮೂಲನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಉದಯನಿಧಿ ಹೇಳಿದ್ದರು. ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಅನೇಕ ರಾಜಕಾರಣಿಗಳು, ಧಾರ್ಮಿಕ, ಸಾಂಸ್ಕೃತಿಕ ತಜ್ಞರು ಈ ಹೇಳಿಕೆಯನ್ನು ಖಂಡಿಸಿದ್ದರು. ಜತೆಗೆ ಅವರ ಹೇಳಿಕೆಯನ್ನು ಕೆಲವರು ಸಮರ್ಥಿಸಿದ್ದರು.
ಉದಯನಿಧಿ ಒಬ್ಬ ಪೆಂಗ ಎಂದ ನಟ ಪ್ರಥಮ್
ಚಾಮರಾಜನಗರ: ಸನಾತನದ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ಚಿತ್ರ ನಟ ಪ್ರಥಮ್ ಖಂಡಿಸಿದ್ದಾರೆ. ಚಾಮರಾಜನಗರದಲ್ಲಿ ನಟ ಪ್ರಥಮ್ ಪ್ರತಿಕ್ರಿಯೆ ನೀಡಿ, ʻʻಏನು ಹೇಳಿದ್ರು ಸರಿ ಅನ್ನೋ ಮನೋಭಾವ ಒಳ್ಳೆಯದಲ್ಲ. ಉದಯನಿಧಿ ಪೆಂಗನ ತರ ಮಾತಾಡೋದನ್ನು ಬಿಡಬೇಕುʼʼ ಎಂದರು.
ʻʻಉಡಾಫೆ ಹೇಳಿಕೆಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತದೆ ಅನ್ನುವ ಜ್ಞಾನ ಇರಬೇಕು. ಅವರ ಹೇಳಿಕೆಯಿಂದ ಎಷ್ಟೋ ಜನರ ಭಾವನೆಗಳಿಗೆ ನೋವಾಗಿದೆ. ಅವರಿಗೆ ಇಷ್ಟ ಇಲ್ಲದಿದ್ದರೆ ಧರ್ಮವನ್ನು ಪೂಜಿಸುವುದು ಬೇಡ. ಯಾರೇ ಆಗಲಿ ತಮ್ಮ ತಮ್ಮ ಧರ್ಮವನ್ನು ಗೌರವಿಸಬೇಕು. ಆದ್ರೆ ಈ ರೀತಿ ಮಾತನಾಡುವುದು ತಪ್ಪು ಎಂದರು.
ʻʻಉದಯನಿಧಿ ತಪ್ಪಾಗಿ ಮಾತಾಡಿದ ಬಳಿಕ ಕ್ಷಮೆ ಕೇಳ್ತಾರೆ ಅನ್ಕೊಂಡಿದ್ದೆ. ಆದ್ರೆ ಮತ್ತೆ ಅದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಅಂತವರ ಬಗ್ಗೆ ಮಾತಾಡೋದೆ ಬಿಡಬೇಕು ಅನ್ನಿಸ್ತಿದೆʼʼ ಎಂದರು ಪ್ರಥಮ್.