ಗದಗ: ಕನ್ನಡ ಸಾಹಿತ್ಯ ಲೋಕಕ್ಕೆ ಇಡೀ ಜೀವನವನ್ನೇ ಸವೆಸಿದ, ನಡೆದಾಡುವ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿರುವ ಹಿರಿಯ ಮಠಾಧೀಶರಾದ ಮುಂಡರಗಿ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ (Dr Annadaneshwara Mahashivayogi Swamiji) ಮುಂಡರಗಿ ತಾಲೂಕು ಆಡಳಿತವು ಅಗೌರವ ತೋರಿದೆ ಎಂದು ಜನಾಕ್ರೋಶ ವ್ಯಕ್ತವಾಗಿದೆ. ನವೆಂಬರ್ 1ರಂದು ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ (Karnataka Rajyotsava) ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮಹಾ ಸ್ವಾಮೀಜಿಯವರ ಹೆಸರನ್ನು ಸಾಮಾನ್ಯರ ಸಾಲಿನಲ್ಲಿ ಮುದ್ರಣ ಮಾಡಿರುವುದು ಈಗ ತಾಲೂಕು ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಸ್ವಾಮೀಜಿಯವರಿಗೆ ತೋರಿದ ಅಗೌರವ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಮುಂದೆ ಇಂತಹ ಅಚಾತುರ್ಯ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ.
ಗದಗ ಜಿಲ್ಲೆ ಮುಂಡರಗಿ ಸಂಸ್ಥಾನಮಠದ ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ನಡೆದಾಡುವ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿದ್ದಾರೆ.ನೂರಾರು ಕೃತಿಗಳ ರಚನೆ, ಪ್ರಕಟಣೆ ಸೇರಿದಂತೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅನನ್ಯವಾಗಿದೆ.
ಇದನ್ನೂ ಓದಿ: Fraud Case : ಎನ್ವಿ ಗ್ರೀನ್ ಕಂಪನಿ ಮಾಲೀಕನ ವಿರುದ್ಧ ಎಫ್ಐಆರ್; ಕೋಟಿ ವಂಚಿಸಿದ್ರಾ ಅಶ್ವತ್ಥ್ ಹೆಗ್ಡೆ?
ಡಾ. ಅನ್ನದಾನೀಶ್ವರ ಶ್ರೀಗಳು ಮಠಾಧೀಶರಾದರೂ ಧಾರ್ಮಿಕ ಕ್ಷೇತ್ರದ ಜತೆ ಜತೆಗೆ ಶಿಕ್ಷಣ, ಸಾಹಿತ್ಯ, ಕೃಷಿ, ಸಮಾಜ ಸೇವೆ, ವಿಜ್ಞಾನ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಗಳು ರಚಿಸಿರುವ ಗ್ರಂಥಗಳು ಇಂಗ್ಲಿಷ್ ಭಾಷೆ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ. ಡಾ. ಅನ್ನದಾನೀಶ್ವರ ಸ್ವಾಮೀಜಿಗಳ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ, ಹಲವಾರು ಪ್ರಶಸ್ತಿ ಪುರಸ್ಕಾರಗಳು ಶ್ರೀಗಳನ್ನು ಅರಸಿ ಬಂದಿವೆ.
ಮಹಿಳಾ ವಿವಿಯಲ್ಲಿ ಜಗದ್ಗುರು ಅನ್ನದಾನೀಶ್ವರ ಅಧ್ಯಯನ ಪೀಠ
ಡಾ. ಅನ್ನದಾನೀಶ್ವರ ಶ್ರೀಗಳ ಸಮಗ್ರ ಸಾಹಿತ್ಯದ ಮೇಲೆ 19 ಸಂಪುಟಗಳು ಬಿಡುಗಡೆಗೊಂಡಿದ್ದು, ಶ್ರೀಗಳ ಸಾಹಿತ್ಯದ ಮೇಲೆ ಈಗಾಗಲೇ ಐದು ಜನ ಪಿಎಚ್.ಡಿ ಪದವಿ ಹಾಗೂ ಹಲವು ಜನ ಎಂಫಿಲ್ ಪದವಿ ಪಡೆದಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜಗದ್ಗುರು ಅನ್ನದಾನೀಶ್ವರ ಅಧ್ಯಯನ ಪೀಠವನ್ನು ತೆರೆಯಲಾಗಿದೆ.
ಮುಂಡರಗಿಗೆ ನೀಡಿದ ಕೊಡುಗೆ ಅನನ್ಯ
ಇದೇ ಮುಂಡರಗಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ, ವಿಜ್ಞಾನ ಭವನಕ್ಕೆ ಹಾಗೂ ಆಸ್ಪತ್ರೆ, ಕ್ರೀಡಾಂಗಣ, ಸೇರಿದಂತೆ ಹಲವು ಗ್ರಾಮಗಳಲ್ಲಿನ ಶಾಲಾ ಕಾಲೇಜು, ವಸತಿ ನಿಲಯದ ಕಟ್ಟಡಗಳಿಗೆ ಉಚಿತವಾಗಿ ಭೂಮಿ ಸೇರಿದಂತೆ ಹಣದ ಸಹಾಯ, ಸಹಕಾರವನ್ನು ಡಾ. ಅನ್ನದಾನೀಶ್ವರ ಸ್ವಾಮೀಜಿಗಳು ನೀಡಿದ್ದಾರೆ.
ಆಮಂತ್ರಣ ಪತ್ರಿಕೆಯಲ್ಲಿ ಕೊನೆಯ ಸಾಲು!
ಈಗ ಮುಂಡರಗಿ ತಾಲೂಕು ಆಡಳಿತ ವ್ಯವಸ್ಥೆ ಹಾಗೂ ತಾಲೂಕು ರಾಜ್ಯೋತ್ಸವ ಸಮಿತಿಯು ಡಾ. ಅನ್ನದಾನೀಶ್ವರ ಶ್ರೀಗಳ ಹೆಸರನ್ನು ಕೊನೆಯ ಸಾಲಿನಲ್ಲಿ ಹಾಕಿ ಪ್ರಮಾದ ಎಸಗಿದೆ. ಶ್ರೀಗಳ ಹೆಸರನ್ನು ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮೊದಲಿನ ಸಾನಿಧ್ಯ ಸ್ಥಾನವನ್ನು ನೀಡುವುದು ಇದುವರೆಗೆ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಆದರೆ, ಈಗ ಆಮಂತ್ರಣ ಪತ್ರಿಕೆಯಲ್ಲಿ ಕಾರ್ಯಕ್ರಮದ ಪಟ್ಟಿಯ ಕೊನೇ ಸಾಲಿನಲ್ಲಿ ಮುದ್ರಿಸಿರುವುದು ಭಕ್ತವೃಂದದ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Chaitra Fraud Case : ಚೈತ್ರಾ ವಂಚನೆ ಪ್ರಕರಣ; ಸಿಸಿಬಿ ತನಿಖೆ ಪೂರ್ಣ, ಮುಂದಿನ ವಾರ ಚಾರ್ಜ್‌ಶೀಟ್?
ಅಲ್ಲದೆ, ಈ ವಿಚಾರದ ಬಗ್ಗೆ ರಾಜ್ಯೋತ್ಸವಕ್ಕೆ ಆಗಮಿಸಿದ್ದ ಕಾರ್ಯಕ್ರಮದಲ್ಲಿಯೇ ಸ್ವತಃ ಡಾ. ಅನ್ನದಾನೀಶ್ವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಅಪಮಾನವು ಕನ್ನಡ ತಾಯಿಗೆ ಮಾಡಿರುವುದಾಗಿದೆ ಎಂದು ಹೇಳಿದ್ದರು.
ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು
ಈ ವಿಚಾರಕ್ಕೆ ತಾಲೂಕಿನ ದಂಡಾಧಿಕಾರಿಯನ್ನು ಪ್ರಶ್ನೆ ಮಾಡಿದಾ, ಸರ್ಕಾರಿ ಶಿಷ್ಟಾಚಾರದ ಪ್ರಕಾರವಾಗಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಕಳೆದ ವರ್ಷದ ಆಮಂತ್ರಣ ಪತ್ರಿಕೆಯನ್ನು ನೋಡಿಯೇ ಈ ವರ್ಷವೂ ಅದೇ ರೀತಿ ಮುದ್ರಿಸಲಾಗಿದೆ. ಮುಂಬರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಶಿಷ್ಟಾಚಾರ ನಿಯಮವನ್ನು ಬದಲಾಯಿಸಿಕೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ನಿಡಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ
ಈಗ ಡಾ. ಅನ್ನದಾನೀಶ್ವರ ಶ್ರೀಗಳ ಭಕ್ತವೃಂದದವರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು, ಇನ್ನು ಮುಂದೆ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶ್ರೀಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲೇನಿದೆ?
ಮುಂಡರಗಿಯ ಪರಮ ಪೂಜ್ಯ ಜಗದ್ಗುರು ನಾಡೋಜ ಡಾ|| ಅನ್ನದಾನೀಶ್ವರ ಮಹಾಶಿವಯೋಗಿಗಳು ಈ ನಾಡು ಕಂಡ ಅಪರೂಪ ಜಗದ್ಗುರುಗಳು. ತ್ರಿಭಾಷಾ ಪಂಡಿತರಾದ ಜಗದ್ಗುರುಗಳು ಈ ನಾಡಿನ ಸರ್ವಶ್ರೇಷ್ಠ ಸಾಹಿತಿಗಳಾಗಿ ಒಂದು ನೂರಾ ಐವತ್ತಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿ ಈ ನಾಡಿನ ಸಾಹಿತ್ಯ ದೇವಿಯ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ಪೂಜ್ಯರ ಸಾಹಿತ್ಯವನ್ನು ಕುರಿತು ಐದು ಜನ ವಿದ್ವಾಂಸರು ಮಹಾಪ್ರಬಂಧಗಳನ್ನು ರಚಿಸಿ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಶ್ರೀ ಮಠದಿಂದ ಸುಮಾರು ಎರಡು ನೂರಾ ಅರವತ್ತು ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಜಗದ್ಗುರುಗಳು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.
ಶಿಕ್ಷಣ ಪ್ರೇಮಿಗಳಾದ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಶೈಕ್ಷಣಿಕವಾಗಿ ತೀರಾ ಹಿಂದುಳಿದ ಮುಂಡರಗಿಯಲ್ಲಿ ಆರಂಭ ಮಾಡಿ ಬಡ ಮಕ್ಕಳಿಗೆ ನಿರಂತರವಾಗಿ ಜ್ಞಾನದಾಸೋಹ ಹಾಗೂ ಉಚಿತ ಪ್ರಸಾದ ದಾಸೋಹವನ್ನು ನೀಡಿ ಈ ಭಾಗ ಬಡ ವಿದ್ಯಾರ್ಥಿಗಳ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಪೂಜ್ಯರ ಅಹರ್ನಿಶಿ ಪ್ರಯತ್ನದಿಂದ ಇಂದು ನಾಡಿನಾದ್ಯಾಂತ ಮೂವತ್ತೆರಡು ಅಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಅವರ ಶಿಕ್ಷಣ ಪ್ರೇಮ ಹಾಗೂ ಕಾರ್ಯದಕ್ಷತೆಗೆ ಕನ್ನಡಿ ಹಿಡಿಯುತ್ತದೆ. ಇಂತಹ ವಿದ್ಯಾ ಸಂಸ್ಥೆಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದರಿಂದ ಅನೇಕರಿಗೆ ಉದ್ಯೋಗವನ್ನು ನೀಡಿ ಅವರ ಬಾಳಿಗೆ ದಾರಿ ದೀಪವಾಗಿದ್ದಾರೆ.
ಕೋಡಗೈ ದಾನಿಗಳಾದ ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸದಾ ಧನಸಹಾಯ ನೀಡುವುದರೊಂದಿಗೆ ಸುಮಾರು ಒಂದು ನೂರು ಎಕರೆ ಭೂಮಿಯನ್ನು ದಾನ ಮಾಡಿ ಈ ಭಾಗದ ಪುಣ್ಯಪುರುಷರೆಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಧರ್ಮ ಪ್ರಸಾರ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡು ಭಕ್ತ ಜನರನ್ನು ಧರ್ಮದ ಹಾದಿಯಲ್ಲಿ ನಡೆಸಿದ್ದಾರೆ. ಸಮಾಜ ಸೇವೆಯೆ ಶಿವಪೂಜೆ ಎಂದು ಭಾವಿಸಿ ಹಗಲಿರುಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಆದರ್ಶವಾಗಿದೆ.
ಇದನ್ನೂ ಓದಿ: Karnataka Politics : 6 ತಿಂಗಳಾದರೂ ಸುಧಾರಿಸದ ಸರ್ಕಾರ, ಹಿಡಿತವಿಲ್ಲದ ಸಿಎಂ; ಬಿಜೆಪಿಯಿಂದ ಉಗ್ರ ಹೋರಾಟ: ಬಿಎಸ್‌ವೈ
ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಗಳನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕನ್ನಡ ನಾಡಿಗೆ ಇಂತಹ ಮಹದುಪಕಾರವನ್ನು ಮಾಡಿದ ಪರಮ ಪೂಜ್ಯ ಜಗದ್ಗುರುಗಳಿಗೆ 2023ರ ನವೆಂಬರ್ 1ರಂದು ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೂಕ್ತ ಸ್ಥಾನ ಮಾನವನ್ನು ನೀಡದೆ, ತಾಲೂಕು ಆಡಳಿತ ಅವರಿಗೆ ಅಗೌರವವನ್ನು ಮಾಡಿದೆ. ಈ ಕಾರ್ಯವೈಖರಿಯಿಂದ ಪೂಜ್ಯ ಜಗದ್ಗುರುಗಳ ಮನಸ್ಸಿಗೆ ನೋವಾಗಿದೆ. ಈ ಭಾಗದ ಭಕ್ತರಿಗೂ ಬಹಳಷ್ಟು ಬೇಸರವಾಗಿದೆ. ಆದ ಕಾರಣ ಭವಿಷ್ಯದಲ್ಲಿ ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಸರ್ಕಾರಿ ಕಾರ್ಯಕ್ರಮಗಳನ್ನು ಸಂಯೋಜಿಸಬೇಕೆಂದು ಈ ಭಾಗದ ಸಮಗ್ರ ಜನತೆಯ ಪರವಾಗಿ ತಮ್ಮಲ್ಲಿ ನಮ್ರವಾಗಿ ವಿನಂತಿಸುತ್ತೇವೆ” ಎಂದು ಮುಂಡರಗಿಯ ಭಕ್ತ ಸಮೂಹವು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದೆ.