ವಿಜಯನಗರ: ಸಂಡೂರಿನ ಕಲಾಕೇಂದ್ರದ 450ಕ್ಕೂ ಹೆಚ್ಚು ಜನ ಲಂಬಾಣಿ ಮಹಿಳೆಯರು (Lambani Women) 1750 ವೈವಿಧ್ಯಮಯ ಕಸೂತಿಗಳನ್ನು (Embroidery) ಸಿದ್ಧಪಡಿಸಿದ್ದು, ಇದು ಈಗ ವಿಶ್ವ ಗಿನ್ನಿಸ್ ದಾಖಲೆ (Guinness World Record) ಬರೆದಿದೆ. ಗಿನ್ನಿಸ್ ರೆಕಾರ್ಡ್ ತಂಡವು ಸ್ಥಳದಲ್ಲಿಯೇ ಪ್ರಮಾಣ ಪತ್ರವನ್ನು ನೀಡಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಹಂಪಿಯಲ್ಲಿ ಲಂಬಾಣಿ ತಂಡಕ್ಕೆ ವಿತರಣೆ ಮಾಡಿದರು. ಹಂಪಿಯಲ್ಲಿ (Hampi) ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ (G20 Summit) ಈ ಕಸೂತಿ ಕಲೆಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈ ಮೂಲಕ ಸಾಂಸ್ಕೃತಿಕ ಕಲೆಗೆ ಒತ್ತು ನೀಡಲಾಗಿದೆ.
ಹಂಪಿಯ ಎದುರು ಬಸವಣ್ಣ ಮಂಟಪದ (Hampi Basavanna Maptapa) ಬಳಿ ಜವಳಿ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಂಡೂರಿನ ಕಲಾಕೇಂದ್ರದ 450ಕ್ಕೂ ಹೆಚ್ಚು ಜನ ಲಂಬಾಣಿ ಮಹಿಳೆಯರು 1750 ವೈವಿಧ್ಯಮಯ ಕಸೂತಿಗಳನ್ನು ಸಿದ್ಧಪಡಿಸಿದ್ದರು. ಇದನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಕಸೂತಿಗಳು ಒಂದಕ್ಕಿಂತ ಒಂದು ಚೆಂದವಾಗಿದ್ದವು. ಅಲ್ಲದೆ, ಒಂದೇ ವೇದಿಕೆಯಲ್ಲಿ ಕಸೂತಿಗಳನ್ನು ಸಿದ್ಧಪಡಿಸಿರುವುದು ಗಿನ್ನಿಸ್ ದಾಖಲೆಗೂ ಪಾತ್ರವಾಯಿತು.
ಇದನ್ನೂ ಓದಿ: Jain muni Murder : ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ: ಡಾ. ಜಿ. ಪರಮೇಶ್ವರ
ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ಅದ್ಧೂರಿ ಸ್ವಾಗತ
ಭಾರಿ ಭದ್ರತೆಯೊಂದಿಗೆ ಜಿ-20 ರಾಷ್ಟ್ರಗಳ ಪ್ರತಿನಿಧಿಗಳನ್ನು ಹಂಪಿಗೆ ಬರಮಾಡಿಕೊಳ್ಳಲಾಯಿತು. ಲಂಬಾಣಿ ನೃತ್ಯದ (Lambani Dance) ಮೂಲಕ ಜಿ- 20 ಪ್ರತಿನಿಧಿಗಳಿಗೆ ಸ್ವಾಗತ ಕೋರಲಾಯಿತು. ಲಂಬಾಣಿ ನೃತ್ಯಕ್ಕೆ ಜಿ 20 ರಾಷ್ಟ್ರಗಳ ಪ್ರತಿನಿಧಿಗಳು ಮನಸೋತರು. ಮೊಬೈಲ್ ಹಿಡಿದು ಲಂಬಾಣಿ ನೃತ್ಯವನ್ನು ಸೆರೆಹಿಡಿದರು. ಕೆಲವರು ಸೆಲ್ಫಿ ಪಡೆದುಕೊಂಡರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಲಂಬಾಣಿ ಕಸೂತಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಲಂಬಾಣಿ ಕಸೂತಿ ಕಲೆಯನ್ನು ಜಿ-20 ಪ್ರತಿನಿಧಿಗಳ 56 ಪ್ರತಿನಿಧಿಗಳು ವೀಕ್ಷಿಸಿದರು.
ಅಲ್ಲದೆ, ಇಲ್ಲಿ ಕರಕುಶುಲ ಹಾಗೂ ಜವಳಿ ಕಸೂತಿ ಕಲೆಗಾರರು ಸಹ ಪಾಲ್ಗೊಂಡಿದ್ದರು. ಜಿ20 ಶೃಂಗಸಭೆಯ ಮೂಲಕ ಜಾಗತಿಕವಾಗಿ ಸಾಂಪ್ರದಾಯಿಕ ಲಂಬಾಣಿ ಕಸೂತಿಗೆ ಮನ್ನಣೆ ದೊರಕಿಸುವ ಉದ್ದೇಶವನ್ನು ಹೊಂದಲಾಗಿದೆ. ಇದರ ಭಾಗವಾಗಿ ಸೋಮವಾರ ಗಮನ ಸೆಳೆಯುವಲ್ಲಿ ಯಶಸ್ವಿಯೂ ಆದಂತೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ (International Market) ಸೌಲಭ್ಯ ದೊರಕಿಸುವ ಜತೆಗೆ ಸಾಂಪ್ರದಾಯಿಕ ಬದುಕಿನ ಆರ್ಥಿಕ ಬಲವರ್ಧನೆಗೂ ಇದು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಗಿನ್ನಿಸ್ ರೆಕಾರ್ಡ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶ್ಲಾಘನೆ
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹಂಪಿ ಸಾಮ್ರಾಜ್ಯವು ಭವ್ಯ ಇತಿಹಾಸವನ್ನು ಹೊಂದಿದೆ. ಹಂಪಿಯ ಕಲೆ, ಸಾಂಸ್ಕೃತಿಕ ವೈಭವ ಅಂದಿನ ಕಾಲದಿಂದ ಇಂದಿನವರೆಗೂ ಪ್ರಸ್ತುತವಾಗಿದೆ. ಇದೊಂದು ಶ್ರೀಮಂತ ಸಾಮ್ರಾಜ್ಯ. ಐತಿಹಾಸಿಕ ಹಂಪಿಯಲ್ಲಿ ಜಿ 20 ಸಭೆ ನಡೆಯುತ್ತಿರೋದು ಹೆಮ್ಮೆಯ ವಿಷಯವಾಗಿದೆ. ಲಂಬಾಣಿ ಕಲೆ ಗಿನ್ನಿಸ್ ರೆಕಾರ್ಡ್‌ಗೆ ಸೇರಿರುವುದು ಶ್ಲಾಘನೀಯವಾಗಿದೆ. ಮೋದಿ ಸರ್ಕಾರ ಕಲೆ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳಿಗೆ ಸದಾ ಬೆಂಬಲವಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಸಭೆ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸ್ಥಳೀಯ ಸಂಸ್ಕೃತಿ, ಪರಂಪರೆ ಗುರುತು, ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಸೆಯಿತ್ತು. ಅದರ ಅನುಸಾರವಾಗಿ ಇಲ್ಲಿ ಸಾಂಸ್ಕೃತಿಕ ಗುಂಪು ಕೆಲಸ ಮಾಡಿದೆ ಎಂದು ಹೇಳಿದರು.
ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿ!
ಕರ್ನಾಟಕದ ಹಂಪಿಯಲ್ಲಿ ಇಂದು ಆಯೋಜಿಸಲಾದ ಮೂರನೇ ʻಜಿ-20 ಸಂಸ್ಕೃತಿ ಕಾರ್ಯಪಡೆʼ (ಸಿಡಬ್ಲ್ಯೂಜಿ) ಸಭೆಯ ಉದ್ಘಾಟನಾ ಸಮಾರಂಭವು ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯ ಒಂದು ಭಾಗವಷ್ಟೇ ಆಗಿರದೆ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿಯೂ ಆಗಿದೆ. ಜತೆಗೆ ಭವಿಷ್ಯದಲ್ಲಿ ಕರ್ನಾಟಕದ ಕಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿಯೂ ಈ ಕಾರ್ಯಕ್ರಮ ಸಾಕ್ಷಿ ಆಯಿತು. ಲಂಬಾಣಿ ಸಮಾಜದ ವಿಶೇಷ ಉಡುಗೆ, ಕಸೂತಿಯನ್ನು ಜಗತ್ತಿಗೇ ಪ್ರದರ್ಶಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಲಂಬಾಣಿ ಕಸೂತಿ ಪಟ್ಟಿಗಳ ಅತಿದೊಡ್ಡ ಪ್ರದರ್ಶನ!
ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇಗುಲ (Hampi Virupaksheshwara temple) ಮುಂಭಾಗ ಇರುವ ಬಸವಣ್ಣ ಮಂಟಪದ ಬಳಿ ಲಂಬಾಣಿ ಸಮುದಾಯದ ಕಸೂತಿ ಪ್ರದರ್ಶನ ನಡೆಯಿತು. ಲಂಬಾಣಿ ಕಸೂತಿ ಪಟ್ಟಿಗಳ ಅತಿದೊಡ್ಡ ಪ್ರದರ್ಶನವನ್ನು ರಚಿಸುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಪ್ರವೇಶವನ್ನೂ ಪಡೆಯಲಾಯಿತು. ಸಂಡೂರು ಕುಶಲ ಕಲಾ ಕೇಂದ್ರದೊಂದಿಗೆ ನಿಕಟ ಸಂಬಂಧ ಹೊಂದಿರುವ ಲಂಬಾಣಿ ಸಮುದಾಯದ 450ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳು ಜಿ-20ಯಲ್ಲಿ ಸುಮಾರು 1,750 ಲಂಬಾಣಿ ಕಸೂತಿ ಪಟ್ಟಿಗಳ ಕೃತಿಗಳನ್ನು ಪ್ರದರ್ಶಿಸಿ ಗಿನ್ನಿಸ್ ರೆಕಾರ್ಡ್ ದಾಖಲೆಯನ್ನು ಬರೆದರು.
ಇದನ್ನೂ ಓದಿ: Surya Namaskar: 5,200 ಮೀ. ಎತ್ತರ ಪರ್ವತದ ಮೇಲೆ 108 ಸೂರ್ಯ ನಮಸ್ಕಾರ! ವಿಶಿಷ್ಟ ಸಾಧನೆ ಮಾಡಿದ ಯುವಕ
ಹಂಪಿ ವೈಭವ ಸವಿಯುವ ಜಿ 20 ಪ್ರತಿನಿಧಿಗಳು
ಜಿ 20 ಪ್ರತಿನಿಧಿಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿ ಸಮೂಹ ಸ್ಮಾರಕಗಳಾದ – ವಿಜಯ ವಿಠ್ಠಲ ದೇವಸ್ಥಾನ, ರಾಯಲ್ ಎನ್‌ಕ್ಲೋಸರ್ ಮತ್ತು ಎದುರು ಬಸವಣ್ಣ ಪಾರಂಪರಿಕ ತಾಣಗಳಿಗೆ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ. ತುಂಗಭದ್ರ ನದಿಯಲ್ಲಿ ವಿದೇಶಿ ಪ್ರತಿನಿಧಿಗಳನ್ನು ತೆಪ್ಪ ಸವಾರಿಗೆ ಕರೆದೊಯ್ಯಲಾಗುತ್ತದೆ. ಶ್ರೀ ಪಟ್ಟಾಭಿರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎದುರು ಇರುವ ಬಸವಣ್ಣ ದೇಗುಲ ಬಳಿ ಸೌಂಡ್ಸ್ ಆ್ಯಂಡ್ ಲೈಟ್ಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಒಟ್ಟಿನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿರುವ ಲಂಬಾಣಿ ಸಮಾಜದ ಕಲೆಯ ಸೊಬಗನ್ನು ಈ ವೇಳೆ ಜಾಗತಿಕವಾಗಿ ಪ್ರದರ್ಶಿಸಲಾಯಿತು.