ಗದಗ: ಇದೊಂದು ತಮ್ಮದಲ್ಲದ ತಪ್ಪಿಗೆ ಪರದಾಟ ನಡೆಸುತ್ತಿರುವ ಅಪರೂಪದ ಪ್ರಕರಣವಾಗಿದೆ. ಗದಗಿನಲ್ಲಿ ಆಂಧ್ರಪ್ರದೇಶ ಪ್ರವಾಸಿಗರು (Andhra Pradesh tourists) ಲಾಕ್ ಆಗಿದ್ದಾರೆ. ಒಂದಿಡೀ ರಾತ್ರಿ ಆರ್‌ಟಿಒ ಕಚೇರಿಯಲ್ಲಿಯೇ ಕಳೆಯುವಂತಾಗಿದೆ. ಇಷ್ಟಾದರೂ ಅವರಿಗೆ ಅಲ್ಲಿಂದ ಮುಕ್ತಿ ಸಿಕ್ಕಿಲ್ಲ. ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ (Andhra Pradesh CM Jagan Mohan Reddy) ಅವರ ತವರು ಕ್ಷೇತ್ರದ ಮಂದಿ ಪ್ರವಾಸಕ್ಕೆಂದು ಬಂದಿದ್ದಾಗ ಗದಗ ಆರ್‌ಟಿಒ ಪೊಲೀಸರು ಬಸ್ ಅನ್ನು ತಡೆದಿದ್ದಾರೆ. ಈ ವೇಳೆ ಬಸ್‌ಗೆ ಸರಿಯಾದ ದಾಖಲೆಗಳು ಇಲ್ಲದೆ ಇದ್ದಿದ್ದರಿಂದ ಸೀಝ್ (Bus seized) ಮಾಡಿ ಆರ್‌ಟಿಒ ಕಚೇರಿಗೆ ತಂದಿದ್ದಾರೆ. ಅನಿವಾರ್ಯವಾಗಿ ಪ್ರವಾಸಿಗರೂ ಅಲ್ಲಿಗೆ ಬಂದು ಕೂರುವಂತಾಗಿದೆ.
ಈಗ ಗದಗ ಆರ್‌ಟಿಒ ಕಚೇರಿಯಲ್ಲಿ ಆಂಧ್ರ ಪ್ರದೇಶ ಪುಲುವೆಂದುಲಾ ವಿಧಾನಸಭಾ ಕ್ಷೇತ್ರದ 49 ಮಂದಿ ಗೋಳಾಡುವಂತಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ಆಂಧ್ರ ಪ್ರದೇಶದಿಂದ 10 ದಿನಗಳ ಕಾಲ ಪ್ರವಾಸವನ್ನು ಕೈಗೊಂಡಿದ್ದರು.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಪಟ್ಟಣದ ನಿವಾಸಿಗಳು ಇವರಾಗಿದ್ದು, ಹೈದರಾಬಾದ್, ಕರ್ನಾಟಕ, ಗೋವಾ, ತಮಿಳುನಾಡು ರಾಜ್ಯ ಪ್ರವಾಸ ಮಾಡಲು ಮುಂದಾಗಿದ್ದರು. ಹೈದರಾಬಾದ್‌ನಿಂದ ರಾಯಚೂರು ಮಾರ್ಗವಾಗಿ ಗದಗ ನಗರಕ್ಕೆ ಈ ಬಸ್ ಎಂಟ್ರಿಯಾಗಿತ್ತು. ಹೆದ್ದಾರಿಯಲ್ಲಿ ಬಸ್ ನಿಲ್ಲಿಸಿದ ಆರ್‌ಟಿಒ ಪೊಲೀಸರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ದಾಖಲೆಗಳೇ ಸರಿ ಇಲ್ಲ!
AP03 TE8520 ನಂಬರ್ ಪ್ಲೇಟ್‌ವುಳ್ಳ ಬಸ್ ಇದಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದಾಗ ಚಾರ್ಸಿ, ಎಂಜಿನ್ ನಂಬರ್ ಅನ್ನೇ ತಿರುಚಿರುವ ಸಂಗತಿ ಗೊತ್ತಾಗಿದೆ. ಇದರ ಜತೆಗೆ ಉಳಿದ ದಾಖಲೆಗಳೂ ಸರಿ ಇರಲಿಲ್ಲ. ಈ ಬಗ್ಗೆ ಬಸ್ ಚಾಲಕ, ನಿರ್ವಾಹಕರನ್ನು ಕೇಳಿದರೆ ಸರಿಯಾಗಿ ಉತ್ತರ ನೀಡಲಿಲ್ಲ. ಹೀಗಾಗಿ ಹೆದ್ದಾರಿಯಲ್ಲಿಯೇ ಬಸ್ ಅನ್ನು ಸೀಝ್ ಮಾಡಿದ ಅಧಿಕಾರಿಗಳು, ಆ ಬಸ್ ಅನ್ನು ಆರ್‌ಟಿಒ ಕಚೇರಿಗೆ ತಂದರು.
ಪ್ರವಾಸಿಗರ ಪರದಾಟ
ಈ ಎಲ್ಲ ಬೆಳವಣಿಗೆ ನಡುವೆ ಅಕ್ಷರಶಃ ನಲುಗಿರುವುದು ಆಂಧ್ರ ಪ್ರದೇಶದ ಪ್ರವಾಸಿಗರು. ಅವರು ಖುಷಿ ಖುಷಿಯಿಂದ ಪ್ರವಾಸಕ್ಕೆ ಹೊರಟಿದ್ದರು. ಆದರೆ, ಬಸ್ ದಾಖಲೆ ಸರಿ ಇಲ್ಲದಿರುವ ಬಗ್ಗೆ ಮಾಹಿತಿ ಇಲ್ಲದೇ ಇದ್ದರಿಂದ ಈಗ ಫಜೀತಿಗೆ ಸಿಲುಕಿದ್ದಾರೆ. ಬಸ್‌ಗೆ ಬಾಡಿಗೆ ಕೊಟ್ಟು ಬುಕ್ ಮಾಡಲಾಗಿದೆ. ಈಗ ಬೇರೆ ರಾಜ್ಯದಲ್ಲಿ ಬಸ್ ಸೀಜ್ ಆದರೆ ತಾವು ಏನು ಮಾಡುವುದು ಎಂಬ ಯೋಚನೆ ಎದುರಾಯಿತು. ಹೀಗಾಗಿ ಮಂಗಳವಾರ ಮಧ್ಯಾಹ್ನವೇ ಬಸ್ ಅನ್ನು ಸೀಜ್ ಮಾಡಲಾಗಿದ್ದರೂ ಬಸ್ ಜತೆಗೆ ಪ್ರಯಾಣಿಕರೂ ಆರ್‌ಟಿಒ ಕಚೇರಿಗೆ ಬಂದು ಕುಳಿತಿದ್ದರು. ನಮಗೆ ಬಸ್ ಅನ್ನು ಬಿಟ್ಟುಕೊಡಿ, ಇಲ್ಲವೇ ಬೇರೆ ಬಸ್ ಅನ್ನು ವ್ಯವಸ್ಥೆ ಮಾಡಿ ಎಂದು ಆರ್‌ಟಿಒ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಆರ್‌ಟಿಒ ಅಧಿಕಾರಿಗಳು ಇದ್ಯಾವುದಕ್ಕೂ ಜಗ್ಗುತ್ತಿಲ್ಲ. ದಾಖಲೆಗಳನ್ನು ತಿರುಚುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಹೀಗಾಗಿ ಈ ಬಸ್ ಅನ್ನು ಸೀಝ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.