ಬೆಂಗಳೂರು: ಜಿ20 ಶೃಂಗದ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ (ETWG) ಸಭೆಯು ಫೆ.5ರಿಂದ ಫೆ.7ರವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (G20 Meeting) ನಡೆಯಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮೊದಲನೆಯ ETWG ಸಭೆ ಇದಾಗಿದೆ.
ಈ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳು, 9 ವಿಶೇಷ ಆಹ್ವಾನಿತ ಅತಿಥಿ ರಾಷ್ಟ್ರಗಳು ಸೇರಿದಂತೆ ಒಟ್ಟು 150ಕ್ಕೂ ಅಧಿಕ ಗಣ್ಯರು ಭಾಗವಹಿಸಲಿದ್ದಾರೆ. ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲೆಂಡ್, ನೈಜೀರಿಯಾ, ಓಮನ್, ಸಿಂಗಾಪುರ, ಅರಬ್ ಸಂಯುಕ್ತ ಸಂಸ್ಥಾನ(ಯುಎಇ) ಮತ್ತು ಸ್ಪೇನ್ ಅತಿಥಿ ರಾಷ್ಟ್ರಗಳಾಗಿರಲಿವೆ.
ವಿಶ್ವ ಬ್ಯಾಂಕ್, ಏಷ್ಯನ್ ಡೆವಲೆಪ್‌ಮೆಂಟ್ ಬ್ಯಾಂಕ್, ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ಮತ್ತು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಲಿವೆ. ಹಾಗೆಯೇ ಸಭೆಗೆ ಸಂಬಂಧಿಸಿದ ಇಲಾಖೆಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಕೂಡ ಪಾಲ್ಗೊಳ್ಳಲಿದ್ದಾರೆ.
ತಂತ್ರಜ್ಞಾನವನ್ನು ಬಳಸಿಕೊಂಡು ಶಕ್ತಿ ಪರಿವರ್ತನೆ, ಇಂಧನ ದಕ್ಷತೆ, ಇಂಧನ ಭದ್ರತೆ, ಭವಿಷ್ಯಕ್ಕಾಗಿ ಇಂಧನ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ‘ಕಾರ್ಬನ್ ಕ್ಯಾಪ್ಚರ್, ಯುಟಿಲೈಸೇಶನ್ ಮತ್ತು ಸ್ಟೋರೇಜ್ (ಸಿಸಿಯುಎಸ್)’ ಕುರಿತು ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸೆಮಿನಾರ್ ಕೂಡ ನಡೆಸಲಾಗುವುದು.
ಭಾರತವು 2022ರ ಡಿಸೆಂಬರ್ 1ರಿಂದ 2023ರ ನವೆಂಬರ್ 30ರವರೆಗೆಗೆ ಜಿ20 ಶೃಂಗದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಈ ಅವಧಿಯಲ್ಲಿ ದೇಶಾದ್ಯಂತ 200ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ.