Site icon Vistara News

ಕೊರೊನಾ ನಿರ್ವಹಣೆ ಸೂಪರ್‌: ಆರೋಗ್ಯ ಸಚಿವ ಸುಧಾಕರ್‌ ಅವರನ್ನು ಹಾಡಿ ಹೊಗಳಿದ ಕಾಂಗ್ರೆಸ್‌ ನಾಯಕ ಜಿ. ಪರಮೇಶ್ವರ್‌

G parameshwar- sudhakar

ತುಮಕೂರು: ರಾಜಕಾರಣಿಗಳು ಪರಸ್ಪರ ಬೈದಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಕಾಲದಲ್ಲಿ ಕಾಂಗ್ರೆಸ್‌ ನಾಯಕ, ಮಾಜಿ ಡಿಸಿಎಂ ಜಿ. ಪರಮೇಶ್ವರ್‌ ಅವರು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ಹಾಡಿ ಹೊಗಳಿದ್ದಾರೆ. ಅದರ ಜತೆಯೇ ಈ ಮಾತುಗಳಲ್ಲಿ ಯಾವುದೇ ರಾಜಕೀಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪದ ಬುಕ್ಕಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಈ ಹೊಗಳಿಕೆಯ ಮಾತುಗಳು ಕೇಳಿಬಂದವು.

ʻʻನಾವು ಬಹಳ ಸೂಕ್ಷ್ಮ ದೃಷ್ಟಿಯಿಂದ ಸರ್ಕಾರ ಹಾಗೂ ಸಚಿವರನ್ನು ಸಿಎಂ ಅನ್ನು ಗಮನಿಸುತ್ತಿದ್ದೇವೆ. ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುತ್ತೇವೆ. ಆದರೆ, ಒಬ್ಬ ಸಚಿವರು ಇಡೀ ಕರ್ನಾಟಕದ ಜನ ಸಮುದಾಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಅಂದರೆ ಅದು ನಮ್ಮ ಡಾ. ಸುಧಾಕರ್ ಅವರುʼʼ ಎಂದು ಹೇಳಿದರು ಡಾ. ಪರಮೇಶ್ವರ್‌.

ʻʻಇದು ಅವರನ್ನು ಹೊಗಳುವಂತಹ ಪ್ರಶ್ನೆಯಲ್ಲ, ಕೋವಿಡ್ ಬಂದಂತಹ ಸಂದರ್ಭದಲ್ಲಿ ಅವರಿಗೆ ಬಂದಂತಹ ಸವಾಲು ಬಹುಶಃ ಸಿಎಂಗೂ ಬಂದಿಲ್ಲ. ದಿನನಿತ್ಯ ಜನ ಬೈಯುತ್ತಿದ್ದರು. ಕೆಲವರು ರಾಜ್ಯದಲ್ಲಿ ಕೋವಿಡ್ ಬಂದೇ ಇಲ್ಲ, ಸುಳ್ಳು ಸುಳ್ಳು ಹೇಳ್ತಿದ್ದಾರೆ, ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ ಅಂತ ಬೈಯುತ್ತಿದ್ದರು. ಕುರಿ ತರಹ ನಮಗೆ ಮಾಸ್ಕ್ ಹಾಕಿದ್ದಾರೆ ಅನ್ನುತ್ತಿದ್ದರುʼʼ ಎಂದು ನೆನಪಿಸಿದರು.

ʻʻಸುಧಾಕರ್‌ ಅವರು ಕಠಿಣವಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಲಕ್ಷಾಂತರ ಜನ ಸಾಯುತ್ತಿದ್ದರು. ಅನ್ನೋದನ್ನು ಮರಿಬೇಡಿʼʼ ಎಂದು ಹೇಳಿದರು ಪರಮೇಶ್ವರ್‌.

ʻʻಮತ್ತೆ ಕೊರೊನಾ ಬರುತ್ತಿದೆ ಎಂಬ ಆತಂಕ ಶುರುವಾಗಿದೆ. ಸಿಎಂ ಮತ್ತು ಸುಧಾಕರ್ ಅವರು ಸದನದಲ್ಲಿ ಉತ್ತರ ನೀಡುವಾಗ ನಾವು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಜನರನ್ನು ಸಾಯುವುದಕ್ಕೆ ಬಿಡುವುದಿಲ್ಲ ಅನ್ನೋ ಮಾತುಗಳನ್ನು ಆಡಿದ್ದಾರೆ. ಸಿಎಂ ಹಾಗೂ ಸುಧಾಕರ್ ಅವರು ಒಳ್ಳೇ ಕೆಲಸ ಮಾಡುವ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದನೆ ಮಾಡುವುದು ನಮ್ಮ ಕರ್ತವ್ಯʼʼ ಎಂದು ಹೇಳಿದರು ಮಾಜಿ ಡಿಸಿಎಂ.

ʻʻಕೋವಿಡ್ ಪಕ್ಷ ನೋಡಿ ಬರಲ್ಲ. ಬಿಜೆಪಿಗೆ ಜಾಸ್ತಿ ಬರುತ್ತೆ, ಕಾಂಗ್ರೆಸ್‌ಗೆ ಕಡಿಮೆ ಬರುತ್ತೆ ಅಂತೇನಿಲ್ಲ. ಅಥವಾ ಕಾಂಗ್ರೆಸ್‌ಗೆ ಜಾಸ್ತಿ ಬಂದು ಬಿಜೆಪಿಗೆ ಕಮ್ಮಿ ಬರುತ್ತೆ ಅಂತಲ್ಲ. ಜನತಾ ದಳನೂ ಮಧ್ಯದಲ್ಲಿ ಇದೆ ಅಲ್ವಾ, ಅವರಿಗೂ ಬರಬೇಕಲ್ವಾ, ಅವರಿಗೂ ಬರುತ್ತೇ ಅನ್ನೋಕ್ಕೆ ಆಗಲ್ಲʼʼ ಎಂದು ಚಟಾಕಿ ಹಾರಿಸಿದರು.

ಇದನ್ನೂ ಓದಿ | Coronavirus | ಅಗತ್ಯವಿದ್ದರೆ ಸಭೆ ಮಾಡೋಣ ಎಂದ ಸುಧಾಕರ್‌, ಅಶೋಕ್‌ ಕರೆದಿದ್ದ ಕೊರೊನಾ ಸಭೆ ಮುಂದೂಡಿಕೆ

Exit mobile version